Advertisement

ನರಗುಂದದಲ್ಲಿ ಮತ್ತೇ ಕಾಣಿಸಿಕೊಂಡ ಭೂಕುಸಿತ

11:12 AM Jun 09, 2019 | Team Udayavani |

ನರಗುಂದ: ಕಳೆದ 2008 ಹಾಗೂ 2009ರಲ್ಲಿ ಪಟ್ಟಣದ ನಾಲ್ಕು ಬಡಾವಣೆಗಳ ಸಾವಿರಾರು ನಿವಾಸಿಗಳನ್ನು ಆತಂಕಕ್ಕೆ ಸಿಲುಕಿಸಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ಭೂಕುಸಿತ ನರಗುಂದದಲ್ಲಿ ಮತ್ತೇ ಕಾಣಿಸಿಕೊಂಡಿದೆ.

Advertisement

ಶನಿವಾರ ಬೆಳಗ್ಗೆ 6ರ ವೇಳೆಗೆ ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶವಾದ ಸವದತ್ತಿ ರಾಜ್ಯ ಹೆದ್ದಾರಿಯಲ್ಲೇ ಭೂಕುಸಿತ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಬೆಳಗಿನ ಜಾವ ಕೆಲಕಾಲ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿತ್ತು. ಬಳಿಕ ಸುದ್ದಿ ತಿಳಿದ ಪುರಸಭೆ ಅಧಿಕಾರಿಗಳು ಭೂಕುಸಿತ ಉಂಟಾದ ಜಾಗದಲ್ಲಿ ಟ್ರ್ಯಾಕ್ಟರ್‌ ಮೂಲಕ ಮುರಂ ಹಾಕಿ ಮುಚ್ಚಿದ್ದಾರೆ.

ಪಟ್ಟಣದ ಅರ್ಭಾಣ ಓಣಿಯ ಸಮೀಪ ಸವದತ್ತಿ ರಾಜ್ಯ ಹೆದ್ದಾರಿಯ ಡಾಂಬರೀಕರಣ ಕಾಲು ಭಾಗದಷ್ಟು ಒಳ ಭಾಗದಲ್ಲೇ ಭೂಕುಸಿತ ಉಂಟಾಗಿದೆ. ಸುಮಾರು ನಾಲ್ಕೈದು ಅಡಿ ಡಾಂಬರೀಕರಣ ಕುಸಿದು, ಒಳಗೆ ಒಂದು ಅಡಿ ಆಳದಲ್ಲೇ ಅಂತರ್ಜಲ ಕಾಣಿಸಿಕೊಂಡಿದೆ.

ಏನಿದು ಭೂಕುಸಿತ?: 2008 ಹಾಗೂ 2009ರಲ್ಲಿ ತೀವ್ರ ಅತಿವೃಷ್ಟಿಯಿಂದ ಪಟ್ಟಣದ ದಂಡಾಪುರ, ಕಸಬಾ, ಅರ್ಭಾಣ ಮತ್ತು ದೇಸಾಯಿ ಬಾವಿ ಓಣಿಗಳಲ್ಲಿ ಭೂಕುಸಿತ ಕಂಡು ಬಂದಿತ್ತು. ಈ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಮತ್ತು ಜನವಸತಿ ಮನೆಗಳ ಒಳಭಾಗದಲ್ಲೇ ಕುಸಿತ ಉಂಟಾಗಿ ಸಾಕಷ್ಟು ಆಸ್ತಿಪಾಸ್ತಿ ಹಾನಿಗೊಂಡಿತ್ತು. ಇದು ಇಡೀ ಪ್ರದೇಶಗಳ ಜನರನ್ನು ತೀವ್ರ ಆತಂಕಕ್ಕೆ ದೂಡಿತ್ತು. ಭೂಕುಸಿತ ವ್ಯಾಪಕವಾಗಿ ವಿಸ್ತರಿಸಿದ ಪರಿಣಾಮ ಅಂದಿನ ಶಾಸಕ ಸಿ.ಸಿ. ಪಾಟೀಲರ ಮನವಿ ಮೇರೆಗೆ ಅಂದಿನ ಉಪಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸ್ಥಳಕ್ಕಾಗಮಿಸಿ ಸ್ಥಳದಲ್ಲೇ ಈ ಕುರಿತು ಸಮಗ್ರ ಪರಿಶೀಲನೆಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು.

ವಿಜ್ಞಾನಿಗಳ ಅಧ್ಯಯನ: ಆಗ ಪುರಸಭೆ ಸಹಯೋಗದಲ್ಲಿ ವಿಜ್ಞಾನಿಗಳ ತಂಡ ನರಗುಂದಕ್ಕೆ ಆಗಮಿಸಿ ಇದರ ಸಂಪೂರ್ಣ ಅಧ್ಯಯನ ಮಾಡಿ ಪುರಸಭೆಗೆ ವರದಿ ಸಲ್ಲಿಸಿತ್ತು. ಮುಖ್ಯವಾಗಿ ಪಟ್ಟಣದ ಕುಡಿಯುವ ನೀರಿನ ಕೆಂಪಗೆರಿ ಜಲಾಶಯ ಸೋರಿಕೆ, ಗುಡ್ಡದ ಮೇಲ್ಭಾಗದಲ್ಲಿ ಮೂಡಿದ ಬಿರುಕು ಹಾಗೂ ಚರಂಡಿಗಳ ಮೂಲಕ ಜಲ ಇಂಗುವಿಕೆಯಿಂದ ಅಂತರ್ಜಲ ಹೆಚ್ಚಳಗೊಂಡು ಇದು ಭೂಕುಸಿತಕ್ಕೆ ದಾರಿಯಾಗಿದೆ ಎಂದು ಅಧ್ಯಯನ ವರದಿ ಸಲ್ಲಿಸಿದ್ದು ಸ್ಮರಿಸಬಹುದು.

Advertisement

ಬಳಿಕ ಪುರಸಭೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು ಬಿಟ್ಟರೆ ಅಂತರ್ಜಲ ಹೆಚ್ಚಳದಿಂದ ಉಂಟಾಗುವ ಭೂಕುಸಿತ ತಡೆಗಟ್ಟುವ ಪ್ರಮುಖ ಕ್ರಮಗಳು ಕಾಣಿಸಿಕೊಳ್ಳಲಿಲ್ಲ. ಮೇಲಾಗಿ ನಿರಂತರ ತುಂಬಿ ಹರಿಯುವ ಇಲ್ಲಿನ ದೇಸಾಯಿ ಬಾವಿ ಓಣಿಯ ಬಾವಿಯೊಂದರಲ್ಲಿ ಇಂದಿಗೂ ಮೇಲ್ಮಟ್ಟಕ್ಕಿರುವ ನೀರನ್ನು ನಿರಂತರ ಪಂಪ್‌ಸೆಟ್ ಮೂಲಕ ಹೊರ ಹಾಕುತ್ತಿರುವುದು ಭೂಕುಸಿತಕ್ಕೆ ಕಾರಣವಾದ ಅಂತರ್ಜಲ ಹೆಚ್ಚಳಕ್ಕೆ ನಿದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next