ಮಳೆಗಾಲ ಬಂತೆಂದರೆ ಸಾಕು ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭೂಕುಸಿತಗಳು ಸಂಭವಿಸಿ ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುವುದು ಸಾಮಾನ್ಯ. ಕಳೆದ ಕೆಲವು ವರ್ಷಗಳಿಂದೀಚೆಗೆ ಪ್ರತೀ ಮಳೆಗಾಲದಲ್ಲಿ ಭೂ ಕುಸಿತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಸಾಗಿವೆ. ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅಧ್ಯಕ್ಷತೆಯ ತಜ್ಞರನ್ನು ಒಳಗೊಂಡ ಭೂಕುಸಿತ ಅಧ್ಯಯನ ಸಮಿತಿ ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಭೂಕುಸಿತ ತಡೆ ಸಂಬಂಧ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸರಕಾರ ಕ್ಕೆ ಸಲ್ಲಿಸಿದೆ.
ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ ಮತ್ತು ಭಾರತೀಯ ಭೂಗರ್ಭ ಸರ್ವೇಕ್ಷಣ ಸಂಸ್ಥೆ ಪಶ್ಚಿಮ ಘಟ್ಟದಲ್ಲಿ ಈವರೆಗೆ ಸಂಭವಿಸಿರುವ ಭೂಕುಸಿತಗಳ ಸಮಗ್ರ ಅಧ್ಯಯನ ನಡೆಸಿ ನೀಡಿದ ವರದಿಯ ಪ್ರಕಾರ ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳ 23 ತಾಲೂಕುಗಳಲ್ಲಿ ಭವಿಷ್ಯದಲ್ಲೂ ಭೂಕುಸಿತದ ಸಾಧ್ಯತೆಗಳಿವೆ. ಇದರ ಜತೆಯಲ್ಲಿ ತಜ್ಞರ ಸಮಿತಿಯ ಪ್ರಕಾರ ಈ ತಾಲೂಕುಗಳ ಜತೆಯಲ್ಲಿ ಇನ್ನೂ ನಾಲ್ಕು ತಾಲೂಕುಗಳಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ. ಈ ಪೈಕಿ ಬೆಳಗಾವಿಯ ಖಾನಾಪುರವೂ ಸೇರಿರುವುದು ತುಸು ಆತಂಕಕಾರಿ ವಿಷಯವೇ.
ತಜ್ಞರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಮುಖ್ಯವಾಗಿ ಭೂಕುಸಿತ ಸಂಭಾವ್ಯ ಪ್ರದೇಶಗಳು ಮತ್ತು ಭೂಕುಸಿತದ ಕುರಿತು ಮುನ್ಸೂಚನೆ ನೀಡಲು ತಾಂತ್ರಿಕ ವ್ಯವಸ್ಥೆ ರೂಪಣೆ, ಪ್ರಾಕೃತಿಕ ಸಂಪತ್ತಿನ ಉಳಿವು, ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿ ಸ್ಥಳೀಯ ಸಸ್ಯ ಪ್ರಬೇಧಗಳ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸುವುದು, ಮೇಲ್ಮೆ„ಯಲ್ಲಿ ನೀರು ಹರಿಯುವ ಸಹಜ ವ್ಯವಸ್ಥೆಗಳನ್ನು ಉಳಿಸುವುದರ ಜತೆಯಲ್ಲಿ ಅವುಗಳ ಸಮರ್ಪಕ ನಿರ್ವಹಣೆ ಹಾಗೂ ಅನಧಿಕೃತವಾಗಿ ಬಳಸಲಾಗುತ್ತಿರುವ ಮರ ಕಡಿಯುವ, ಭೂ ಕೊರೆತದ ಯಂತ್ರಗಳು ಮತ್ತು ಗಣಿಗಳಲ್ಲಿ ಬಳಸಲಾಗುವ ಸ್ಫೋಟಕಗಳ ಬಳಕೆಯ ನಿಯಂತ್ರಣಕ್ಕಾಗಿ ಕಾನೂನು ಮತ್ತು ಸಕ್ರಮ ಪ್ರಾಧಿಕಾರ ರಚನೆಯ ಶಿಫಾರಸುಗಳನ್ನು ಮಾಡಲಾಗಿದೆ.
ಅಭಿವೃದ್ಧಿ ಯೋಜನೆಗಳು, ಸರಕಾರಿ ನಿವೇಶನಗಳ ಕೊರತೆಯ ನೆಪದಲ್ಲಿ ಅರಣ್ಯ ನಾಶ ಮತ್ತು ಅರಣ್ಯ ಪ್ರದೇಶಗಳ ಅತಿಕ್ರಮಣ ಎಗ್ಗಿಲ್ಲದೆ ಸಾಗಿದ್ದು ಇದರಿಂದಾಗಿ ಭೂಕುಸಿತಗಳು ಸಂಭವಿಸುತ್ತಿವೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅದು ಸರಕಾರ ವಿರಲಿ, ಖಾಸಗಿಯವರಾಗಿರಲಿ ಬಹುತೇಕ ಗುಡ್ಡಗಳು ಸಮತಟ್ಟಾಗಿವೆ. ಆಧುನಿಕ ಯಂತ್ರಗಳಿಂದ ಈ ಎಲ್ಲ ಗುಡ್ಡಗಳ ಕಲ್ಲುಬಂಡೆಗಳನ್ನು ಉರುಳಿಸಿ ಬಯಲು ಪ್ರದೇಶವನ್ನಾಗಿ ಮಾರ್ಪಡಿಸಲಾಗಿದೆ. ಇನ್ನು ಅರಣ್ಯ ಪ್ರದೇಶದ ತಪ್ಪಲಿನ ನಿವಾಸಿಗಳು ಹಂತಹಂತವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕೊಳ್ಳುತ್ತಲೇ ಬಂದಿದ್ದಾರೆ. ನದಿ, ತೋಡು, ಕೆರೆ.. ಹೀಗೆ ಎಲ್ಲ ಜಲಮೂಲಗಳು ಮತ್ತು ನೀರು ಹರಿಯುವ ಜಾಗಗಳ ಮೇಲಣ ಮಾನವ ದಾಳಿ ನಿರಂ ತರವಾಗಿ ಸಾಗಿದೆ.
ಸರಕಾರ ಮತ್ತು ಸ್ಥಳೀಯ ಜನತೆ ಪರಸ್ಪರ ಕೈಜೋಡಿಸಿ ಕಾರ್ಯೋನ್ಮುಖವಾದಲ್ಲಿ ಸಮಿತಿಯ ಪ್ರತಿಯೊಂದೂ ಶಿಫಾರಸುಗಳನ್ನು ಅನುಷ್ಠಾನಗೊಳಿಸಬಹುದಾಗಿದೆ. ಈ ವಿಚಾರದಲ್ಲಿ ಸರಕಾರ ಒಂದಿಷ್ಟು ಬದ್ಧತೆ, ಇಚ್ಛಾಶಕ್ತಿಯನ್ನು ಪ್ರದರ್ಶಿಸಿದಲ್ಲಿ ಭೂಕುಸಿತವನ್ನು ತಡೆಗಟ್ಟುವುದು ಅಸಾಧ್ಯವಾದ ಕಾರ್ಯವೇನಲ್ಲ. ಸರಕಾರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇವೆರಡೂ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಂಡು ಒಂದಿಷ್ಟು ದೂರದೃಷ್ಟಿ ಮತ್ತು ವಿವೇಚನೆಯಿಂದ ಮುಂದಡಿ ಇಡುವುದು ಹೆಚ್ಚು ಸೂಕ್ತ ಮತ್ತು ಪರಿಣಾಮಕಾರಿ ನಡೆಯಾದೀತು.