Advertisement

ಮರು ನಿರ್ಮಾಣ ಅಕ್ಷರಶಃ ಸವಾಲು: ಪುಷ್ಪಗಿರಿ ತಪ್ಪಲಿನಲ್ಲಿ ಜಲಪ್ರಳಯ, ಗುಡ್ಡ, ಕೃಷಿ ಭೂಮಿ ಬೋಳು

08:53 AM Aug 04, 2022 | Team Udayavani |

ಸುಬ್ರಹ್ಮಣ್ಯ : ಪ್ರಕೃತಿ ಮುನಿದರೆೆ ಮನುಕುಲದ ನಾಶಕ್ಕೆ ದಾರಿ ಎಂಬುದಕ್ಕೆ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಸಂಭವಿ ಸುತ್ತಿರುವ ಭೂಕುಸಿತಗಳೇ ಸ್ಪಷ್ಟ ಸಾಕ್ಷಿ .

Advertisement

ಮೋಡ ಮುಸುಕಿದಂಥ ವಾತಾ ವರಣ, ಒಮ್ಮೆ ಜೋರು ಮತ್ತೂಮ್ಮೆ ತುಂತುರು ಮಳೆ, ಭೋರ್ಗರೆಯುವ ಹೊಳೆ, ಈಗಲೂ ಕುಸಿಯುತ್ತಿರುವ ಬೆಟ್ಟ. ಎರಡು ಮೂರು ದಿನಗಳಿಂದ ಇಂಥ ಬೆಳವಣಿಗೆಗಳಿಗೆ ಪುಷ್ಪಗಿರಿ ಪರ್ವತ ಶ್ರೇಣಿಯ 5 ಗ್ರಾಮಗಳು ಸಾಕ್ಷಿಯಾಗಿವೆ. ಕಡಮಕಲ್ಲು (ಕಲ್ಮಕಾರು) ನಿಂದ ಐನ ಕಿದು ಕಲ್ಲಾಜೆಯವರೆಗೆ ತೆರಳಿದಾಗ ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಪರಿಸರದ ಮರುಸ್ಥಾಪನೆ, ರಸ್ತೆ ಮರು ನಿರ್ಮಾಣ ಅಕ್ಷರಶಃ ಸವಾಲೆನಿಸಿದೆ.

ಎರಡು ದಿನಗಳ ಕಾಲ ಸಂಭವಿಸಿದ ಭೀಕರ ಕುಸಿತದಿಂದ ಈ ಗ್ರಾಮಗಳು ಬಹುತೇಕ ತತ್ತರಿಸಿವೆ. ನದಿ ದಂಡೆಯ ಮನೆಗಳು, ಕೃಷಿ ಭೂಮಿ ಜಲಾವೃತ ವಾಗಿವೆ. 2018ರಲ್ಲಿ ಈ ಭಾಗದಲ್ಲಿ ಜಲಪ್ರಳಯ ಪರಿಸ್ಥಿತಿ ಸಂಭವಿಸಿತ್ತು. ಆ ಆಘಾತದಿಂದ ಹೊರಬರುವ ಮೊದಲೇ ಮತ್ತೂಂದು ದುರಂತ ನಡೆದಿದೆ.

ರಾತೋರಾತ್ರಿ ಇದುವರೆಗೆ ಕೇಳರಿಯದ ರೀತಿಯ ಈ ಘಟನೆ ಘಟಿಸಿದ್ದು, ಬೆಳಗಾಗುವುದರೊಳಗೆ ಗ್ರಾಮಗಳ ಭೌಗೋಳಿಕ ಚಿತ್ರಣವೇ ಬದಲಾಗಿದೆ. ರವಿವಾರದ ಜಲಸ್ಫೋಟಕ್ಕೆ ಕಲ್ಮಕಾರು ಭಾಗದ ಹಲವು ಭಾಗಗಳಿಗೆ ಸಂಪರ್ಕಿಸುವ ಸೇತುವೆಗಳು ಕೊಚ್ಚಿ ಹೋಗಿದ್ದವು. ಆ ಬಳಿಕ ಸುರಿದ ಭಾರಿ ಮಳೆಯಿಂದ ಕಡಮಕಲ್ಲು ಭಾಗದ ನದಿಗಳು ತುಂಬಿ ಹರಿದಿವೆ. ರಾತ್ರಿ ಕೊಂಚ ಮಳೆ ಕಡಿಮೆಯಾದರೂ ತಡರಾತ್ರಿ ಭಾರೀ ಸದ್ದಿನೊಂದಿಗೆ ಹೊಳೆಯಲ್ಲಿ ಪ್ರವಾಹ ಬಂದಿತ್ತು. ಅರ್ಧ ತಾಸಿನೊಳಗೆ ಹೊಳೆಯ ನೀರೆಲ್ಲಾ ಮಣ್ಣಿನ ಬಣ್ಣಕ್ಕೆ ತಿರುಗಿತು. ನೂರಾರು ಬೃಹತ್‌ ಗಾತ್ರದ ಮರಗಳು ಬುಡ ಸಮೇತ ಗುಡ್ಡದ ಮೇಲಿನಿಂದ ಉರುಳಿ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದವು. ಹಾಗಾಗಿ ಅಪಾರ ಪ್ರಮಾಣದಲ್ಲಿ ಮಣ್ಣು ಮತ್ತು ಮರಗಳು ನದಿ ದಂಡೆಯ ತೋಟಗಳಲ್ಲಿ ರಾಶಿಬಿದ್ದಿವೆ. ದಾರಿಯುದ್ದಕ್ಕೂ ವಿದ್ಯುತ್‌ ದೀಪಗಳು ಮುರಿದು ಬಿದ್ದಿವೆ. ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ರಸ್ತೆಗಳು ಬಹುತೇಕ ಹಾನಿಯಾಗಿವೆ.

ಗುಡ್ಡದ ಮೇಲೆ ಇನ್ನೂ 3 ಕಡೆ ಕುಸಿಯುವ ಭೀತಿಯಿದೆ. ಯಾವಾಗ ಬೇಕಾದರೂ ದುರ್ಘ‌ಟನೆ ಘಟಿಸಬಹುದು. ಪ್ರತೀ ಭೂ ಕುಸಿತ ನೂರಕ್ಕೂ ಅಧಿಕ ಎಕ್ರೆ ಪ್ರದೇಶಕ್ಕೆ ವಿಸ್ತರಿಸುತ್ತದೆ ಎನ್ನುತ್ತಾರೆ ಸ್ಥಳೀಯರಾದ ವೆಂಕಪ್ಪ.

Advertisement

ಭಾರೀ ಗಾತ್ರದ ಮರಗಳು ಕಡಮಕಲ್ಲು ಹೊಳೆಯುದ್ದಕ್ಕೂ ವ್ಯಾಪಿಸಿ ಅದರ ಕೆಳಗಿನ ಭಾಗದ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಐನೆಕಿದು ಭಾಗದ ಡ್ಯಾಂ, ಸೇತುವೆಗಳಿಗೆ ಹಾನಿಯ ನ್ನುಂಟು ಮಾಡಿದೆ. ನದಿ ದಂಡೆ ಮೇಲಿನ ಮನೆಗಳು ಜಲಾವೃತವಾಗಿವೆ.ಇಷ್ಟೊಂದು ಭೀಕರವಾದ ಕೃತಕ ನೆರೆ ಬಂದಿದ್ದನ್ನು ಕಂಡಿಲ್ಲ, ಕೇಳಿಲ್ಲ ಎನ್ನುತ್ತಾರೆ ಸ್ಥಳೀಯರಾದ ಯಶವಂತ ಬಿಳಿಮಲೆ.

ಹಲವು ಮನೆಗೆ ನೀರು ನುಗ್ಗಿ ಬಟ್ಟೆ, ದಿನಸಿ ಸಾಮಗ್ರಿ ನೀರು ಪಾಲಾಗಿದೆ. ಮನೆಯೊಳಗಿನ ಕೆಸರು ಮಿಶ್ರಿತ ನೀರು, ಮಣ್ಣು ತೆರವಿಗೆ ನಿವಾಸಿಗಳು ಹರಸಾಹಸಪಡುತಿದ್ದಾರೆ. ಹರಿಹರ ಮುಖ್ಯ ಪೇಟೆಯ ಫ್ಯಾನ್ಸಿ ಅಂಗಡಿ, ದೇಗುಲದ ಕಾಣಿಕೆ ಹುಂಡಿ ಕುರುಹು ಇಲ್ಲದಂತೆ ಕೊಚ್ಚಿ ಹೋಗಿದೆ. ಎಣ್ಣೆಮಿಲ್‌ನಲ್ಲಿದ್ದ 2 ಸಾವಿರ ಲೀ. ಕೊಬ್ಬರಿ ಎಣ್ಣೆ ಹಾಗೂ ಇತರ ವಸ್ತುಗಳು ನಾಶವಾಗಿವೆ.

ಕಂದಮ್ಮನ ಜತೆ ರಾತ್ರಿ ಜಾಗರಣೆ
ಆ. 1ರಂದು ನಡು ರಾತ್ರಿ ನಡೆದ ಜಲಪ್ರವಾಹಕ್ಕೆ ಹಲವು ಮನೆಗಳು ಜಲಾವೃತ ಗೊಂಡಿದ್ದವು. ಕೆಲವರಿಗೆ ಮನೆಯೊಳಗೆ ನೀರು ಬಂದದ್ದೇ ಗೊತ್ತಾಗಲಿಲ್ಲ. ನಡು ರಾತ್ರಿ ಪಳ್ಳತ್ತಡ್ಕ ಎಂಬಲ್ಲಿ ಯೋಗೀಶ್‌ ಕುಕ್ಕುಂದ್ರಡ್ಕ ಎಂಬವರ ಮನೆ ಜಲ ದಿಗ್ಬಂಧನಕ್ಕೆ ಒಳಗಾಗಿ ರಕ್ಷಣೆ ಸಾಧ್ಯವಾಗದೆ ದಂಪತಿ ರಾತ್ರಿಯಿಡೀ ತಮ್ಮ ಎಳೆಯ ಕಂದಮ್ಮನ ಜತೆಗೆ ಮನೆಯ ಟೆರೇಸ್‌ ಮೇಲೆ ನಿಂತು ಕಳೆದಿದ್ದಾರೆ. ಹರಿಹರ ಮುಖ್ಯ ಪೇಟೆಯ ನಿವಾಸಿಯೊಬ್ಬರ 2 ಲಕ್ಷ ರೂ. ಹಣ ನೆರೆ ಪಾಲಾಗಿದೆ.

– ಬಾಲಕೃಷ್ಣ ಭೀಮಗುಳಿ
– ದಯಾನಂದ ಕಲ್ನಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next