Advertisement

ರಾ. ಹೆದ್ದಾರಿ 169 ಚತುಷ್ಪಥ ಕಾಮಗಾರಿ: ಭೂಮಾಲಕರ ಸಮಸ್ಯೆ ಶೀಘ್ರ ಇತ್ಯರ್ಥ: ಸಚಿವ ಸುನಿಲ್‌

02:07 AM Jun 14, 2022 | Team Udayavani |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ-ಸಾಣೂರು ಭಾಗದ ಚತುಷ್ಪಥ ಕಾಮಗಾರಿಗೆ ಕುರಿತಂತೆ ಕೃಷಿ ಭೂಮಿ ಮತ್ತು ಪರಿವರ್ತಿತ ಭೂಮಿ ಎಂದು ತಾರತಮ್ಯ ಮಾಡಿ ಹತ್ತು ಪಟ್ಟು ಕಡಿಮೆ ಪರಿಹಾರ ನೀಡುತ್ತಿರುವ ರಾ. ಹೆ. ಪ್ರಾಧಿಕಾರದ ಧೋರಣೆಯಿಂದ ಆಗುವ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥ ಪಡಿಸುವುದಾಗಿ ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿಯ ನಿಯೋಗದವರು ಸಚಿವರು ಹಾಗೂ ಸಂಸದ ನಳಿನ್‌ ಕುಮಾರ್‌, ಶಾಸಕ ಡಾ| ವೈ. ಭರತ್‌ ಶೆಟ್ಟಿ ಮತ್ತಿತರರನ್ನು ಭೇಟಿ ಮಾಡಿ ತಮಗಾದ ಅನ್ಯಾಯದ ಬಗ್ಗೆ ವಿವರಿಸಿದರು.

ಪದವು ಮತ್ತು ಉಳಿಪಾಡಿ ಗ್ರಾಮಗಳ ಮತ್ತೆ ಕೆಲವು ಗ್ರಾಮಗಳ ಅವಾರ್ಡ್‌ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಬಾಕಿ ಇದ್ದು ಆದಷ್ಟು ಬೇಗ ಇತ್ಯರ್ಥ ಮಾಡಲಿದ್ದೇವೆ ಎಂದು ಯೋಜನಾ ಧಿಕಾರಿ ತಿಳಿಸಿದರು.

ಈ ತನಕ ಭೂಸ್ವಾ ಧೀನ ಆಗಿರುವ ಭೂಮಿಯ ವಿವರಗಳು ಮತ್ತು ಪರಿಹಾರ ನೀಡಿರುವ ಮತ್ತು ನೀಡಲು ಬಾಕಿ ಇರುವ ಭೂಮಿಯ ವಿವರ, ರಾಜ್ಯ ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿರುವ ಸುಮಾರು 270 ಜನರಿಗೆ ಸಂಬಂಧಿ ಸಿದ ಭೂಮಿಯ ವಿವರಗಳನ್ನು ಸಭೆಯಲ್ಲಿ ನೀಡಲಾಯಿತು.

ತಡೆಯಾಜ್ಞೆ ತೆರವಿಗೆ ಕ್ರಮ
ಸಾಣೂರು ಗ್ರಾಮದಿಂದ ಪ್ರಾರಂಭಿಸಿ ಕುಲಶೇಖರ ತನಕ 92 ಹೆಕ್ಟೇರ್‌ ಖಾಸಗಿ ಜಮೀನಿಗೆ ನೋಟಿಫಿಕೇಶನ್‌ ಆಗಿದ್ದು ಇದರಲ್ಲಿ 65 ಹೆಕ್ಟೇರ್‌ ಜಮೀನಿಗೆ ಅವಾರ್ಡ್‌ ಆಗಿದೆ. 27 ಹೆಕ್ಟೇರ್‌ ಜಮೀನಿಗೆ ಅವಾರ್ಡ್‌ ಇನ್ನೂ ಬಾಕಿ ಇದೆ. ಅವಾರ್ಡ್‌ ಆಗಿರುವಂತಹ 65 ಹೆಕ್ಟೇರ್‌ನಲ್ಲಿ 30 ಹೆಕ್ಟೇರ್‌ ಜಮೀನಿಗೆ ತಡೆಯಾಜ್ಞೆ ಇದೆ. ಜೂ.16ರ ಒಳಗೆ ಎಲ್ಲಾ ತಡೆಯಾಜ್ಞೆಗಳಿಗೆ ಕೋರ್ಟಿನಲ್ಲಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಯೋಜನಾಧಿಕಾರಿ ವಿವರಿಸಿದರು.

Advertisement

ಪರಿಹಾರದ ಮೊತ್ತವನ್ನು ನಿರ್ಧರಿಸುವಾಗ ಗ್ರಾಮೀಣ ಭಾಗದಲ್ಲಿ 12.5 ಸೆಂಟ್ಸ್‌ ಮತ್ತು ನಗರ ವ್ಯಾಪ್ತಿಯಲ್ಲಿ 20 ಸೆಂಟ್ಸ್‌ ಜಾಗಗಳ ರಿಜಿಸ್ಟ್ರೇಷನ್‌ ಬೆಲೆಯನ್ನು ಗಣನೆಗೆ ತೆಗೆದುಕೊಂಡಿಲ್ಲ, ಆದರೆ ಹಿಂದೆ ಕುಂದಾಪುರ-ಸುರತ್ಕಲ್‌ ಭಾಗದ ಹೈವೇ ಭೂಸ್ವಾಧೀನದಲ್ಲಿ ಅದನ್ನು ಪರಿಗಣಿಸಲಾಗಿತ್ತು, ಇಲ್ಲಿ ಅದನ್ನು ಕೈಬಿಟ್ಟಿರುವುದರಿಂದ ಭೂಮಾಲಕರಿಗೆ ವಂಚನೆಯಾಗಿದೆ ಎಂದು ಹೋರಾಟ ಸಮಿತಿಯವರು ಸಚಿವರಿಗೆ ತಿಳಿಸಿದರು.

ಕೆಲಸ ತ್ವರಿತಕ್ಕೆ ಸಂಸದರ ಸೂಚನೆ
ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪೂರ್ವಸಿದ್ಧತೆಯ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಸಂಸದ ನಳಿನ್‌ ಇದೇ ವೇಳೆ ಗುತ್ತಿಗೆದಾರ ಕಂಪೆನಿ ಡಿಬಿಎಲ್‌ ಪ್ರತಿನಿಧಿಗಳಿಗೆ ಸೂಚಿಸಿದರು.

ಹೆದ್ದಾರಿ ಹೋರಾಟ ಸಮಿತಿಯ ಮರಿಯಮ್ಮ ಥಾಮಸ್‌, ಸಂಚಾಲಕ ಪ್ರಕಾಶ್‌ ಚಂದ್ರ, ಕಾರ್ಯದರ್ಶಿ ವಿಶ್ವಜಿತ್‌, ಸದಸ್ಯರಾದ ಜಯರಾಮ್‌ ಪೂಜಾರಿ, ರತ್ನಾಕರ ಶೆಟ್ಟಿ, ಬೃಜೇಶ್‌ ಶೆಟ್ಟಿ, ನರಸಿಂಹ ಕಾಮತ್‌, ಭೂ ಮಾಲಕರಾದ ಅನ್ನ ಮರಿಯ, ಪವನ್‌ ಕೋಟ್ಯಾನ್‌, ಪ್ರಸಾದ್‌ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next