Advertisement

ಚುನಾವಣೆಗೆ ಮಾತ್ರ ರಾಜಕೀಯ

04:43 PM Sep 06, 2020 | Suhan S |

ಮುದ್ದೇಬಿಹಾಳ: ನನ್ನ ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಅಭಿವೃದ್ಧಿ ಹೊಂದಬೇಕು ಎನ್ನುವುದು ನನ್ನ ಕನಸು. ಇದಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವೊಲಿಸಿ ಈ ಮತಕ್ಷೇತ್ರದ ಅಭಿವೃದ್ಧಿಗೆ ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಹೆಚ್ಚು ಅನುದಾನ ತಂದಿದ್ದು ಇನ್ನೂ ತರುತ್ತೇನೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌ .ಪಾಟೀಲ ನಡಹಳ್ಳಿ ಹೇಳಿದ್ದಾರೆ.

Advertisement

ಮುದ್ದೇಬಿಹಾಳ ತಾಲೂಕಿನ ಮುದೂರ, ಹಂಡರಗಲ್‌, ನಾಗರಾಳ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯಲಿರುವ ಸಿಸಿ ರಸ್ತೆ, ಚರಂಡಿ,ಶಾಲಾ ಕೊಠಡಿ ದುರಸ್ತಿ, ಸಮುದಾಯ ಭವನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಪ್ರತ್ಯೇಕ ಭೂಮಿಪೂಜೆ ನೆರವೇರಿಸಿ ಆಯಾ ಗ್ರಾಮಗಳಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದರು. ಕೃಷ್ಣಾ ನದಿ ದಂಡೆಯಲ್ಲಿರುವ 22 ಹಳ್ಳಿಗಳಿಗೆ ಮೂಲಸೌಕರ್ಯ ದೊರಕಿಸಿಕೊಡಲು ವಿಶೇಷ ಅನುದಾನ ತಂದಿದ್ದೇನೆ. ಅದರಲ್ಲಿ ಈಗ 32 ಕೋಟಿ ರೂ. ಬಿಡುಗಡೆ ಆಗಿದೆ. ಇನ್ನೂ 70 ಕೋಟಿ ಅನುದಾನ ಮುಂಬರುವ ದಿನಗಳಲ್ಲಿ ಬಿಡುಗಡೆ ಆಗಲಿದೆ. ಪ್ರಮುಖವಾಗಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಅಗತ್ಯ ಇರುವೆಡೆ ಶಾಲಾ ಕೊಠಡಿ, ಸಮುದಾಯ ಭವನ ಸೇರಿ ಗ್ರಾಮಸ್ಥರು ಸರ್ವಸಮ್ಮತದಿಂದ ಹೇಳುವ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ನಾನಂತೂ ರಾಜಕಾರಣ ಮಾಡುವುದಿಲ್ಲ. ರಾಜಕಾರಣ ಚುನಾವಣೆ ಸಂದರ್ಭ ಮಾತ್ರ ಸೀಮಿತವಾಗಿರುತ್ತದೆ. ಉಳಿದ ಸಮಯದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಮನೋಭಾವ ನನ್ನದು. ನನಗೆ ಚುನಾವಣೆಯಲ್ಲಿ ಮತ ಹಾಕಲಿ, ಹಾಕದಿರಲಿ. ಆ ಬಗ್ಗೆ ನಾನು ಹೆಚ್ಚು ವಿಚಾರಿಸೊಲ್ಲ. ನನ್ನ ಮತಕ್ಷೇತ್ರ ರಾಜ್ಯದಲ್ಲೇ ಮಾದರಿ ಮತಕ್ಷೇತ್ರ ಆಗಬೇಕು. ಅದನ್ನು ಮಾಡಿ ತೋರಿಸಲು ಜನತೆ ನನಗೆ ಶಕ್ತಿ ತುಂಬಬೇಕು ಎಂದರು.

ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಮಲ್ಲು ಅಪರಾ , ಅಶೋಕ ರಾಠೊಡ ನೇಬಗೇರಿ, ಪಿಡಿಒ ವಿಜಯಾ ಮುದಗಲ್ಲ, ಆಯಾ ಗ್ರಾಮಗಳ ಹಿರಿಯರು, ಪ್ರಮುಖರು, ಗ್ರಾಪಂ ಸದಸ್ಯರು, ಬಿಜೆಪಿ ಧುರೀಣರು,ಪಿಡಬ್ಲೂಡಿ ಅಧಿ ಕಾರಿಗಳು, ಪಿಡಿಒಗಳು ಇದ್ದರು. ಪಿಎಸೈ ಮಲ್ಲಪ್ಪ ಮಡ್ಡಿ ಬಂದೋಬಸ್ತ್ ಒದಗಿಸಿದ್ದರು. ಮುದೂರ ಗ್ರಾಮದಲ್ಲಿ 3.60 ಕೋಟಿ, ಹಂಡರಗಲ್‌ ಗ್ರಾಮದಲ್ಲಿ 3.23 ಕೋಟಿ, ನಾಗರಾಳ ಗ್ರಾಮದಲ್ಲಿ 2.89ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ, ಸಮುದಾಯ ಭವನ ಸೇರಿದಂತೆ ಮೂಲಸೌಕರ್ಯಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಮತ್ತು ಶಾಂತಗೌಡರು ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next