ಹುಬ್ಬಳ್ಳಿ: ಅವಳಿನಗರ ಅಭಿವೃದ್ಧಿ ಪಥದತ್ತ ದಾಪುಗಾಲು ಇರಿಸುತ್ತಿದ್ದು, ಎಲ್ಲ ರಸ್ತೆಗಳು ಅಭಿವೃದ್ಧಿ ಹೊಂದಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಉಣಕಲ್ಲ-ಮಾರಡಗಿ ಸಿಸಿ ರಸ್ತೆ ಕಾಮಗಾರಿ, ಉಣಕಲ್ಲ ಹೆಬ್ಬಳ್ಳಿ ರಸ್ತೆ ಮಧ್ಯಬರುವ ಎರಡು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಅವಳಿನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಶ್ರೀನಗರ ಕ್ರಾಸ್‌ನಿಂದ ಮಾರಡಗಿ ರಸ್ತೆ ರೈಲ್ವೆ ಹಳಿಯವರೆಗೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ಈ ಕಾಮಗಾರಿ ಮೂರ್‍ನಾಲ್ಕು ತಿಂಗಳ ಹಿಂದೆಯೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಮಳೆಯ ಕಾರಣ ತಡವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.
ಉಣಕಲ್ಲ-ಮಾರಡಗಿ ರಸ್ತೆಯಲ್ಲಿ ಬರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಸುವ ಕುರಿತು ರೈಲ್ವೆ ಖಾತೆ ಸಹಾಯಕ ಸಚಿವರಾಗಿದ್ದ ಸುರೇಶ ಅಂಗಡಿ ಅವರೊಂದಿಗೆ ಚರ್ಚಿಸಲಾಗಿತ್ತು. ಅದು ಅಷ್ಟಕ್ಕೆ ನಿಂತಿದ್ದು, ಮುಂದಿನ ವಾರದಲ್ಲಿ ರೈಲ್ವೆ ಪ್ರಧಾನ ವ್ಯವಸ್ಥಾಪಕರೊಂದಿಗೆಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು.
ಸಚಿವ ಜಗದೀಶ ಶೆಟ್ಟರ ಮಾತನಾಡಿ, ವಿವಿಧ ಯೋಜನೆಯಡಿ ಅವಳಿನಗರಕ್ಕೆ ಹೆಚ್ಚಿನ ಅನುದಾನ ತರಲಾಗುತ್ತಿದ್ದು, ಇದೀಗ 7 ಕೋಟಿ ಅನುದಾನದಲ್ಲಿ ಉಣಕಲ್ಲ-ಮಾರಡಗಿ ಸಿಸಿ ರಸ್ತೆ ಹಾಗೂ 5 ಕೋಟಿ ಅನುದಾನದಲ್ಲಿ ಉಣಕಲ್ಲ-ಹೆಬ್ಬಳ್ಳಿ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಭೈರಿದೇವರಕೊಪ್ಪದ ಎರಡು ರಸ್ತೆಗಳ ಕಾಮಗಾರಿ ಉಳಿದಿದ್ದು, ಈ ವರ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಅವಳಿನಗರದಲ್ಲಿ ಕೈಗಾರಿಕೆಗಳ ಸ್ಥಾಪನೆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಎಫ್ಎಂಸಿಜಿ ವಲಯ ಸ್ಥಾಪನೆ ಆಗುತ್ತಿದೆ. ಜತೆಗೆ ಸುಮಾರು 5-6 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದ್ದು, ಇದರಿಂದ ಸುಮಾರು 30 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಪಾಲಿಕೆ ಮಾಜಿ ಸದಸ್ಯ ಉಮೇಶ ಕೌಜಗೇರಿ ಪ್ರಾಸ್ತಾವಿಕ ಮಾತನಾಡಿದರು.ಮುಖಂಡರಾದ ರಾಜಣ್ಣಾ ಕೊರವಿ, ಮಲ್ಲಿಕಾರ್ಜುನ ಗುಂಡೂರ, ತಿಪ್ಪಣ್ಣ ಮಜ್ಜಗಿ, ಎಸ್.ಬಿ.ಹಿರೇಮಠ, ಬಸಣ್ಣಾ ಹೆಬ್ಬಳ್ಳಿ, ರಾಮಣ್ಣಾ ಕೊಕಾಟೆ, ಪರಣ್ಣ ಮುಳಗುಂದ ಇನ್ನಿತರರಿದ್ದರು.
ನಗರ ವಿಕಾಸ ಯೋಜನೆಯಡಿ ಮಹಾನಗರಕ್ಕೆ 150 ಕೋಟಿ ರೂ. ಬಂದಿದ್ದು, ರಸ್ತೆಗಳ ಸುಧಾರಣೆ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜನೆವರಿ ತಿಂಗಳಲ್ಲಿ 150 ಕೋಟಿ ರೂ. ಕಾಮಗಾರಿ ಮಾಡಲಾಗುವುದು. ಚನ್ನಮ್ಮ ವೃತ್ತದ ಫ್ಲೈಓವರ್ ಕಾಮಗಾರಿಗೆ ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು.
–ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ
ನ್ಯೂ ಕಾಟನ್ ಮಾರ್ಕೆಟ್ ಸಿಸಿ ರಸ್ತೆ ಕಾಮಗಾರಿ ಆರಂಭವಾಗದಿರುವುದಕ್ಕೆ ಹಿಂದಿನ ಸರಕಾರಗಳು ಕಾರಣ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರಲಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ಕಾಮಗಾರಿ ಆರಂಭವಾಗಿದೆ. –
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ