ಪುತ್ತೂರು: ಕೋಮುಸೂಕ್ಷ್ಮ ಜಿಲ್ಲೆಯೆಂದೇ ಗುರುತಿಸಲ್ಪಟ್ಟಿರುವ ಕರಾವಳಿಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಕೋಮು ಭಾವನೆಗಳು ಕೆರಳುತ್ತಿದ್ದು, ನೋವು, ಸಂಕಷ್ಟ, ಜೀವಹಾನಿಗಳು ಸಂಭವಿಸುತ್ತಿವೆ. ಇವೆಲ್ಲದರ ನಡುವೆ ಮಸೀದಿಗಾಗಿ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿದ ದೇವಸ್ಥಾನದ ಅಧ್ಯಕ್ಷರೊಬ್ಬರು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ.
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮ ಓಲೆಮುಂಡೋವು ನಿವಾಸಿ ಮೋಹನ್ ರೈ ಅವರು ತನ್ನ ಭೂಮಿಯನ್ನು ಮಸೀದಿಗೆ ದಾನ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆದವರು.
ಓಲೆಮುಂಡೋವು ನಿವಾಸಿ ಪ್ರಗತಿಪರ ಕೃಷಿಕರೂ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರೂ ಆಗಿರುವ ಓಲೆಮುಂಡೋವು ಮೋಹನ್ ರೈ ಅವರ ಜಾಗಕ್ಕೆ ತಾಗಿಕೊಂಡೇ ಓಲೆಮುಂಡೋವು ದರ್ಗಾ ಮತ್ತು ಮಸೀದಿ ಇದೆ. ದರ್ಗಾ ಕಟ್ಟಡ ವಿಸ್ತರಣೆಗೆ ಸ್ಥಳಾವಕಾಶದ ಕೊರತೆ ಇರುವ ಕಾರಣ ಮಸೀದಿ ಸಮಿತಿಯವರು ಮೋಹನ್ ರೈ ಅವರಲ್ಲಿ ಜಾಗವನ್ನು ನೀಡುವಂತೆ ಕೇಳಿಕೊಂಡಿದ್ದರು.
ಮಸೀದಿಯವರ ಬೇಡಿಕೆಗೆ ಸಮ್ಮತಿಸಿದ ಅವರು ಡಿ. 15 ರಂದು ಶುಕ್ರವಾರ ಮಸೀದಿಗೆ ತೆರಳಿ ತನ್ನ ಸ್ವಾಧೀನದ ಪಟ್ಟಾ ಜಾಗದಲ್ಲಿ ಸುಮಾರು 12 ಸೆಂಟ್ಸ್ ಸ್ಥಳವನ್ನು ಮಸೀದಿಗೆ ಬಿಟ್ಟುಕೊಡುವುದಾಗಿ ವಾಗ್ಧಾನ ಮಾಡಿದ್ದಾರೆ.
ಓಲೆಮುಂಡೋವು ದರ್ಗಾದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಭಾಗವಹಿಸುತ್ತಾ ತನ್ನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸಹಕಾರವನ್ನು ನೀಡುತ್ತಿದ್ದ ಮೋಹನ್ ರೈ ಅವರು ಕೆಯ್ಯೂರು ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದಾರೆ. ಶುಕ್ರವಾರ ಮಸೀದಿಗೆ ಆಗಮಿಸಿ ಭೂಮಿಯನ್ನು ದಾನ ಮಾಡುವ ವೇಳೆ ಓಲೆಮುಂಡೋವು ಮಸೀದಿ ಅಧ್ಯಕ್ಷ ಪುತ್ತುಮೋನು ಹಾಜಿ, ಮಸೀದಿಯ ಖತೀಬರಾದ ಸಯ್ಯದಲವಿ ತಂšಳ್ ಮಾಸ್ತಿಕುಂಡು, ಉಮ್ಮರ್ ಮುಸ್ಲಿಯಾರ್, ಇಬ್ರಾಹಿಂ ಕಡ್ಯ, ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನ ಸಂಚಾಲಕ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಉಪಸ್ಥಿತರಿದ್ದರು.
ನನ್ನ ಜಾಗದ ಪಕ್ಕದಲ್ಲೇ ಮಸೀದಿ ಮತ್ತು ದರ್ಗಾ ಇದೆ, ಅವರಿಗೆ ಸ್ಥಳಾವಕಾಶದ ಕೊರತೆ ಇತ್ತು, ಇದಕ್ಕಾಗಿ ನಾನು 12 ಸೆಂಟ್ಸ್ ಸ್ಥಳವನ್ನು ಮಸೀದಿಗೆ ಉಚಿತವಾಗಿ ನೀಡಿದ್ದೇನೆ. ಎಷ್ಟು ಜಾಗ ಅವರಿಗೆ ಬೇಕಿತ್ತೂ ಅಷ್ಟು ನೀಡಿದ್ದೇನೆ. ದೇವರು ಎಲ್ಲರಿಗೂ ಒಬ್ಬನೇ ಆಗಿದ್ದಾನೆ, ನಾವು ಎಲ್ಲರನ್ನೂ ಗೌರವಿಸಬೇಕು, ಕೋಮುಗಳ ಮಧ್ಯೆ ಪರಸ್ಪರ ಅಪನಂಬಿಕೆ ಸಲ್ಲದು, ಯಾರಧ್ದೋ ಸಾವಿನಲ್ಲಿ ಸಂತೋಷಪಡುವ ಮನೋಭಾವ ನಮ್ಮದಾಗಬಾರದು. ನನಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ, ಅವನು ಕೊಟ್ಟಿದ್ದ ಭೂಮಿಯಿಂದ ಸ್ವಲ್ಪ ಭಾಗವನ್ನು ದೇವರಿಗೆ ಕೊಟ್ಟಿದ್ದೇನೆ. ನಾವು ಯಾರೇ ಆಗಲಿ ಜಾತಿ, ಧರ್ಮದ ಹೆಸರಿನಲ್ಲಿ ಎಂದಿಗೂ ಕಚ್ಚಾಟ ಮಾಡಬಾರದು ಅದರಿಂದ ಯಾರಿಗೂ ಏನೂ ಲಾಭವಿಲ್ಲ.
ಓಲೆಮುಂಡೋವು ಮೋಹನ್ ರೈ, ಅಧ್ಯಕ್ಷರು ವಿಷ್ಣುಮೂರ್ತಿ ದೇವಸ್ಥಾನ
ಇದೊಂದು ಅತ್ಯಂತ ಅವಿಸ್ಮರಣೀಯ ದಿನವಾಗಿದೆ. ಓಲೆಮುಂಡೋವು ಮೋಹನ್ ರೈಗಳಂತಹ ಹೃದಯವಂತಿಕೆ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕು. ಹಿಂದೂ- ಮುಸ್ಲಿಂ ಸಮುದಾಯದವರು ಸಹಕಾರದಿಂದ ಬದುಕು ಸಾಗಿಸುವಂತಾದರೆ ಅದಕ್ಕಿಂತ ದೊಡ್ಡ ಸಂಪತ್ತು ದೇಶಕ್ಕೆ ಬೇರೆ ಬೇಕಿಲ್ಲ. ರೈಗಳು ಜಗತ್ತೇ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ.
ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಸಂಚಾಲಕರು, ರೆಂಜಲಾಡಿ ಇಸ್ಲಾಮಿಕ್ ಸೆಂಟರ್