ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕ್ಯಾಸಲರಾಕ್ – ಕಾರಂಜೋಳ ಮಧ್ಯೆ ಬುಧವಾರ ಬೆಳಗ್ಗೆ ಗುಡ್ಡ ಕುಸಿತವಾಗಿ ನಿಜಾಮುದ್ದಿನ್ – ವಾಸ್ಕೋಡಗಾಮ್ ರೈಲು ಸುಮಾರು ಎಂಟು ಗಂಟೆ ಕಾಲ ವಿಳಂಬವಾಯಿತು.
ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಈ ರೈಲು ಕ್ಯಾಸಲರಾಕ್ ದಾಟಿ ಹೋಗುವಾಗ ರೈಲು ಚಾಲಕನಿಗೆ ಗುಡ್ಡ ಕುಸಿತವಾಗಿರುವುದು ಕಂಡು ಬಂದಿದೆ. ಕೂಡಲೇ ರೈಲು ನಿಲ್ಲಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ.
ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದರಿಂದ ರೈಲು ಮುಂದೆ ಹೋಗಲು ಸಾಧ್ಯವಾಗಲಿಲ್ಲ. ನಂತರ ಎಲ್ಲ ಪ್ರಯಾಣಿಕರೊಂದಿಗೆ ರೈಲು ವಾಪಸ್ ಕ್ಯಾಸಲಾರಾಕ್‌ಗೆ ಹೋಯಿತು. ಅಲ್ಲಿಯೇ ಪ್ರಯಾಣಿಕರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರನ್ನು ಗೋವಾಕ್ಕೆ ಬಸ್ ಮೂಲಕ ಕಳುಹಿಸಲು ರೈಲ್ವೆ ಇಲಾಖೆ ಯೋಚನೆ ನಡೆಸಿತ್ತು. ಅದರಂತೆ ಬೆಳಗಾವಿಯಿಂದ 5 ಬಸ್‌ಗಳನ್ನು ಕ್ಯಾಸಲ್‌ರಾಕ್‌ಗೆ ಕಳುಹಿಸಿಕೊಡಲಾಗಿತ್ತು.
ಮಧ್ಯಾಹ್ನ 2 ಗಂಟೆಯ ಒಳಗೆ ಗುಡ್ಡ ಕುಸಿತವಾದ ಸ್ಥಳವನ್ನು ಕಾರ್ಯಾಚರಣೆ ನಡೆಸಿ ಮಣ್ಣು-ಕಲ್ಲು ತೆಗೆದು ಸಂಚಾರಕ್ಕೆ ಮುಕ್ತ ಮಾಡಲಾಯಿತು. ಹೀಗಾಗಿ ರೈಲು ಅಲ್ಲಿಂದ ಪ್ರಯಾಣ ಬೆಳೆಸಲು ಅನುಕೂಲ ಆಗಿದ್ದರಿಂದ ಪ್ರಯಾಣಿಕರೆಲ್ಲರೂ ರೈಲು ಮೂಲಕವೇ ಗೋವಾಕ್ಕೆ ತೆರಳಿದರು. ಈ ಎಲ್ಲ ಬಸ್‌ಗಳನ್ನು ಮತ್ತೆ ವಾಪಸ್ಸು ಬೆಳಗಾವಿಗೆ ಕಳುಹಿಸಲಾಯಿತು ಎಂದು ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ ಉದಯವಾಣಿಗೆ ತಿಳಿಸಿದರು.