ಸಾಗರ: ನಾನು ಸತ್ತರೂ ಚಿಂತೆಯಿಲ್ಲ. ಜನರನ್ನು ಅನ್ಯಾಯವಾಗಿ ಜೈಲಿಗೆ ಕಳಿಸುವ 192(ಎ) ಭೂಕಂದಾಯ ಕಾಯ್ದೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ 192 (ಎ) ಭೂಕಂದಾಯ ಕಾಯ್ದೆಯನ್ವಯ ರೈತರ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಾಗರ ನೆಲ ಹೋರಾಟದ ಗರ್ಭಗುಡಿ. ಇಲ್ಲಿಂದಲೇ ಅನೇಕ ಭೂಚಳುವಳಿಗೆ ಚಾಲನೆ ಸಿಕ್ಕಿದೆ. 192 ಎ ಕಾಯ್ದೆ ತೆಗೆದು ಹಾಕುವಂತೆ ಮತ್ತೂಂದು ಸುತ್ತಿನ ಹೋರಾಟಕ್ಕೆ ಈ ದಿನ ಚಾಲನೆ ನೀಡಲಾಗುತ್ತಿದೆ. ಭೂ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನನ್ನ ಎದುರಿಗೆ ರೈತರಿಗೆ ನೊಟೀಸ್ ನೀಡಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಾಗ ನೋಡಿಕೊಂಡು ಇದ್ದರೆ ಇದ್ದೂ ಸತ್ತಂತೆ. ಅದಕ್ಕಿಂತ ದುರಂತ ಮತ್ತೂಂದಿಲ್ಲ. ಈ ನಿಟ್ಟಿನಲ್ಲಿ ಮತ್ತೂಂದು ಸುತ್ತಿನ ಭೂ ಹೋರಾಟಕ್ಕೂ ನಾನು ಸಿದ್ಧ ಎಂದು ಘೋಷಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆ ಜನರಿಗೆ ಮಾರಕ ಎಂದು ಗೊತ್ತಿದ್ದರೂ ಯಡಿಯೂರಪ್ಪ ಕಾಯ್ದೆ ತಿದ್ದುಪಡಿ ಕೈ ಬಿಡಲಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ತಲೆ ಅಲ್ಲಾಡಿಸುತ್ತ ಕುಳಿತಿದ್ದನ್ನು ಬಿಟ್ಟರೆ ಧ್ವನಿ ಎತ್ತದೆ ಇರುವುದು ನಮ್ಮ ದುರಾದೃಷ್ಟ. ನಾನು ಕಂದಾಯ ಸಚಿವನಾಗಿದ್ದಾಗ ಹೇಳಿದರೂ ಸಿದ್ದರಾಮಯ್ಯ ಅವರು ಕಾಯ್ದೆ ಜಾರಿಗೆ ತರದೆ ಇದ್ದಲ್ಲಿ ಜನರು ಕಂಡಕಂಡಲ್ಲಿ ಗುಡಿಸಲು ಕಟ್ಟಿಕೊಳ್ಳುತ್ತಾರೆ ಎಂದು ನಿರ್ಲಕ್ಷ್ಯ ಮಾಡಿದ್ದರು. ಈಗ ಜನರು ಬೆಂಗಳೂರಿನ ನ್ಯಾಯಾಲಯಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
192 ಎ ಕಾಯ್ದೆಯ ಬಗ್ಗೆ ವಿಧಾನಸಭೆಯಲ್ಲಿ ಯಾರೂ ಚಕಾರ ಎತ್ತುತ್ತಿಲ್ಲ. ಕಾಯ್ದೆಯ ಬಿಸಿ ಹೊಳೆನರಸೀಪುರದಲ್ಲಿರುವ ದೇವೇಗೌಡರಿಗಾಗಲಿ, ಸಾಗರದಲ್ಲಿರುವ ನನಗೆ ತಟ್ಟುವುದಿಲ್ಲ. ಆದರೆ ಸೂರು ಕಟ್ಟಿಕೊಂಡಿರುವ ಬಡವರನ್ನು ಜೈಲಿಗೆ ಕಳಿಸುತ್ತದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ 1 ವರ್ಷ ಜೈಲು ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಕಾಯ್ದೆಯಡಿ ಪ್ರಕರಣ ದಾಖಲಾದರೆ ಜಾಮೀನು ಸಹ ಸಿಗುವುದಿಲ್ಲ. ಬಡವರು ಜಾಮೀನುದಾರನನ್ನು ಕರೆದುಕೊಂಡು ಹದಿನೈದು ಇಪ್ಪತ್ತು ಸಾವಿರ ರೂ. ಖರ್ಚು ಮಾಡಿಕೊಂಡು ಬೆಂಗಳೂರಿಗೆ ಹೋಗುವುದು ದುಸ್ಸಾಹಸವೇ ಸರಿ. ಜಗತ್ತಿನಲ್ಲಿಯೇ ಅತ್ಯಂತ ಕರಾಳ ಕಾಯ್ದೆ ಇದಾಗಿದ್ದು, ತಕ್ಷಣ ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಇದು ಕೇವಲ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಸಮಸ್ಯೆ ಮಾತ್ರವಲ್ಲ. ಇಡೀ ರಾಜ್ಯದ ಜನರ ಸಮಸ್ಯೆಯಾಗಿದೆ. ಈಗ ಹೋರಾಟದ ದೀಪವನ್ನು ಹಚ್ಚಿದ್ದೇನೆ. ಇದರ ಪ್ರಭೆ ರಾಜ್ಯದಾದ್ಯಂತ ವಿಸ್ತರಿಸಿ, ಜನರು ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಬೀದಿಗೆ ಇಳಿಯುವ ದಿನ ದೂರವಿಲ್ಲ. ತಾಲೂಕಿನ ಪ್ರತಿ ಗ್ರಾಪಂಗೆ ಭೇಟಿ ನೀಡಿ ಕಾಯ್ದೆಯ ಕರಾಳತೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಜೊತೆಗೆ ಜನಜಾಗೃತಿ ಮೂಡಿಸಲಾಗುತ್ತದೆ. ಜೊತೆಗೆ ಶಿಕಾರಿಪುರಕ್ಕೂ ತೆರಳಿ ಅಲ್ಲಿಯೂ ಯಡಿಯೂರಪ್ಪನವರ ಜಮೀನು ಈ ಕಾಯ್ದೆಯಡಿ ಎಷ್ಟು ಬರುತ್ತದೆ ಎನ್ನುವುದನ್ನು ಜನರಿಗೆ ತಿಳಿಸುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ, ನಗರ ಅಧ್ಯಕ್ಷ ತಸ್ರೀಫ್, ಮಕ್ಬೂಲ್ ಅಹ್ಮದ್, ಬಿ.ಆರ್. ಜಯಂತ್, ತೀ.ನ. ಶ್ರೀನಿವಾಸ್, ಮಹ್ಮದ್ ಖಾಸಿಂ, ಪ್ರಭಾಕರ ಖಂಡಿಕಾ, ಮಲ್ಲಿಕಾರ್ಜುನ ಹಕ್ರೆ, ವೀಣಾ ಪರಮೇಶ್ವರ್, ಕೆ. ಹೊಳೆಯಪ್ಪ, ರವಿಕುಮಾರ್ ಎಚ್.ಎಂ., ತುಕಾರಾಮ ಶಿರವಾಳ, ಮಹಾಬಲ ಕೌತಿ, ದಿನೇಶ್ ಡಿ., ಪ್ರವೀಣ ಬಣಕಾರ್, ಸುಧಾಕರ ಕುಗ್ವೆ, ಕಲಸೆ ಚಂದ್ರಪ್ಪ, ಅನಿತಾಕುಮಾರಿ, ಭೀಮನೇರಿ ಶಿವಪ್ಪ, ಸಂತೋಷಕುಮಾರ್ ಇನ್ನಿತರರು ಇದ್ದರು.