ಬೆಂಗಳೂರು: ರಾಜ್ಯದ ಅರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷಿಯಲ್ಲಿ ಹೆಚ್ಚಿನ ಹೂಡಿಕೆ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ಕೈಗಾರಿಕೆ ಮತ್ತು ಇತರ ಉತ್ಪಾದಕ ಉದ್ದೇಶಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುವ ಭೂ ಸುಧಾರಣಾ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಚರ್ಚಿಸಲು ಮಂಗಳವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಅಡಚಣೆಗಳನ್ನು ತೆಗೆದುಹಾಕುವ ಉದ್ದೇಶದಿಂದ ಹಲವು ಸುಧಾರಣಾ ಕ್ರಮ ತೆಗೆದುಕೊಳ್ಳಲಾಗಿದೆ. ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79(ಎ), 79(ಬಿ)ಮತ್ತು 80 ರ ತಿದ್ದುಪಡಿಗಳು ಕೃಷಿಯೇತರರು ಭೂಮಿಯನ್ನು ಖರೀದಿಸುವಲ್ಲಿನ ಅನಗತ್ಯ ಅಡಚಣೆಗಳನ್ನು ಹೋಗಲಾಡಿಸುತ್ತದೆ.
ಅಗತ್ಯವಿದ್ದಲ್ಲಿ, ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೂ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದರು. ಕಾಸಿಯಾ ಅಧ್ಯಕ್ಷ ಆರ್.ರಾಜು ಮಾತನಾಡಿ, ರಾಜ್ಯ ಸರ್ಕಾರ ಈಗ ಪ್ರಸ್ತಾಪಿಸುವ ಸುಧಾರಣೆಗಳು ರಾಜ್ಯದ ಕೃಷಿ ರಫ್ತು ಸುಧಾರಿಸಲು ಮತ್ತು ಒಟ್ಟು ರμ¤ನಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಸಹಾಯ ಮಾಡುತ್ತದೆ. ಕೃಷಿ ರಫ್ತುಗಳಲ್ಲಿ 5ನೇ ಸ್ಥಾನದಲ್ಲಿರುವ ಕರ್ನಾಟಕವು ಖಂಡಿತವಾಗಿ ಶ್ರೇಯಾಂಕದಲ್ಲಿ ಏಕರಿಕೆ ಕಾಣಲಿದೆ ಎಂದರು.
ದೇಶದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಈಗ ಕೃಷಿ ರಪ್ತಿನಲ್ಲಿ ಮುಂಚೂಣಿಯಲ್ಲಿದ್ದು, ಕರ್ನಾಟಕದ ಈ ಸುಧಾರಣಾ ಕ್ರಮದಿಂದ ಈ ಎರಡು ರಾಜ್ಯಗಳನ್ನು ಮೀರಿಸಲಿದೆ. ಇದು ಕೃಷಿ ಆಧಾರಿತ ಉದ್ಯಮದಲ್ಲಿ ಹೂಡಿಕೆ ಮಾಡಲು ಮತ್ತು ಸ್ವಯಂಚಾಲಿತವಾಗಿ ಗ್ರಾಮೀಣ ಉದ್ಯೋಗಗಳನ್ನು ಸೃಷ್ಟಿಸುವುದರ ಜತೆಗೆ ಮೌಲ್ಯವರ್ಧನೆ, ಗ್ರಾಮೀಣ ಭಾಗದಲ್ಲಿ ಆದಾಯದ ಮಟ್ಟ ಉತ್ತಮಗೊಳಿಸಲು ಸಹಾಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸಿಯಾ ಉಪಾಧ್ಯಕ್ಷ ಕೆ.ಬಿ.ಅರಸಪ್ಪ, ಗೌರವ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಜಂಟಿ ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಖಜಾಂಚಿ ಎಸ್. ಎಂ.ಹುಸೇನ್ ಸಹಿತವಾಗಿ ಕಾಸಿಯಾದ ಅಂಗ ಸಂಸ್ಥೆ ಮತ್ತು ಸದಸ್ಯರೊಂದಿಗೆ ಜೂಮ್ ಆ್ಯಪ್ ಮೂಲಕ ಸಚಿವರು ಸಂವಾದ ನಡೆಸಿದರು. ರಾಜ್ಯದ ಎಲ್ಲ ಭಾಗಗಳಿಂದ ವಿವಿಧ ಸಂಘಗಳ ಅಧ್ಯಕ್ಷರು ಈ ಸಂವಾದದಲ್ಲಿದ್ದರು.