ರಾಂಪುರ: ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಭೂಮಿ ಹಸಿಯಾಗಿದ್ದು ಮುಂಗಾರು ಕೃಷಿ ಚಟುವಟಿಕೆಗೆ ಭೂಮಿ ಹದಗೊಳಿಸಲು ರೈತರು ಭೂಮಿಯತ್ತ ಚಿತ್ತ ಹರಿಸಿದ್ದಾನೆ.
ಹೌದು, ಬಾಗಲಕೋಟೆ ತಾಲೂಕಿನಲ್ಲಿ ಹಿಂಗಾರು ಬೆಳೆ ನಂತರ ರೈತರು ನೇಗಿಲು ಹೊಡೆದು ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಮಳೆಯ ದಾರಿ ಕಾಯುತ್ತಿದ್ದರು. ಆದರೆ ವರುಣ ರೈತರ ನಿರೀಕ್ಷೆ ಹುಸಿಗೊಳಿಸಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಮುಂಗಾರು ಬಿತ್ತನೆಗೆ ಭೂಮಿ ತಯಾರು ಮಾಡಲು ರೈತರಿಗೆ ಅನುಕೂಲವಾಗಿದೆ.
ಕಳೆದ ವರ್ಷ ಈ ಭಾಗದ ರೈತರಿಗೆ ಮುಂಗಾರು ಕೈ ಹಿಡಿದಿರಲಿಲ್ಲ. ಕೆಲವೆಡೆ ಮುಂಗಾರು ಸ್ವಲ್ಪ ಮಟ್ಟಿಗೆ ಸುರಿದರೆ ಇನ್ನೂ ಕೆಲವೆಡೆ ಮುಂಗಾರು ಬಿತ್ತನೆಯೇ ಆಗಿರಲಿಲ್ಲ. ಹೀಗಾಗಿ ಮುಂಗಾರು ಬೆಳೆ ಕಳೆದುಕೊಂಡಿದ್ದ ರೈತ ಹಿಂಗಾರಿನ ಮೇಲೆ ಇಟ್ಟಿದ್ದ ನಂಬಿಕೆ ನಿಜವಾಯಿತು. ಉತ್ತಮವಾಗಿ ಸುರಿದ ಹಿಂಗಾರು ಮಳೆಯಿಂದ ಕಡಲೆ, ಬಿಳಿಜೋಳ, ಕುಸುಬಿ, ಮತ್ತಿತರ ಬೆಳೆ ತೆಗೆದು ಮುಂಗಾರಿಗೆ ಆಗಿದ್ದ ಹಾನಿ ಕೊರತೆ ನೀಗಿಸಿಕೊಂಡಿದ್ದ. ಆದರೆ ಈ ಬಾರಿ ಮುಂಗಾರು ರೈತರ ಕೈ ಹಿಡಿಯುವ ನಿರೀಕ್ಷೆ ಇದೆ. ಈವರೆಗೆ ಬಂದ ಹವಾಮಾನ ವರದಿಗಳು ಉತ್ತಮ ಮುಂಗಾರು ಸುರಿಯಲಿದೆ ಎಂದು ಹೇಳಿವೆ. ಹೀಗಾಗಿ ಈ ವರ್ಷ ತಾಲೂಕಿನ ರೈತ ಮುಂಗಾರಿನ ಮೇಲೆ ಬೆಟ್ಟದಷ್ಟು ನಂಬಿಕೆ ಇಟ್ಟುಕೊಂಡು ಕೃಷಿ ಚಟುವಟಿಕೆಗೆ ಅಣಿಯಾಗುತ್ತಿದ್ದಾನೆ.
ಭೂಮಿಯಲ್ಲಿ ಹರಿದ ನೀರು: ಕಳೆದ ಕೆಲ ವರ್ಷಗಳಿಂದ ಮಳೆ ಕೊರತೆ ಉತ್ತರ ಕರ್ನಾಟಕದ ರೈತರನ್ನು ಕಾಡುತ್ತಿದೆ. ಸತತ ಮೂರು ವರ್ಷ ಬರಗಾಲ ಅನುಭವಿಸಿದ ರೈತರು ಭೂಮಿಯಲ್ಲಿ ಮಳೆ ನೀರು ಹರಿದಿದ್ದನ್ನು ಕಂಡಿಲ್ಲ. ಆದರೆ ಕಳೆದ ವರ್ಷ ಮುಂಗಾರಿನ ನಂತರ ಸುರಿದ ಕೆಲ ಮಳೆಗಳು ಭೂಮಿಯಲ್ಲಿ ಹರಿದು ಇಂಗಿದ್ದರೆ ಈ ವರ್ಷ ಇದೀಗ ಸುರಿದ ಮಳೆ ನೀರು ಕೂಡ ಹರಿದು ಭೂಮಿ ಹದಗೊಳಿಸಿದೆ. ಇದು ಮುಂಗಾರು ಆರಂಭಕ್ಕೂ ಮುನ್ನ ರೈತರಿಗೆ ಖುಷಿ ಕೊಟ್ಟಿದೆ.
ಭೂಮಿ ಹದಗೊಳಿಸುವಷ್ಟು ಮಳೆಯಾಗಿದೆ. ಮುಂಗಾರು ಬಿತ್ತನೆಗೆ ತಯಾರು ಮಾಡಲು ಹೊಲ ಹರಗುತ್ತಿದ್ದೇವೆ.
ಇನ್ನೇನು ವೇಳೆಗೆ ಸರಿಯಾಗಿ ಮಳೆ ಬಿದ್ದರೆ ಜೂನ್ ಮೊದಲ ವಾರದಲ್ಲೇ ಮುಂಗಾರು ಬಿತ್ತನೆ ಪ್ರಾರಭಿಸುತೇವೆ.
ನಾಗೇಶ ದಡ್ಡಿ, ಕಡ್ಲಿಮಟ್ಟಿ ರೈತ.
ಬಿತ್ತನೆ ಅವಧಿ ಇನ್ನೂ ಹದಿನೈದು ದಿನ ಇದೆ. ಸರಿಯಗಿ ಮಳೆ ಬಿದ್ದರೆ ಬಿತ್ತನೆ ಪ್ರಾರಂಭಿಸುತ್ತೇವೆ. ಭೂಮಿ ಹದಗೊಳಿಸುವಷ್ಟು ಈಗಾಗಲೇ ಮಳೆಯಾಗಿದೆ.
ಷಣ್ಮುಖ ಶಿಂಪಿ, ಅಚನೂರ ರೈತ.