Advertisement

ಬಾಡಿಗೆ ಜಮೀನಲ್ಲಿ ವೀಳ್ಯ ಬೆಳೆದು ಭೂಮಿ ಒಡೆಯರಾದರು

03:15 PM Feb 12, 2018 | Harsha Rao |

ಮನೆ ಬಳಕೆಗಾಗಿ ವೀಳ್ಯದೆಲೆ ಬೆಳೆಯುವ ರೂಢಿ ಹೆಚ್ಚಿನವರಿಗಿದೆ. ಆದರೆ ವೀಳ್ಯದೆಲೆಯನ್ನು ಬೆಳೆದು, ಅದರಿಂದ ಲಾಭಗಳಿಸಿ ಭೂಮಿಯ ಒಡೆಯರೂ ಆಗಬಹುದೆಂಬುವುದನ್ನು ಗೋಕಾಕ್‌ ತಾಲೂಕಿನ ಮಲ್ಲಪುರ ಪಿ.ಜಿ.ಯ ಶಾಂತವ್ವ ಮತ್ತು ಈರಣ್ಣ ತೆಳಗಿನಮನೆ ದಂಪತಿ ತೋರಿಸಿಕೊಟ್ಟಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಶಾಂತವ್ವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿದ್ಯಾಲಕ್ಷಿ$¾à ಸ್ವಸಹಾಯ ಸಂಘವನ್ನು ಸೇರಿದರು.  ಯೋಜನೆಯ ಸಹಾಯದಿಂದ ಬ್ಯಾಂಕ್‌ ಮೂಲಕ ಸಾಲವನ್ನು ಪಡೆದು ವೀಳ್ಯ ಬೆಳೆಯಲು ಆರಂಭಿಸಿದರು. ನಾಲ್ಕು ವರ್ಷಗಳಲ್ಲೇ ವೀಳ್ಯ ಭರ್ಜರಿ ಆದಾಯ ನೀಡಿದೆ.

Advertisement

ಇವರಿಗಿರುವುದು ಅಂಗೈ ಯಗಲದ ತುಂಡು ಭೂಮಿ. ಮನೆಯೆದುರಿಗಿರುವ ಹದಿನೈದು ಗುಂಟೆ ಜಮೀನನ್ನು ಗೇಣಿಗೆ ಪಡೆದು ಅದರಲ್ಲಿ ನುಗ್ಗೆ ಗಿಡನೆಟ್ಟರು.  ಒಂದು ವರ್ಷದ ನಂತರ ವೀಳ್ಯದ ಬಳ್ಳಿಯನ್ನು ನಾಟಿ ಮಾಡಿದ್ದರು. ಇದೀಗ ಅವು ಇಳುವರಿ ನೀಡುತ್ತಿವೆ.

ಯಾವ ತಳಿ ಸೂಕ್ತ? 
ಆವಾರಿ, ಪಪಾಡ ತಳಿಯನ್ನು ನಾಟಿ ಮಾಡಿದ್ದಾರೆ. ನಾಟಿಗೆ ಬೇಕಾದ ಬಳ್ಳಿ ಬೆಳೆಗಾರರ ಬಳಿ ಲಭ್ಯ. ಬಳ್ಳಿಗೆ ನರ್ಸರಿಗಳಲ್ಲಿ ರೂ.10 ದರವಿದೆ. ಬೆಳೆಗೆ ವಾರದಲ್ಲಿ ಎರಡು ಬಾರಿ ನೀರು ನೀಡಬೇಕು. ನೀರಾವರಿ ವ್ಯವಸ್ಥೆಯಿದ್ದರೆ ಸರ್ವಋತುಗಳಲ್ಲೂ ನಾಟಿ ಮಾಡಬಹುದಾಗಿದೆ. 

ಗದ್ದೆಯಲ್ಲಿ ಒಂದೂವರೆ ಅಡಿ ಅಗಲ, ಅರ್ಧ ಅಡಿಯಷ್ಟು ಗುಂಡಿ ತೆಗೆದ ಸಾಲುಗಳನ್ನು ನಿರ್ಮಿಸಿಕೊಳ್ಳಬೇಕು. ಅದರಲ್ಲಿ ನುಗ್ಗೆ ಗಿಡಗಳನ್ನು ನೆಟ್ಟು ಒಂದು ವರ್ಷಗಳ ಬಳಿಕ ವೀಳ್ಯ ಬಳ್ಳಿಯನ್ನು ನೆಟ್ಟಿದ್ದಾರೆ. ಬುಡದಿಂದ ಬುಡಕ್ಕೆ ಒಂದು ಅಡಿ, ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರವಿದ್ದರೆ ಇಳುವರಿ ಚೆನ್ನಾಗಿ ಬರುತ್ತದೆ. ನೆಟ್ಟ ನಂತರ ಸಾಲನ್ನು ಹಸಿ ಸೊಪ್ಪು, ಕಹಿಬೇವಿನ ಹಿಂಡಿ ಅಥವಾ ಕೊಟ್ಟಿಗೆ ಗೊಬ್ಬರ ಹಾಕಿ ಮುಚ್ಚಬೇಕು. ಬಳ್ಳಿ ಚಿಗುರುವ ತನಕ ಎರಡು ದಿನಕ್ಕೊಮ್ಮೆ ನೀರು ಹಾಯಿಸಿದ್ದಾರೆ. ನಂತರ ವಾರದಲ್ಲಿ ಎರಡು ಬಾರಿಯಂತೆ ಮೂರು ತಾಸುಗಳ ಕಾಲ ನೀರು ಹರಿಸುತ್ತಿದ್ದಾರೆ. ಆರು ತಿಂಗಳ ನಂತರ ಎಲೆ ಕಟಾವಿಗೆ ಸಿಕ್ಕಿದೆ. ತಿಂಗಳಲ್ಲೊಂದು ಬಾರಿ ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಿದ್ದಾರೆ.

ವರ್ಷದಲ್ಲೊಂದು ಬಾರಿ ಬುಡದಲ್ಲಿದ್ದ ಬಳ್ಳಿಗಳನ್ನು ಮುಚ್ಚಿ ಅದರ ಮೇಲೆ ಗೊಬ್ಬರ ಹಾಕುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ. 

Advertisement

ಎರಡು ತಿಂಗಳಿಗೊಮ್ಮೆ ಔಷಧಿ ಸಿಂಪಡಿಸುತ್ತಿರಬೇಕು. ಬಳ್ಳಿಗೆ ಚಾ ಹುಡಿ ಹಾಕಿದರೆ ಇಳುವರಿ ಜಾಸ್ತಿ ಸಿಗುತ್ತದೆಯಂತೆ. ಕಟಾವು, ನೀರಾಯಿಸುವ ಕೆಲಸವನ್ನು ದಂಪತಿಯೇ ಮಾಡಿ ಮುಗಿಸುತ್ತಿದ್ದಾರೆ. ವಾರಕ್ಕೆ 40 ಸಾವಿರ ಎಲೆ ಮಾರಾಟಕ್ಕೆ ಸಿಗುತ್ತಿದೆ. 1000 ಎಲೆಗೆ ರೂ. 110ರಿಂದ 120ರಂತೆ ಬೆಳಗಾವಿ ಮಾರುಕಟ್ಟೆಗೆ ನೀಡುತ್ತಾರೆ. ಜೂನ್‌ನಿಂದ ಆಗಸ್ಟ್‌ವರೆಗೆ ಬಹುಬೇಡಿಕೆಯಿದ್ದು ರೂ. 150 ರಂತೆ ಮಾರಾಟವಾಗುತ್ತದೆ. ಮಳೆಗಾಲದಲ್ಲಿ ಇಳುವರಿ ಕಡಿಮೆಯಾಗುತ್ತದೆ. ಎಲೆ ಒಂದು ವಾರದವರೆಗೆ ಬಾಳಿಕೆ ಬರುವುದರಿಂದ ಗೋಕಾಕ್‌ನಿಂದ ಎಲೆ ಮುಂಬಯಿಗೆ ರಫ್ತಾಗುತ್ತದೆ. ಪಾಪಡ ತಳಿಗೆ ಪುಣೆ, ಮುಂಬಯಿಯಲ್ಲಿ ಬಹುಬೇಡಿಕೆಯಿದೆ.

ಎಲೆ ಮಾರಾಟದಿಂದ ವಾರ್ಷಿಕ ಮೂರು ಲಕ್ಷ ರೂಪಾಯಿಯಷ್ಟು ಆದಾಯ  ಗಳಿಸುತ್ತಿದ್ದೇವೆ. ಇದರಲ್ಲಿ ಗೊಬ್ಬರ, ಭೂಮಿಯ ಗೇಣಿ ಮೊತ್ತ 40 ಸಾವಿರವನ್ನು ಕಳೆದು ಎರಡು ಲಕ್ಷ ರೂಪಾಯಿ ಉಳಿಕೆಯಾಗುತ್ತದೆ. ಗಿಡ ಮಾರಾಟದಿಂದಲೂ ನಲವತ್ತು ಸಾವಿರ ರೂಪಾಯಿ ಕೈ ಸೇರುತ್ತಿದೆ ಎನ್ನುವುದು ಬೆಳೆಗಾರರ ಅನುಭವದ ಮಾತು. ನುಗ್ಗೆಕಾಯಿಯಿಂದಲೂ 5,000 ಸಾವಿರ ರೂಪಾಯಿ ಕೈ ಸೇರುತ್ತಿದೆ. ಬಳ್ಳಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಹತ್ತರಿಂದ ಹದಿನೈದು ವರ್ಷಗಳ ಕಾಲ ಬದುಕುತ್ತದೆ. ಬಳ್ಳಿಗೆ ರೋಗಗಳು ಬಾರದಂತೆ ಮುಂಜಾಗರೂಕತೆ ವಹಿಸಬೇಕು. ಹದಿನೈದು ದಿನಕ್ಕೊಮ್ಮೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದರೆ ರೋಗಗಳು ಬಾಧಿಸುವುದಿಲ್ಲ ಅನ್ನುತ್ತಾರೆ. 

ವೀಳ್ಯದಿಂದ ಬಂದ ಆದಾಯವನ್ನು ಕೂಡಿಟ್ಟು ತಾವು ಸ್ವತಃ ಇಪ್ಪತ್ತು ಗುಂಟೆ ಜಮೀನನ್ನು ಖರೀದಿಸಿದ್ದಾರೆ. ಅದರಲ್ಲೂ ಕಳೆದ ವರ್ಷ ವೀಳ್ಯ ನಾಟಿ ಮಾಡಿದ್ದಾರೆ. ಬಾಡಿಗೆ ಜಮೀನಿನಲ್ಲಿ ವೀಳ್ಯ ಬೆಳೆದ ಭೂಮಿ ಖರೀದಿಸಿದ ಇವರ ಪ್ರಯತ್ನ ಸಾಕಷ್ಟು ಜಮೀನಿದ್ದೂ ಅದರಲ್ಲಿ ಬೆಳೆ ಬೆಳೆಯದೆ ಹಾಗೇ ಬಿಟ್ಟಿರುವ ರೈತರಿಗೆ ಮಾದರಿ. 

ಮಾಹಿತಿಗೆ- 9980333696

– ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next