Advertisement

Land Grant: ಜಿಂದಾಲ್‌ಗೆ ಕಡಿಮೆ ದರದಲ್ಲಿ ಜಮೀನು; ರಾಜ್ಯದ ಬೊಕ್ಕಸಕ್ಕೆ ನಷ್ಟ: ಬೊಮ್ಮಾಯಿ

10:52 PM Aug 23, 2024 | Team Udayavani |

ದಾವಣಗೆರೆ/ ಹಾವೇರಿ: ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ 3,667 ಎಕರೆ ಜಮೀನು ನೀಡಿರುವುದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಿದೆ. ಇದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ್ದು ಇದನ್ನು ತಕ್ಷಣ ನಿಲ್ಲಿಸದಿದ್ದರೆ ಇದರಲ್ಲಿ ಏನೋ ವ್ಯವಹಾರ ಕುದುರಿದೆ ಎಂಬ ಸಂದೇಹ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಂದಾಲ್ ಕಂಪನಿಗೆ ಜಮೀನು ನೀಡುವ ಕುರಿತು ನಾವು ಅಧಿಕಾರದಲ್ಲಿದ್ದಾಗ ಸಂಪುಟದ ಮುಂದೆ ಪ್ರಸ್ತಾಪ ಬಂದಾಗ ಚರ್ಚಿಸಿ ಸಂಪುಟ ಉಪ ಸಮಿತಿ ಮಾಡಿ, ಮಾರುಕಟ್ಟೆ ದರದಲ್ಲಿ ನೀಡಲು ತೀರ್ಮಾನ ಕೈಗೊಂಡಿದ್ದೆವು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಗ  ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಅವತ್ತು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ವಿರೋಧಿಸಿದ್ದವರು. ಈಗ ರಾಜ್ಯಕ್ಕೆ ನಷ್ಟವಾಗುವ ರೀತಿಯಲ್ಲಿ ತೀರ್ಮಾನ ಮಾಡುತ್ತಾರೆಂದರೆ, ಇದರಲ್ಲಿ ಏನೋ ವ್ಯವಹಾರ ಕುದುರಿದೆ ಎಂಬ ಸಂದೇಹ ಬರುತ್ತದೆ ಎಂದರು.

ಬಿಜೆಪಿಯವರ ಮಾತು ಕೇಳಿ ರಾಜ್ಯಪಾಲರು ವಿಧೇಯಕಗಳ ವಾಪಸ್ ಕಳುಹಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ನವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತಿಯವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವುದಕ್ಕೆ ಸಹಜವಾಗಿಯೇ ಕಾಂಗ್ರೆಸ್‌ನವರು ಆ ರೀತಿ ಹೇಳುತ್ತಾರೆ. ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಕೊಟ್ಟಾಗ ಕಾಂಗ್ರೆಸ್‌ನವರು ಏನು ಹೇಳಿದ್ದರು. ಅವರ ವಿರುದ್ಧವೂ ಖಾಸಗಿ ದೂರಿನ ಆಧಾರದಲ್ಲಿಯೇ ಪ್ರಾಸಿಕ್ಯೂಶನ್‌ ಗೆ ಅನುಮತಿ ನೀಡಲಾಗಿತ್ತು ಎಂದು ಹೇಳಿದರು.

ಕಾಂಗ್ರೆಸ್‌ ಸರಕಾರದ ಆಡಳಿತ ಹಳಿ ತಪ್ಪಿದೆ:  

ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಇಲ್ಲದೇ, ಹಣಕಾಸಿನ ವ್ಯವಸ್ಥೆ ಇಲ್ಲದೇ ಕೇವಲ ರಾಜಕೀಯ ಲಾಭಕ್ಕಾಗಿ ಮಾಡಿರುವ ಗ್ಯಾರಂಟಿ ಯೋಜನೆ ಇದು. ಅದರ ಹಿಂದೆ ಪ್ರಾಮಾಣಿಕತೆ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಎಲ್ಲರ ಮತ ಪಡೆಯಲು ಎಲ್ಲರಿಗೂ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅವರ ಬೊಕ್ಕಸಕ್ಕೆ ಬಿಸಿ ಮುಟ್ಟುತ್ತಿದೆ. ಮುಖ್ಯಮಂತಿಗಳು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುತ್ತಾರೆ. ಆದರೆ, ಒಳಗಡೆಯಿಂದ  ಗ್ಯಾರಂಟಿ  ಬದಲಾವಣೆ  ಕುರಿತು ಚರ್ಚೆ ನಡೆದಿದೆ.

ತಾಂತ್ರಿಕ ಕಾರಣ ನೀಡಿ ಪ್ರತಿ ತಿಂಗಳು ಗೃಹ ಲಕ್ಷ್ಮೀ ನೀಡುತ್ತಿಲ್ಲ. ಇದು ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ ಎನ್ನುವುದು ಸ್ಪಷ್ಟ. ವಿರೋಧ ಪಕ್ಷದವರು ಕೇಳಿದರೆ ಆರ್ಥಿಕ ಪರಿಸ್ಥಿತಿ ಸಧೃಢವಾಗಿದೆ ಎಂದು ಹೇಳುತ್ತಾರೆ. ಶಕ್ತಿ ಯೋಜನೆ ಹಣ, ಗೃಹ ಲಕ್ಷ್ಮೀಗೆ ದುಡ್ಡು ಕೊಟ್ಟಿಲ್ಲ. ರಾಜ್ಯದ ಆಡಳಿತ ಸಂಪೂರ್ಣವಾಗಿ ಹಳಿ ತಪ್ಪಿದೆ. ನೀರಿನ ದರ ಸೇರಿದಂತೆ ಎಲ್ಲ ದರಗಳೂ ಹೆಚ್ಚಳವಾಗಿವೆ ಎಂದು ಹೇಳಿದರು.

ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಎಸ್‌ಐಟಿ ರಚನೆ: 
ವಾಲ್ಮೀಕಿ ಹಗರಣದಲ್ಲಿ ಎಸ್ ಐಟಿ ರಚಿಸಿರೋದೇ ಕೇಸ್ ಮುಚ್ಚಿ ಹಾಕುವ ಸಲುವಾಗಿ ಎಂದು ಬೊಮ್ಮಾಯಿ ದೂರಿದರು.
ಸಂಪೂರ್ಣ ಸಾಕ್ಷೀ ಇದ್ದರೂ ಪ್ರಮುಖ ಆರೋಪಿಗಳ ಹೆಸರು ಬಿಟ್ಟಿದ್ದಾರೆ. ಎಸ್ ಐ ಟಿ ರಾಜಕಾರಣಿಗಳ, ಮಂತ್ರಿಗಳ ಆದೇಶ ವಿಲ್ಲದೆ ಮಾಡಿರಲು ಸಾಧ್ಯವಿಲ್ಲ. ಎಸ್ ಐ ಟಿ ಸಲ್ಲಿಸಿದ ಚಾರ್ಜ್ ಶೀಟ್ ಸತ್ಯದಿಂದ ಕೂಡಿಲ್ಲ ಪ್ರಕರಣ ಮುಚ್ಚಿ ಹಾಕುವ ಕುತಂತ್ರ. ನಾವು ಚಾರ್ಜ್ ಶೀಟ್ ನ್ನು ಪ್ರಶ್ನಿಸುತ್ತೇವೆ ಎಂದು ತಿಳಿಸಿದರು. ಡೆತ್ ನೋಟ್ ನಿಂದ ಇಡಿ ತನಿಖೆ ನಡೆಸುತ್ತಿದೆ, ಡೆತ್ ನೋಟ್ ನಲ್ಲಿ ಇರುವ ವಿಚಾರ ಬಿಟ್ಟು ಎಸ್ ಐಟಿ ತನಿಖೆ ಮಾಡುತ್ತಿದೆ. ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

Advertisement

ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಪಾದಯಾತ್ರೆ ತಪ್ಪಿಲ್ಲ:  
ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷರು ನಮ್ಮದೇ ಕೇಂದ್ರ ಸಚಿವರನ್ನು ರಾಜ್ಯದ ಹಾಗೂ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಭೇಟಿಯಾಗುತ್ತಾರೆ. ಅದರಲ್ಲಿ ವಿಶೇಷ ಏನು ಇಲ್ಲ. ನಾನೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರ ಭೇಟಿಯಾಗಿ ಬಂದಿದ್ದೇನೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತ್ಯೇಕ ಸಭೆ ಮಾಡುವ ಬಗ್ಗೆ ಹೈಕಮಾಂಡ್ ಗಮನದಲ್ಲಿದೆ. ಯತ್ನಾಳ್ ಅವರು ಪಕ್ಷದ ಬಲವರ್ಧನೆಗಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಪರ್ಯಾಯ ಪಾದಯಾತ್ರೆ ಅಲ್ಲ. ಕಾಂಗ್ರೆಸ್‌ನವರು ಅಧಿಕಾರದಲ್ಲಿಲ್ಲದಾಗ ಮಂಗಳೂರು ಕಡೆ ಒಂದು, ಕೃಷ್ಣಾ ಕಡೆ ಒಂದು ಯಾತ್ರೆ ಮಾಡಿದ್ದರು. ಇಲ್ಲಿ ವಾಲ್ಮೀಕಿ ಪ್ರಕರಣ ಇದೆ. ದಕ್ಷಿಣದಲ್ಲಿ ಮುಡಾ ಪ್ರಕರಣ ಇದೆ. ಹೀಗಾಗಿ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಅವರು ಪಾದಯಾತ್ರೆ ಮಾಡುತ್ತಾರೆ ಎಂದು ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next