Advertisement

ಎಸ್‌ಸಿ-ಎಸ್‌ಟಿಗಳ ಭೂಮಿಗಿಲ್ಲ ಕನ್ವರ್ಷನ್‌; ಮನೆ ಕಟ್ಟಲು ಬ್ಯಾಂಕ್‌ ಲೋನ್‌ಗೆ ಪರದಾಟ!

12:49 AM Sep 26, 2022 | Team Udayavani |

ಪುತ್ತೂರು: ಪರಿಶಿಷ್ಟ ಜಾತಿ/ ಸಮುದಾಯದವರಿಗೆ ಸರಕಾರದಿಂದ ಮಂಜೂರಾಗುವ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಬಳಕೆಗೆ ಭೂ ಪರಿವರ್ತನೆ (ಕನ್ವರ್ಷನ್‌) ಮಾಡುವ ಅವಕಾಶ ಇಲ್ಲವೆಂಬ ಕಾನೂನು ಅವರ ಪಾಲಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

Advertisement

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ ಅನ್ವಯ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಫ‌ಲಾನುಭವಿಗಳು ಸ್ವಂತ ಬಳಕೆಗೆ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸಲು ಉದ್ದೇಶಿಸಿದರೂ ಭೂಪರಿವರ್ತನೆಗೆ ಅವಕಾಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇಲ್ಲವಾಗಿದೆ. ಒಟ್ಟಿನಲ್ಲಿ ಇಲಾಖೆಗಳು ಕೂಡ ಸಮಸ್ಯೆಗೆ ಪರಿಹಾರ ನೀಡಲಾಗದೆ ಸರಕಾರದ ಕಡೆಗೆ ಬೆರಳು ತೋರಿಸುವ ಸ್ಥಿತಿ ನಿರ್ಮಾಣ ಆಗಿದೆ.

ಸಮಸ್ಯೆ ಏನು?
ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಕೃಷಿ ಬಳಕೆಗಾಗಿ ಸರಕಾರ ಭೂಮಿಯನ್ನು ಮಂಜೂರು ಮಾಡಿರುತ್ತದೆ. ಅದನ್ನು ಅನ್ಯ ಉದ್ದೇಶಗಳಿಗೆ ಬಳಸಲು ಪರಿವರ್ತನೆ ಮಾಡಿದರೆ ಅದು ಬಲಾಡ್ಯರ ಪಾಲಾಗುತ್ತದೆ. ಹೀಗಾಗಿ ಕನ್ವರ್ಷನ್‌ಗೆ ಅವಕಾಶವಿಲ್ಲ ಎಂದು ಸರಕಾರವು ಒಂದು ವರ್ಷದ ಹಿಂದೆ ಆದೇಶ ನೀಡಿತ್ತು.

ಫಲಾನುಭವಿಯು ಸರಕಾರದ ವಸತಿ ಯೋಜನೆಯಡಿ ಅಥವಾ ಸ್ವತಃ ಮನೆ ಕಟ್ಟಲು ಪಂಚಾಯತ್‌ಗೆ ಅರ್ಜಿ ಸಲ್ಲಿಸುವ ಸಂದರ್ಭ ಭೂ ಪರಿವರ್ತನೆ ಪತ್ರ ಸಲ್ಲಿಸಬೇಕು. ಆದರೆ ಜಮೀನಿನ (ಭೂ ನ್ಯಾಯ ಮಂಡಳಿಯಿಂದ ಮಂಜೂರಾತಿ ಹೊರತುಪಡಿಸಿ) ಕನ್ವರ್ಷನ್‌ಗೆ ಅವಕಾಶವೇ ಇಲ್ಲದಿರುವಾಗ ಪತ್ರ ಸಲ್ಲಿಸುವುದೆಲ್ಲಿಂದ? ಜಮೀನನ್ನು ವಾಣಿಜ್ಯ ಬಳಕೆಗಾಗಿ ಭೂ ಪರಿವರ್ತನೆ ಮಾಡಿದರೆ ಜಮೀನಿನ ಮಾರುಕಟ್ಟೆ ಮೌಲ್ಯ ಹೆಚ್ಚಾಗಿ ಬ್ಯಾಂಕ್‌ನಿಂದ ಅಧಿಕ ಸಾಲ ಸೌಲಭ್ಯ ಸಿಗುತ್ತದೆ. ಸರಕಾರದ ಸಹಾಯಧನದಿಂದ ಮಾತ್ರ ಮನೆ ಕಟ್ಟಲು ಸಾಧ್ಯವಾಗದಿರುವಾಗ ಕನ್ವರ್ಷನ್‌ ಆಗಿರುವ ಪತ್ರ ಇರಿಸಿದಲ್ಲಿ ಬ್ಯಾಂಕ್‌ನಿಂದ ಹೆಚ್ಚು ಸಾಲ ದೊರೆತು ಅನುಕೂಲವಾಗುತ್ತಿತ್ತು. ಆದರೆ ಈ ಸೌಲಭ್ಯವನ್ನು ಅವರು ಪಡೆಯಲಾಗುತ್ತಿಲ್ಲ.

ಭೂ ಪರಿವರ್ತನೆ ಕಡ್ಡಾಯ ಬೇಕು
ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಣಿಜ್ಯ ಅಥವಾ ವಾಸ್ತವ್ಯ ಆಧಾರಿತ ಕಟ್ಟಡ ನಿರ್ಮಿಸಲು ಆ ಸ್ಥಳ ಕನ್ವರ್ಷನ್‌ ಆಗಿರಬೇಕು. ಬಳಿಕ ಗ್ರಾ.ಪಂ.ನಲ್ಲಿ 9/11ಎಗೆ ಅರ್ಜಿ ಸಲ್ಲಿಸಬೇಕು. ಕನ್ವರ್ಷನ್‌ ನಕ್ಷೆ, ಆದೇಶ ಸಹಿತ ಇತರ ದಾಖಲೆಯೊಂದಿಗೆ ಫಲಾನುಭವಿಯು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಬಳಿಕ “ಇ ಸ್ವತ್ತು’ ಸಾಫ್ಟ್ವೇರ್‌ ಮೂಲಕ ಗ್ರಾ.ಪಂ. ಸಿಬಂದಿ ಅಪ್‌ಲೋಡ್‌ ಮಾಡುತ್ತಾರೆ. 9/11 “ಎ’ ಇಲ್ಲದೆ ಪಂಚಾಯತ್‌ಗೆ ಕಟ್ಟಡ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಕಟ್ಟಡ ಪರವಾನಿಗೆ, 9/11 ಇಲ್ಲದೆ ಸಾಲಕ್ಕೆ ಅರ್ಜಿ ಸಲ್ಲಿಸಲಾಗದು. ಪರವಾನಿಗೆ ಪತ್ರ ಇಲ್ಲದೆ ಸರಕಾರದ ಸಹಾಯಧನದಲ್ಲಿ ನಿರ್ಮಿಸಲಾಗುವ ಮನೆ ಸಹಿತ ಯಾವುದೇ ಕಟ್ಟಡ ನಿರ್ಮಾಣ ಆರಂಭಿಸಲಾಗುತ್ತಿಲ್ಲ.

Advertisement

ಭೂ ಪರಿವರ್ತನೆ ಇಲ್ಲದೆ ಮನೆ ಕಟ್ಟಲು, ಸಾಲ ಪಡೆಯಲು ಅಡ್ಡಿಯಾಗಿ ದಲಿತರು ಸವಲತ್ತಿಗಾಗಿ ಕಚೇರಿ ಕಚೇರಿ ಅಲೆದಾಡುವ ಸ್ಥಿತಿ ಉಂಟಾಗಿದೆ. ಸರಕಾರವು ಎಸ್‌ಸಿ-ಎಸ್‌ಟಿಗಳಿಗೆ ಕಟ್ಟಡ ಪರವಾನಿಗೆಗೆ, ಬ್ಯಾಂಕ್‌ ಲೋನ್‌ಗೆ ಭೂ ಪರಿವರ್ತನೆ ಪತ್ರ ಕಡ್ಡಾಯ ಅಲ್ಲ ಎಂಬ ನಿಯಮ ಜಾರಿಗೆ ತರಬೇಕು ಅಥವಾ ಭೂ ಪರಿವರ್ತನೆಗೆ ಅವಕಾಶ ನೀಡಬೇಕು.
– ಮುಖೇಶ್‌ ಕೆಮ್ಮಿಂಜೆ
ಮಾಜಿ ಸದಸ್ಯರು ನಗರಸಭೆ

ಭೂ ಪರಿವರ್ತನೆ ಪತ್ರ ಇಲ್ಲದೆ ಎಸ್‌ಸಿ-ಎಸ್‌ಟಿ ವರ್ಗಕ್ಕೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಒಂದೆರಡು ಜಿಲ್ಲೆಗಳಿಗೆ ಮಾತ್ರ ನಿಯಮ ಸಡಿಲಿಕೆ ಮಾಡಿ ಸುತ್ತೋಲೆ ಹೊರಡಿಸಲು
ಅವಕಾಶ ಇಲ್ಲ. ನಿಯಮಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕಾನೂನು ವಿಭಾಗದ ಅಭಿಪ್ರಾಯ ಪಡೆಯಲು ಚಿಂತನೆ ನಡೆದಿದೆ. ಭೂ ಪರಿವರ್ತನೆಗೆ ಅವಕಾಶ ನೀಡಲು ಸರಕಾರವು ಅನುಮತಿ ನೀಡುವ ವಿಚಾರವು ಪರಿಶೀಲನೆಯ ಹಂತದಲ್ಲಿದೆ.
– ಸಿ. ಬಲರಾಮ್‌, ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ, ಕರ್ನಾಟಕ ಸರಕಾರ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next