ಬಳ್ಳಾರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮಾದರಿಯಲ್ಲಿಯೇ ಬಳ್ಳಾರಿಯಲ್ಲಿ ಸುಸಜ್ಜಿತವಾದ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲು ಹೊಸಪೇಟೆ ಬೈಪಾಸ್ನಲ್ಲಿ 26 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ರಾಘವಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ, ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ‘ಕಿಸಾನ್ ಭಾಗಿದಾರಿ ಪ್ರಾಥಮಿಕ್ತ ಹಮಾರಿ’ ಆಂದೋಲನ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಮೆಣಸಿನಕಾಯಿ ಬೆಳೆ ವಿಚಾರ ಸಂಕಿರಣಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಗುಣಮಟ್ಟದ ಮೆಣಸಿನಕಾಯಿ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೇ ನಾವು ಮೆಣಸಿನಕಾಯಿ ಬೆಳೆದರೂ ಮಾರುಕಟ್ಟೆಗೆ ಬ್ಯಾಡಗಿ ಸೇರಿದಂತೆ ದೂರದ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಅದನ್ನು ತಪ್ಪಿಸುವ ಸಲುವಾಗಿ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಸುಸಜ್ಜಿತ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದ ಸಚಿವರು, ಜೊತೆಗೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ಸಲುವಾಗಿ ಆಲದಹಳ್ಳಿಯಲ್ಲಿ 10 ಎಕರೆ ಜಾಗವನ್ನ ಸಹ ಗುರುತಿಸಲಾಗಿದ್ದು, ಈ ಪ್ರದೇಶವನ್ನ ಕೃಷಿ ಸಂಸ್ಕರಣಾ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮೆಣಸಿನಕಾಯಿ ಬೆಳೆ ಸಂಬಂ ಧಿತ ಚಟುಷಟಿಕೆಗಳಿಗೆ ಉದ್ದಿಮೆಯ ರೂಪ ನೀಡಿ, ಸಣ್ಣ ಉದ್ದಿಮೆಗಳನ್ನು ಸದೃಢಗೊಳಿಸುವ ಮೂಲಕ ಜಿಲ್ಲೆಯ ಆರ್ಥಿಕತೆ ಬಲಗೊಳಿಸುವ ಉದ್ದೇಶವಿದೆ. ಇದರಡಿ ಬೆಳೆ ಬೆಳೆಯುವುದು, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಹಂತಗಳಲ್ಲಿ ಸರ್ಕಾರ ರೈತರಿಗೆ ಬಲ ತುಂಬುವ ಮೂಲಕ, ಬೆಳೆಗೆ ತಕ್ಕ ಬೆಲೆ ಹಾಗೂ ಲಾಭ ಕಲ್ಪಿಸುವ ಉದ್ದೇಶ ಇದೆ. ಹೀಗೆ ಜಿಲ್ಲೆಯ ಮೆಣಸಿನಕಾಯಿ ಸೇರಿದಂತೆ ಎಲ್ಲ ರೈತರ ಹಿತ ಕಾಪಾಡುವ ಜೊತೆಗೆ ಬಲ ತುಂಬಲು ಸರ್ಕಾರ ಬದ್ಧವಾಗಿದೆ ಎಂದರು.
Related Articles
ಸಂಸದ ವೈ.ದೇವೇಂದ್ರಪ್ಪ ಅವರು ಮಾತನಾಡಿ, ಒಂದೇ ಬೆಳೆ ಬೆಳೆಯುವುದಕ್ಕೆ ಜೋತುಬೀಳದೇ ಯಾವ ಬೆಳೆಗಳು ಈ ಪ್ರದೇಶದಲ್ಲಿ ಬೆಳೆದರೆ ಅನುಕೂಲವೆಂಬುದನ್ನು ಅಧಿಕಾರಿಗಳು ಮತ್ತು ವಿಜ್ಞಾನಿಗಳಿಂದ ತಿಳಿದುಕೊಂಡು ಬೆಳೆಯಲು ಮುಂದಾಗಬೇಕು ಎಂದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ಇಡೀ ಜಗತ್ತಿಗೆ ಅನ್ನ ನೀಡುವ ರೈತ ಇಂದು ಹವಾಮಾನ ವೈಪರೀತ್ಯದಿಂದ ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾನೆ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಭತ್ತವನ್ನೇ ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತಿದೆ. 2 ಬೆಳೆಗೆ ನೀರು ಪಡೆದುಕೊಂಡರೂ ಸಹ ರೈತರು ಲಾಭದಾಯಕರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ರೈತರು ಚೆನ್ನಾಗಿದ್ದರೇ ಇಡೀ ದೇಶವೇ ಚೆನ್ನಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ 26 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದ್ದು, 100 ಕೋಟಿ ಅನುದಾನವನ್ನು ನಮ್ಮ ಸರ್ಕಾರ ಬಿಡುಗಡೆ ಮಾಡುತ್ತಿದೆ. ರೈತರು ಒಂದೇ ಬೆಳೆಗೆ ಮೊರೆ ಹೋಗದೇ ಅಕಾರಿಗಳು ಮತ್ತು ವಿಜ್ಞಾನಿಗಳ ಅಭಿಪ್ರಾಯಗಳನ್ನು ಆಲಿಸಿ ಬೆಳೆ ಬೆಳೆಯುವುದು ಸೂಕ್ತ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಪಿ. ಭೋಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಜೆ.ಲಿಂಗಮೂರ್ತಿ, ಬುಡಾ ಅಧ್ಯಕ್ಷ ಪಿ.ಪಾಲನ್ನ, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಪಿ.ಜಿ.ಚಿದಾನಂದಪ್ಪ, ಎಪಿಎಂಸಿ ಅಧ್ಯಕ್ಷ ಉಮೇಶ, ಕಲಬುರಗಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಹಿರಿಯ ಸಹಾಯಕ ನಿರ್ದೇಶಕ ಎಚ್.ಕೆ.ಯೋಗೇಶ್ವರ ಮತ್ತಿತರರು ಇದ್ದರು. ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿಜ್ಞಾನಿಗಳು, ಸಹಾಯಕ ಪ್ರಾಧ್ಯಾಪಕರು, ಮೆಣಸಿನಕಾಯಿ ಬೆಳೆ ನಿರ್ವಹಣೆ, ಸಮಗ್ರ ರೋಗ ನಿರ್ವಹಣೆ ಕ್ರಮಗಳು, ವ್ಯಾಪಾರ, ಮೌಲ್ಯವರ್ಧನೆಗೆ ವಿಫುಲ ಅವಕಾಶಗಳು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.