Advertisement

ರಾ.ಹೆ. ಭೂ ಸಂತ್ರಸ್ತರಿಗೆ ಪರಿಹಾರ ವಿತರಣೆ ವಿಳಂಬ: ಮಾ. 7ರಂದು ಪ್ರತಿಭಟನೆ

12:56 AM Feb 23, 2023 | Team Udayavani |

ಮೂಡುಬಿದಿರೆ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ಚತುಷ್ಪಥ ಯೋಜನೆ ಪ್ರಗತಿಯಲ್ಲಿದ್ದು ಭೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಮಾ. 7ರಂದು ಜಿಲ್ಲಾಧಿಕಾರಿ ಮತ್ತು ಭೂಸ್ವಾಧೀನ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಭೂ ಸಂತ್ರಸ್ತರ ಸಮಿತಿ ನಿರ್ಧರಿಸಿದೆ.

Advertisement

ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥಾಮಸ್‌ ಮಾತನಾಡಿ, 3 ಗ್ರಾಮಗಳ ಪರವಾಗಿ ಹೈಕೋರ್ಟ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ಮತ್ತೆ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ನಡೆಯು ಪರಿಹಾರ ಸಲ್ಲಿಕೆ ವಿಳಂಬಿಸಲು ಹೂಡಿದ ತಂತ್ರವಾಗಿದೆ. ತನ್ಮೂಲಕ ಹೆದ್ದಾರಿ ಕಾಮಗಾರಿಯು ಸರಾಗವಾಗಿ ನಡೆಯದಂತೆ ಮಾಡುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ಪದೇ ಪದೆ ಪಥ ಬದಲು
ಸಮಿತಿಯ ಕೋಶಾಧಿಕಾರಿ ರತ್ನಾಕರ ಶೆಟ್ಟಿ ಮಾತನಾಡಿ, ಈಗ ಇರುವ ರಸ್ತೆಯ ಪಥವನ್ನು ಅಧಿಕಾರಿಗಳು ಮತ್ತೆ ಮತ್ತೆ ಬದಲಾವಣೆ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಭೂ ನೋಟಿಫಿಕೇಶನ್‌ ಆಗದ ಭೂಮಿಯಲ್ಲಿ ಯಾರಾದರೂ ಅನಧಿಕೃತವಾಗಿ ಸರ್ವೇ ನಡೆಸಲು ಬಂದರೆ ಅದಕ್ಕೆ ತಡೆಯೊಡ್ಡಿ ಎಂದು ಸಂತ್ರಸ್ತರಿಗೆ ಹೇಳಿದರು.

ಉಪಾಧ್ಯಕ್ಷ ಮಿಜಾರು ಬೃಜೇಶ್‌ ಶೆಟ್ಟಿ ಮಾತನಾಡಿ, ನಮ್ಮ ಹೋರಾಟದಿಂದ ಸಾಣೂರು, ಪುತ್ತಿಗೆ, ಪಡುಮಾರ್ನಾಡು ಗ್ರಾಮಗಳ ಭೂಸಂತ್ರಸ್ತರಿಗೆ 21 ಕೋಟಿಯಷ್ಟು ಹೆಚ್ಚು ಪರಿಹಾರ ಮೊತ್ತ ಸಿಕ್ಕಿದೆ. ಉಳಿದ 17 ಗ್ರಾಮಗಳ ಭೂ ಸಂತ್ರಸ್ತರು ಒಟ್ಟಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರೆ ಕನಿಷ್ಠ 300 ಕೋಟಿಯಷ್ಟು ಹೆಚ್ಚು ಪರಿಹಾರ ಸಿಗಲಿದೆ ಎಂದರು.

ಬಡಗುಳಿಪಾಡಿಯ ಕರಾಮತ್‌ ಆಲಿ, ತೋಡಾರಿನ ಅಶ್ವಿ‌ನಿ ನಾಯಕ್‌, ಜಯರಾಮ ಭಟ್‌, ಬೆಳುವಾಯಿ ಸದಾಶಿವ ಶೆಟ್ಟಿ ಮೊದಲಾದವವರು ಅಧಿಕಾರಿಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಮಾತನಾಡಿದರು.ವೇದಿಕೆಯಲ್ಲಿ ಸಮಿತಿಯ ಸದಸ್ಯರಾದ ಜಯರಾಮ ಪೂಜಾರಿ, ನರಸಿಂಹ ಕಾಮತ್‌, ಪ್ರೇಮಲತಾ ಶೆಟ್ಟಿ ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next