Advertisement

ಏರ್‌ಪೋರ್ಟ್‌ಗಾಗಿ ಭೂ ಸ್ವಾಧೀನಕ್ಕೆ ಸಭೆ

02:44 PM Jun 10, 2022 | Team Udayavani |

ರಾಯಚೂರು: ಯರಮರಸ್‌ ಬಳಿಯ ಉದ್ದೇಶಿತ ವಿಮಾನ ನಿಲ್ದಾಣಕ್ಕೆ 23 ಎಕರೆಯಷ್ಟು ಭೂಮಿ ಅಗತ್ಯವಿದ್ದು, ನೇರ ಖರೀದಿ ಅಥವಾ ಸ್ವಾಧೀನ ಪ್ರಕ್ರಿಯೆ ನಡೆಸುವ ಕುರಿತು ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್‌ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಸಲಾಯಿತು.

Advertisement

ಸಮೀಪದ ಯರಮರಸ್‌ ಸಮೀಪದ ವಿಐಪಿ ಸರ್ಕ್ನೂಟ್‌ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಹೆಚ್ಚುವರಿ ಭೂಸ್ವಾಧೀನ ಕುರಿತು ಏಗನೂರು ಹಾಗೂ ಯರಮರಸ್‌ ದಂಡ ನಿವಾಸಿಗಳ ಸಭೆ ನಡೆಯಿತು.

ವಿಮಾನ ನಿಲ್ದಾಣ ಪ್ರಕ್ರಿಯೆಗಳು ನಡೆದಿದ್ದು, ರೈಟ್‌ ಸಂಸ್ಥೆ ನೀಡಿದ ವರದಿಯಲ್ಲಿ ಇನ್ನೂ ಸ್ಥಳಾಭಾವ ಎದುರಾದ ಕಾರಣ ಇನ್ನೂ 23 ಎಕರೆ ಭೂಮಿ ಬೇಕಾಗಿದೆ. ಅದರಲ್ಲಿ ಜಮೀನು ಮಾತ್ರವಲ್ಲದೇ ಕೆಲವೊಂದು ಮನೆಗಳು ಕೂಡ ತೆರವು ಮಾಡಬೇಕಾಗಬಹುದು. ಅದಕ್ಕೆ ಏಗನೂರು, ಯರಮರಸ್‌ ದಂಡ ಗ್ರಾಮಸ್ಥರ ಸಹಕಾರ ಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ಜಮೀನನ್ನು ನೇರ ಖರೀದಿ ಹಾಗೂ ಸ್ವಾಧೀನ ಪ್ರಕ್ರಿಯೆ ಮೂಲಕ ಪಡೆಯಲಾಗುವುದು. ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಇನ್ನೂ ಮನೆಗಳನ್ನು ತೆರವು ಮಾಡಿದಲ್ಲಿ ಅವರಿಗೆ ಪರ್ಯಾಯವಾಗಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಇಲ್ಲವೇ ಲೋಕೋಪಯೋಗಿ ಇಲಾಖೆಯಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಲಾಯಿತು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ನಮ್ಮ ಭೂಮಿ, ಮನೆಗಳನ್ನು ಪಡೆದರೂ ಪರ್ಯಾಯವಾಗಿ ಭೂಮಿ ಮನೆ ನೀಡಿದರೆ ಅನುಕೂಲವಾಗಲಿದೆ. ಗ್ರಾಮಸ್ಥರು ಎಲ್ಲರೂ ಉತ್ತಮ ಬಾಂಧವ್ಯದೊಂದಿಗೆ ಜೀವನ ನಡೆಸುತ್ತಿದ್ದೇವೆ. ಅರ್ಧ ಊರು ಮಾತ್ರ ತೆರವು ಮಾಡಿದರೆ ಇನ್ನರ್ಧ ಊರಿನ ಜನ ಅಲ್ಲಿಯೇ ಇರಬೇಕಾಗುತ್ತದೆ. ಹೀಗಾಗಿ ಇಡೀ ಊರನ್ನೇ ಸ್ಥಳಾಂತರ ಮಾಡಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಈಗ ನಮಗೆ ಬೇಕಿರುವ ಭೂಮಿಯ ಸರ್ವೇ ಮಾಡಲು ತಿಳಿಸಲಾಗಿದೆ. ಒಟ್ಟು 60 ಜನರಿಗೆ ಭೂಮಿ, ಮನೆಗಳು ತೆರವಾಗಬಹುದು ಎಂದು ಅಂದಾಜಿಸಲಾಗಿದೆ. ಸರ್ವೇ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೇ, ಜಮೀನಿನ ದರ ನಿಗದಿ ಕುರಿತು ಮತ್ತೂಮ್ಮೆ ಸಭೆ ನಡೆಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್‌ ಡಾ| ಹಂಪಣ್ಣ ಸಜ್ಜನ್‌, ನಗರಸಭೆ ಸದಸ್ಯ ಸಣ್ಣ ನರಸರೆಡ್ಡಿ, ಲೋಕೋಪಯೋಗಿ ಇಲಾಖೆ, ಭೂ ಮಾಪನಾ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next