ಹಾಸನ: ತಾಲೂಕಿನ ಸೋಮನಹಳ್ಳಿ ಕಾವಲು ಗೌರಿಪುರದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಆರ್. ಪ್ರಜ್ವಲ್ ಅವರು ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂಬ ದೂರನ್ನು ವಿಶೇಷ ನ್ಯಾಯಾಲಯವು ವಜಾ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎ.ಮಂಜು ಹೂಡಿದ್ದ ಆದರೆ ದಾವೆಯಲ್ಲಿ ಹುರುಳಿಲ್ಲವೆಂದು ನ್ಯಾಯಾಲಯವು ವಜಾ ಮಾಡಿದೆ ಎಂದರು.
ಮಂಜು ವಿರುದ್ಧ ವಾಗ್ಧಾಳಿ: ಸರ್ಕಾರಿ ಭೂಮಿ ಕಬಳಿಕೆಯಂತಹ ಕೆಲಸವನ್ನು ನಮ್ಮ ಕುಟುಂಬ ಎಂದೂ ಮಾಡುವುದಿಲ್ಲ. ಚುನಾವಣೆಯಲ್ಲಿ ನಮ್ಮನ್ನು ಎದುರಿಸಿ ಗೆಲ್ಲಲಾಗವರು ಇಂತಹ ಚೇಷ್ಟೆಯನ್ನು ಮಾಡುತ್ತಿರುತ್ತಾರೆ ಎಂದು ಎ. ಮಂಜು ಅವರ ವಿರುದ್ಧ ಎಚ್.ಡಿ.ರೇವಣ್ಣ ಅವರು ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಶಾಸಕರಾಗಿ, ಮಂತ್ರಿ ಯಾಗಿ ಆ ಪಕ್ಷಕ್ಕೇ ದ್ರೋಹ ಮಾಡಿದ ಎ.ಮಂಜು ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿ ಹೋಗಿದ್ದಾರೆ. ಇನ್ನು ನರೇಂದ್ರ ಮೋದಿ ಯವರಿಗೆ ಹಾಗೂ ಯಡಿಯೂರಪ್ಪ ಅವರಿಗೆ ಯಾವಾಗ ಟೋಪಿ ಹಾಕುತ್ತರೋ ನೋಡ ಬೇಕು ಎಂದು ವ್ಯಂಗ್ಯವಾಡಿದರು.
ಸರ್ಕಾರ ಸ್ಥಿರವಾಗಿದೆ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನವೇ ರಾಜ್ಯದ ಸಮ್ಮಿಶ್ರ ಸರ್ಕಾರ
ಪತನವಾಗುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಕಳೆದ 9 ತಿಂಗಳಿನಿಂದಲೂ ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ.
ಜನರ ಬೆಂಬಲ, ದೈವಾನುಗ್ರಹ ಇರುವವರೆಗೂ ಸರ್ಕಾರಕ್ಕೆ ಏನೂ ಆಗಲ್ಲ ಎಂದು ಸ್ಪಷ್ಟಪಡಿಸಿದರು. ಹಾಸನದ ಕ್ಷೇತ್ರದ ಶಾಸಕ ವರ್ತನೆಯಿಂದ ಬೇಸತ್ತ ಬಿಜೆಪಿ ಮುಖಂಡರಾದ ಮಾಜಿ ಶಾಸಕ ಬಿ.ವಿ.ಕರೀಗೌಡ, ಹಾಸನ ತಾಲೂಕು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಟ್ಟಾಯ ಅಶೋಕ್
ಅವರು ತಮ್ಮ ಬೆಂಬಗಲಿರೊಂದಿಗೆ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದರು.
ಹಾಸನ ಜಿಲ್ಲೆಯ ಅಭಿವೃದ್ದಿ ನಮ್ಮ ಮುಖ್ಯ ಗುರಿ. ಅಭಿವೃದ್ಧಿಯ ಬೇಡಿಕೆಯನ್ನು ನಾವು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ
ಎಂದರು. ಬಿ.ವಿ.ಕರೀಗೌಡ, ಅಗಿಲೆ ಯೋಗೀಶ್, ಕಟ್ಟಾಯ ಅಶೋಕ್ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜ್ವಲ್ ಪರ ಪ್ರಚಾರಕ್ಕೆ ಸಿದ್ದು ಬರಲಿದ್ದಾರೆ
ಹಾಸನ: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಪ್ರಜ್ವಲ್ ಅವರ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ಲೋಕೋಪಯೋಗಿ
ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಕಡೂರು, ಅರಸೀಕೆರೆ, ಅರಕಲಗೂಡಿ ನಲ್ಲಿ ಚುನಾವಣಾ ಪ್ರಚಾರ ಮಾಡಲು ಸಿದ್ದರಾಮಯ್ಯ ಅವರು ಆಗಮಿಸಲಿದ್ದು,
ಅವರೇ ಸೂಕ್ತ ದಿನಾಂಕವನ್ನು ನೀಡಲಿದ್ದಾರೆ ಎಂದರು. ಈಗಾಗಲೇ ಹಲವು ಕಾಂಗ್ರೆಸ್ ಮುಖಂಡರು ಪ್ರಜ್ವಲ್ ಪರ
ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕಡೂರು ಕ್ಷೇತ್ರದ 2018 ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ
ಕೆ.ಎಸ್. ಆನಂದ್ ಅವರು ಪ್ರಜ್ವಲ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದರು.