ಬೆಂಗಳೂರು: ಬನಶಂಕರಿ 5ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಡಿಸಿಕೊಂಡಿದ್ದ ಕೆಲವು ಪ್ರದೇಶಗಳ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2016ರಲ್ಲಿ ನೀಡಿದ್ದ ಆದೇಶಕ್ಕೆ ಬುಧವಾರ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಭೂಸ್ವಾಧೀನ ಅಂತಿಮ ಅಧಿಸೂಚನೆ ರದ್ದುಗೊಳಿಸಿದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ್ದ ಮೇಲ್ಮನವಿಯು ಹಂಗಾಮಿ ಮುಖ್ಯ ನ್ಯಾ. ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ
ನ್ಯಾಯಪೀಠದ ಮುಂದೆ ವಿಚಾರಣೆ ಬಂದಿತ್ತು. ಈ ವೇಳೆ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಬಿಡಿಎ ನಿಯಮದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಐದು ವರ್ಷಗಳಲ್ಲಿ ಬಡಾವಣೆ ನಿರ್ಮಾಣ ಯೋಜನೆ ಪೂರ್ಣಗೊಳಿಸಿಲ್ಲವೆಂಬ ಕಾರಣಕ್ಕೆ ಏಕಸದಸ್ಯ ಪೀಠ ಭೂ ಸ್ವಾಧೀನ ರದ್ದುಗೊಳಿಸಿದೆ. ಆದರೆ ಯೋಜನೆ ಅವಧಿ ಮೀರಿದ್ದರೂ ಅದು ರದ್ದಾಗಿಲ್ಲ. ಹಾಗಾಗಿ ಭೂ ಸ್ವಾಧೀನ ಕುರಿತ ಅರ್ಜಿಗಳು ನ್ಯಾಯಾಲಯಗಳಲ್ಲಿ ಬಾಕಿ ಇದಿದ್ದರಿಂದ ಯೋಜನೆ ಪೂರ್ಣಗೊಳಿಸಲಾಗಿಲ್ಲ. ಅಲ್ಲದೆ, ಬಡಾವಣೆ ಅಭಿವೃದ್ಧಿ ಯೋಜನೆ ರದ್ದಾದರೂ ಸಹ ಭೂ ಸ್ವಾಧೀನ ರದ್ದಾಗುವುದಿಲ್ಲ. ಏಕಸದಸ್ಯಪೀಠ ಈ ಆದೇಶ ನೀಡುವಲ್ಲಿ ಹಲವು ಅಂಶಗಳನ್ನು ಪರಿಗಣಿಸಿಲ್ಲವೆಂದು ನ್ಯಾಯಪೀಠಕ್ಕೆ ವಿವರಿಸಿದರು.
ಯೋಜನೆಯ ಅವಧಿ ಮುಗಿದಿರುವ ಹಿನ್ನೆಲೆ ಕೆಲವು ಪ್ರದೇಶಗಳ ಭೂ ಸ್ವಾಧೀನವನ್ನು ರದ್ದುಗೊಳಿಸಿ ಏಕಸದಸ್ಯ ನ್ಯಾಯಪೀಠ 2016ರಲ್ಲಿ ಆದೇಶಿಸಿತ್ತು. ಅಲ್ಲದೆ, ಹಲವು ಕಡೆ ಕಂದಾಯ ನಿವೇಶನಗಳಲ್ಲಿ ಕಟ್ಟಡಗಳು ನಿರ್ಮಾಣವಾಗಿದ್ದರಿಂದ ಭೂ ಸ್ವಾಧೀನ ಆದೇಶ ರದ್ದು ಮಾಡಿತ್ತು. ಸುಮಾರು 1400 ಎಕರೆ ಭೂಮಿಯ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ 160 ಎಕರೆ ಜಾಗ ಮಾತ್ರ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲವೆಂದು ಏಕಸದಸ್ಯಪೀಠ ಆದೇಶದಲ್ಲಿ ಹೇಳಿತ್ತು.
ಬನಶಂಕರಿ ಐದನೇ ಹಂತದ ಬಡಾವಣೆ ನಿರ್ಮಾಣಕ್ಕೆ ಉತ್ತರಹಳ್ಳಿ ಸುತ್ತಮುತ್ತ ಭೂಸ್ವಾಧೀನಕ್ಕೆ 1989ರ ಏ.13 ರಂದು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ನಂತರ 1999ರ ಅ.7ರಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ನ್ಯಾಯಾಲಯ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಿತ್ತು.