Advertisement

ಲಾಲೂ ನೇತೃತ್ವದ RJDಗೆ ಭಾರೀ ಹಿನ್ನಡೆ: ಐವರು ಎಂಎಲ್ ಸಿ ಜೆಡಿಯುಗೆ ಸೇರ್ಪಡೆ

04:54 PM Jun 23, 2020 | Nagendra Trasi |

ಪಾಟ್ನಾ:ಮುಂಬರುವ ವಿಧಾನ ಪರಿಷತ್ ಚುನಾವಣೆಗೂ ಮುನ್ನ ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ ಸ್ಥಾಪಿಸಿದ್ದ ಆರ್ ಜೆಡಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಐವರು ಎಂಎಲ್ ಸಿ ಮಂಗಳವಾರ ಆರ್ ಜೆಡಿ ತೊರೆದು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಆರ್ ಜೆಡಿ ಉಪಾಧ್ಯಕ್ಷ ಹಾಗೂ ಸ್ಥಾಪಕ ಸದಸ್ಯ ರಘುವಂಶ್ ಪ್ರಸಾದ್ ಸಿಂಗ್ ಕೂಡಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಂಗ್ ಅವರು ಪ್ರಸ್ತುತ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ 19 ಪಾಸಿಟಿವ್ ವರದಿ ಬಂದ ನಂತರ ರಘುವಂಶ್ ಅವರು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವರದಿಯ ಪ್ರಕಾರ, ಆರ್ ಜೆಡಿ ಪಕ್ಷದಲ್ಲಿನ ಬೆಳವಣಿಗೆ ತಮಗೆ ಅಸಂತೋಷವನ್ನುಂಟು ಮಾಡಿದೆ. ಹೀಗಾಗಿ ತಾನು ಪಕ್ಷದ ಹುದ್ದೆಯಿಂದ ಕೆಳಗಿಳಿಯುವುದಾಗಿ ಸಿಂಗ್ ಆರ್ ಜೆಡಿ ವರಿಷ್ಠ ನಾಯಕರಿಗೆ ಪತ್ರ ಮುಖೇನ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಎಂಎಲ್ ಸಿಗಳಾದ ಸಂಜಯ್ ಪ್ರಸಾದ್, ದಿಲೀಪ್ ರಾಯ್, ಎಂಡಿ ಕುಮಾರ್ ಅಲಾಂ, ರಾಧಾ ಚರಣ್ ಶಾ ಮತ್ತು ರಣ್ ವಿಜಯ್ ಕುಮಾರ್ ಸಿಂಗ್ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜುಲೈ 7ರಂದು ಬಿಹಾರದಲ್ಲಿ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಐವರು ಎಂಎಲ್ ಸಿ ತಂಡವನ್ನು ಪ್ರತ್ಯೇಕ ಎಂದು ಪರಿಗಣಿಸಿದ್ದು, ಜೆಡಿಯು ಸೇರ್ಪಡೆಗೆ ಅನುಮತಿ ನೀಡಲಾಗಿದೆ ಎಂದು ವಿಧಾನಪರಿಷತ್ ಅಧ್ಯಕ್ಷ ಅವಧೇಶ್ ನರೈನ್ ಸಿಂಗ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next