Advertisement
ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಲಲಿತ್ ಮಹಲ್ ರಾಜ್ಯ ಸರ್ಕಾರದ ಆಸ್ತಿಯಾಗಿದ್ದು, ಖಾಸಗಿಯವರಿಗೆ ಮಾರಾಟ ಮಾಡಲು ಗ್ರೀನ್ ಸಿಗ್ನಲ್ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರುತ್ತಿರುವ ಸಂಗತಿ “ಉದಯವಾಣಿ’ಗೆ ಲಭ್ಯವಾಗಿದೆ. ರಾಜ್ಯದ ಹೆಮ್ಮೆಯ ಪ್ರತೀಕವಾಗಿರುವ ಲಲಿತ್ ಮಹಲ್ ನ್ನು ಖಾಸಗಿಕರಣಗೊಳಿಸಲು ರಾಜ್ಯ ಸರ್ಕಾರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ತೆರೆ ಮರೆಯಲ್ಲಿ ಸಂಘರ್ಷ ನಡೆಯುತ್ತಿದೆ. ಲಲಿತ್ ಮಹಲ್ ಪಂಚತಾರಾ ಹೋಟೆಲ್ ನ್ನು ಕೇಂದ್ರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ನಡೆಸುತ್ತಿದೆ. ನಷ್ಟದಲ್ಲೇ ನಡೆಯುತ್ತಿರುವ ಲಲಿತ್ ಮಹಲ್‌ನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದೆ. ಅಷ್ಟೇ ಅಲ್ಲ, ಮಾರಾಟಕ್ಕೆ ಒಪ್ಪದಿದ್ದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಕಡಿತ ಮಾಡುವ ಪರೋಕ್ಷ ಎಚ್ಚರಿಕೆಯನ್ನೂ ಸಹ ನೀಡುತ್ತಿದೆ. ಇದಕ್ಕೆ ಸೊಪ್ಪು ಹಾಕದ ರಾಜ್ಯ ಸರ್ಕಾರ, ಲಲಿತ್ ಮಹಲ್‌ನ್ನು ನಿಮ್ಮಿಂದ ನಡೆಸಲು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರಕ್ಕೆ ವಾಪಸ್ ಕೊಡಿ. ನಾವು ಅದನ್ನು ನಡೆಸುತ್ತೇವೆ. ಸರ್ಕಾರದ ಕೀರ್ತಿ ಪ್ರಾಯವಾದ ಆಸ್ತಿಯನ್ನು ಮಾರಲು ಕೇಂದ್ರಕ್ಕೆ ಯಾವುದೇ ಹಕ್ಕಿಲ್ಲ ಎನ್ನುವ ಸಂದೇಶ ರವಾನಿಸಿದೆ.
Related Articles
Advertisement
ಕೇಂದ್ರ ಸರ್ಕಾರ ಲಲಿತ್ ಮಹಲ್ ಅರಮನೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ. ರಾಜ್ಯ ಸರ್ಕಾರವೇ ಅದನ್ನು ನೋಡಿಕೊಳ್ಳುತ್ತದೆ. ನಮ್ಮ ಆಸ್ತಿಯನ್ನು ಮಾರುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ. ನಮ್ಮ ಪರಂಪರೆಯ ಹೆಮ್ಮೆಯ ಮಹಲ್‌ನ್ನು ರಾಜ್ಯ ಸರ್ಕಾರವೇ ನವೀಕರಿಸುತ್ತದೆ. ಮುಖ್ಯಮಂತ್ರಿ ಸಹ ಖಾಸಗಿ ಯವರಿಗೆ ಇದನ್ನು ಮಾರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.ಪ್ರಿಯಾಂಕ್ ಖರ್ಗೆ, ಸಚಿವ ಶಂಕರ ಪಾಗೋಜಿ