Advertisement

ಮಳೆಗೂ ಮುನ್ನ ಮುಂಜಾಗ್ರತೆ ಕ್ರಮಕ್ಕೆ ಲಾಲಾಜಿ ಸೂಚನೆ

09:02 AM Jun 14, 2019 | sudhir |

ಕಟಪಾಡಿ: ನಿರ್ಮಾಣ ಹಂತದಲ್ಲಿರುವ ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಪಿತ್ರೋಡಿ -ಜಾರುಕುದ್ರು ಸಂಪರ್ಕದ ಸೇತುವೆ ಕಾಮಗಾರಿಯನ್ನು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಜೂ.11ರಂದು ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ಸೇತುವೆ ನಿರ್ಮಾಣ ಕಾಮಗಾರಿ ಮಂದಗತಿಯಿಂದ ಸಾಗುತ್ತಿದ್ದು, ಪಾಪನಾಶಿನಿ ಹೊಳೆಯ ನೀರಿನ ಸರಾಗ ಹರಿಯುವಿಕೆಗೆ ಕಾಮಗಾರಿ ತಡೆಯೊಡ್ಡುತ್ತಿದೆ. ಇದರಿಂದಾಗಿ ಕಳೆದ ಬಾರಿಯ ಮಳೆಗಾಲದಲ್ಲಿ ಪಡುಕರೆ ಭಾಗದಲ್ಲಿ ನದಿ ಕೊರೆತದ ಸಮಸ್ಯೆ ಉಂಟಾಗಿತ್ತು. ಈ ಬಾರಿಯ ಮಳೆಗಾಲದಲ್ಲಿ ಮತ್ತೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಎಂಬ ಜನತೆಯ ಮನವಿ ಮೇರೆಗೆ ಸ್ಥಳಕ್ಕಾಗಮಿಸಿ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಲಾಲಾಜಿ ಮೆಂಡನ್‌ ಎಂಜಿನಿಯರ್‌ಗಳ ಜತೆ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಮಳೆಗಾಲದಲ್ಲಿ ತೊಂದರೆ ಆದ ಅನಂತರ ಎಚ್ಚೆತ್ತುಕೊಂಡು ಪರಿಹಾರಕ್ಕೆ ಪ್ರಯತ್ನಿಸುವ ಬದಲು ಈಗಲೇ ಸಂಭಾವ್ಯ ತೊಂದರೆಗಳಿಗೆ ಸಿದ್ಧತೆ ನಡೆಸುವಂತೆ ತಿಳಿಸಿದರು. ಹೊಳೆಯ ನೀರಿನ ಸರಾಗ ಹರಿಯುವಿಕೆಗೆ ತೊಂದರೆ ಉಂಟಾಗದಂತೆ ಸುವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗುವಂತೆ ಒತ್ತಾಯಿಸಿದರು.
ಸ್ಥಳದಲ್ಲಿದ್ದ ಯೋಜನಾ ವಿಭಾಗದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಶಶಿಧರ್‌ ಶೆಟ್ಟಿ ಈ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿ, ತಾಂತ್ರಿಕವಾಗಿ ಸ್ವಲ್ಪಮಟ್ಟಿನ ಅಡಚಣೆಯಿಂದ ಕಾಮಗಾರಿಯಲ್ಲಿ ವಿಳಂಬವಾಗಿದ್ದು, ಈಗಾಗಲೇ ಮೂರು ಸ್ಪ್ಯಾನ್‌ ನಿರ್ಮಾಣದಲ್ಲಿಯಶಸ್ಸು ಕಂಡಿದ್ದೇವೆ. ಇನ್ನುಳಿದಂತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. 2020ರ ಮಾರ್ಚ್‌ ಒಳಗೆ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂದು ಯೋಜನೆಯ ಬಗ್ಗೆ ಮಾಹಿತಿಯನ್ನು ಶಾಸಕರಿಗೆ ವಿವರಿಸಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸಂಪರ್ಕ ಸೇತುವೆ ನಿರ್ಮಾಣ ಕಾರ್ಯವು 6 ಕೋಟಿ 54 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಆಗಬೇಕಿದ್ದ ಈ ಕಾಮಗಾರಿಯು ಮಂದಗತಿ ಮತ್ತು ಸ್ಥಗಿತಗೊಂಡಿದ್ದ ಬಗ್ಗೆ ಉದಯವಾಣಿ ವರದಿಯ ಮೂಲಕ ಎಚ್ಚರಿಸಿತ್ತು. ಅನಂತರದಲ್ಲಿ ಕಾಮಗಾರಿ ಮತ್ತೆ 2018ರ ಸೆಪ್ಟಂಬರ್‌ನಲ್ಲಿ ಆರಂಭಗೊಂಡಿತ್ತು.

ಉದ್ಯಾವರ ಗ್ರಾ. ಪಂ. ವ್ಯಾಪ್ತಿಯಲ್ಲಿ ಹರಿಯುವ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ಜಾರುಕುದ್ರುಗೆ ಸಂಪರ್ಕವನ್ನು ಕಲ್ಪಿಸಲು 175 ಮೀಟರ್‌ ಉದ್ದ ಮತ್ತು 7.5 ಮೀಟರ್‌ ಅಗಲದ ಸಂಪರ್ಕ ಸೇತುವೆಯ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

Advertisement

ಈ ಸಂದರ್ಭ ಜಿ. ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಸದಸ್ಯೆ ರಜನಿ ಆರ್‌. ಅಂಚನ್‌, ತಾ.ಪಂ. ಮಾಜಿ ಉಪಾಧ್ಯಕ್ಷ ಗಣೇಶ್‌ ಕುಮಾರ್‌ ಉದ್ಯಾವರ, ಉದ್ಯಾವರ ಗ್ರಾ.ಪಂ. ಸದಸ್ಯರಾದ ಜಯಂತಿ ಸುರೇಶ್‌, ರಾಜೀವಿ, ಮಾಜಿ ಸದಸ್ಯ ಸಂತೋಷ್‌ ಸುವರ್ಣ ಬೊಳೆj, ಎಂಜಿನಿಯರಿಂಗ್‌ ವಿಭಾಗದ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವಿಜಯಾನಂದ, ಎ.ಇ. ತ್ರಿನೇಶ್‌, ಗುತ್ತಿಗೆದಾರ, ಸ್ಥಳೀಯರು, ಜಾರುಕುದ್ರು ನಿವಾಸಿಗಳು ಉಪಸ್ಥಿತರಿದ್ದರು.

ಸಂಭಾವ್ಯ ಪರಿಸ್ಥಿತಿ ಎದುರಿಸಲು ಸಜ್ಜು
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸಂಪರ್ಕ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಳೆದ ಬಾರಿ ಮಳೆಗಾಲದಲ್ಲಿ ವಿಪರೀತ ಮಳೆ ಇದ್ದುದರಿಂದ ಸ್ವಲ್ಪ ಮಟ್ಟಿನ ಸಮಸ್ಯೆ ಉಂಟಾಗಿತ್ತು. ಈ ಬಾರಿ ಮಳೆಗಾಲಕ್ಕೂ ಮುನ್ನವೇ 7 ರಿಂದ 10 ಸಾಲುಗಳಷ್ಟು ಪೈಪ್‌ ಅಳವಡಿಕೆಗೆ ಸಿದ್ಧಪಡಿಸಿ ಇರಿಸಿಕೊಳ್ಳಲಾಗಿದೆ. ಅದಕ್ಕೂ ಮೀರಿ ನದಿ ಹರಿವಿನಿಂದ ತೊಂದರೆ ಆಗುವ ಪರಿಸ್ಥಿತಿ ಎದುರಿಸುವ ತುರ್ತು ಸಂದರ್ಭದಲ್ಲಿ ವೆಂಟ್‌ ಓಪನ್‌ ಮಾಡಿ ತುರ್ತಾಗಿ 25 ಮೀ ಅಗಲ, 1.2 ಮೀ ಡಯಾಮೀಟರ್‌ನ ಕಾಲುಸಂಕದ ವ್ಯವಸ್ಥೆಯನ್ನು ಕುದ್ರು ನಿವಾಸಿಗಳಿಗೆ ಕಲ್ಪಿಸಲಾಗುತ್ತದೆ. ಆ ಮೂಲಕ ಮಳೆಗಾಲದಲ್ಲಿ ಸಂಭಾವ್ಯ ವೈಪರೀತ್ಯ ಎದುರಿಸಲು ಸಜ್ಜುಗೊಳಿಸಲಾಗಿದೆ.
-ಶಶಿಧರ್‌ ಶೆಟ್ಟಿ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಯೋಜನಾ ವಿಭಾಗ

ಸೂಕ್ತ ಸ್ಪಂದನೆಯ ಭರವಸೆ
ಮಳೆಗಾಲದಲ್ಲಿ ಸಂಭಾವ್ಯ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಕ್ಕೆ , ತಾಂತ್ರಿಕ ಹೊಂದಾಣಿಕೆಯ ಮೂಲಕ ಯಾವುದೇ ರೀತಿಯ ಅಡಚಣೆಗಳುಂಟಾಗದಂತೆ ತಕ್ಕ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಎಂಜಿನಿಯರಿಂಗ್‌ ಇಲಾಖೆ ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದೆ.
– ಲಾಲಾಜಿ ಆರ್‌. ಮೆಂಡನ್‌, ಕಾಪು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next