Advertisement
ಅದು ಸ್ವಾತಂತ್ರ್ಯ ಹೋರಾಟದ ಸಮಯ. ಗೋಪಾಲಕೃಷ್ಣ ಗೋಖಲೆ ಅವರು “ದಿ ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿ’ಯನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಹೋರಾಟಗಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆ ಸೊಸೈಟಿಯ ಸ್ಥಾಪನೆಯಾಗಿತ್ತು. ಶಾಸ್ತ್ರೀಜಿಯವರೂ ಆಗ ಜೈಲಿನಲ್ಲಿದ್ದುದರಿಂದ ಅವರ ಕುಟುಂಬವೂ ಆ ನೆರವನ್ನು ಪಡೆದುಕೊಳ್ಳುತ್ತಿತ್ತು. ಅವರ ಕುಟುಂಬಕ್ಕೆ ತಿಂಗಳಿಗೆ 50 ರೂ.ನೀಡಲಾಗುತ್ತಿತ್ತು. ಆಗ ಶಾಸ್ತ್ರೀಜಿಯವರು ಜೈಲಿನಿಂದ ಅವರ ಪತ್ನಿಗೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ “ಸೊಸೈಟಿ ಯಿಂದ ಪ್ರತೀ ತಿಂಗಳೂ ಸರಿಯಾಗಿ ಹಣ ಬರುತ್ತಿದೆಯೇ? ಆ ಹಣ ಸಂಸಾರವನ್ನು ಸರಿದೂಗಿಸಲು ಸಾಕಾಗುತ್ತಿದೆಯೇ?’ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಲಲಿತಾ ಶಾಸ್ತ್ರಿಯವರು ಮರುಪತ್ರವನ್ನು ಬರೆದು ಸೊಸೈಟಿ ಕಳುಹಿಸುತ್ತಿರುವ ಹಣ ಪ್ರತೀ ತಿಂಗಳೂ ತಪ್ಪದೇ ಬರುತ್ತಿದೆ. ಇನ್ನೂ ಹೆಚ್ಚು ಹೇಳಬೇಕೆಂದರೆ ಅವರು ಕಳುಹಿಸುತ್ತಿರುವ 50 ರೂ. ಗಳಲ್ಲಿ ನಾನು 40 ರೂ.ಗಳನ್ನು ಮಾತ್ರ ಖರ್ಚು ಮಾಡಿ, ಹತ್ತು ರೂ.ಗಳನ್ನು ಉಳಿಸಿ ಕೂಡಿಡುತ್ತಿದ್ದೇನೆ’ ಎಂದು ತಿಳಿಸಿದ್ದರು. ಕೂಡಲೇ ಶಾಸ್ತ್ರೀಜಿಯವರು ಸೊಸೈಟಿಗೆ ಪತ್ರ ಬರೆದು ತಮ್ಮ ಕುಟುಂಬದ ನಿರ್ವಹಣೆಗೆ 40ರೂ. ಸಾಕೆಂದೂ ಉಳಿದ 10 ರೂ.ಗಳನ್ನು ಕಷ್ಟದಲ್ಲಿರುವ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕೆಂದು ಮನವಿ ಮಾಡಿದ್ದರು!
Related Articles
Advertisement
ಇದನ್ನೂ ಓದಿ:ರಾಜಸ್ಥಾನ ಸಿಎಂ ಗೆಹ್ಲೋಟ್ ನನ್ನ ಸ್ನೇಹಿತ; ಪ್ರಧಾನಿ ಶ್ಲಾಘನೆ
ಅದು 1965ರ ಆ. 31. ಅಂದು ರಾತ್ರಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ಊಟಕ್ಕೆ ಕುಳಿತಿದ್ದರು. ಭಾರತೀಯ ಸೈನ್ಯದ ಮೂರು ಪಡೆಯ ಮುಖ್ಯಸ್ಥರು ಪ್ರಧಾನಿ ನಿವಾಸಕ್ಕೆ ದೌಡಾಯಿಸಿದರು. ಸಭೆ ಪ್ರಾರಂಭವಾಯಿತು. ಆಶ್ಚರ್ಯವೆಂಬಂತೆ ಕೇವಲ ಏಳೇ ನಿಮಿಷಗಳಲ್ಲಿ ಪ್ರಧಾನಿ ಸಭೆ ಮುಗಿಸಿ ಹೊರಬಂದರು. ವಾಸ್ತವದಲ್ಲಿ ಸೇನಾಪಡೆಯ ಮುಖ್ಯಸ್ಥರು “ಪಾಕಿಸ್ಥಾನಿ ಸೈನ್ಯ ಛಾಂಬ್ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಬರುತ್ತಿದೆ. ಈಗ ನಾವು ಅವರನ್ನು ತಡೆಯದಿದ್ದರೆ ಜಮ್ಮು-ಕಾಶ್ಮೀರ ಭಾರತದಿಂದ ಬೇರ್ಪಡುವ ಎಲ್ಲ ಸಾಧ್ಯತೆಗಳೂ ಇವೆ’ ಎಂದು ಪ್ರಧಾನಿ ಯವರ ಮುಂದೆ ತಮ್ಮ ಚಿಂತೆಯನ್ನು ತೋಡಿಕೊಂಡಿದ್ದರು. ಗಂಭೀರರಾದ ಶಾಸ್ತ್ರೀಜಿ ಕೂಡಲೇ ಸೇನಾ ದಾಳಿ ಮಾಡಿ. ವಾಯು ಪಡೆಯ ವಿಮಾನಗಳಿಂದಲೂ ದಾಳಿ ನಡೆಸಿ. ಒಮ್ಮೆ ಆಕ್ರಮಣ ಪ್ರಾರಂಭಗೊಂಡರೆ ಲಾಹೋರ್‌ವರೆಗೂ ಮುನ್ನುಗ್ಗಿ. ಛಾಂಬ್ ಕೈಜಾರುವ ಮೊದಲು ಲಾಹೋರನ್ನು ವಶಪಡಿಸಿಕೊಳ್ಳಿ. ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು ಎಂಬ ಖಡಕ್ ಆದೇಶ ನೀಡಿದ್ದರು. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿ ಅವರು ಸೈನಿಕರನ್ನು ಹುರಿದುಂಬಿಸಿ ಆಡುತ್ತಿದ್ದ ಮಾತುಗಳು, ಭಾಷಣಗಳು, ತೆಗೆದು ಕೊಳ್ಳುತ್ತಿದ್ದ ನಿರ್ಧಾರಗಳು ಸೈನ್ಯಕ್ಕೆ ಭೀಮಬಲವನ್ನು ತಂದು ಕೊಟ್ಟಿದ್ದವು.
ಭಾರತ ಪಾಕಿಸ್ಥಾನವನ್ನು ಬಗ್ಗು ಬಡಿದಿತ್ತು. ಭಾರತೀಯ ಸೈನ್ಯ ಲಾಹೋರ್‌ನ ಹೆಬ್ಟಾಗಿಲಿಗೆ ಬಂದು ನಿಂತಿತ್ತು. ಮುಂದಿನ ಕೆಲವೇ ಗಂಟೆಗಳಲ್ಲಿ ಪಾಕಿಸ್ಥಾನದ ಪ್ರಮುಖ ನಗರಗಳು ಭಾರತದ ಕೈವಶವಾಗು ವುದರಲ್ಲಿತ್ತು. ಅಷ್ಟರಲ್ಲಿ ಪಾಕಿಸ್ಥಾನ ಲಜ್ಜೆಬಿಟ್ಟು ಅಮೆರಿಕ, ರಷ್ಯಾ ಮತ್ತು ವಿಶ್ವ ಸಂಸ್ಥೆಯ ಮುಂದೆ ಮಂಡಿಯೂರಿ ಕುಳಿತು ಯುದ್ಧ ನಿಲ್ಲಿಸಲು ಭಾರತದ ಮನವೊಲಿಸಲು ಗೋಗರೆಯಲಾ ರಂಭಿಸಿತು. ಹಾಗಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಶಾಸ್ತ್ರೀಜಿ ಶಾಂತಿ ಮಾತು ಕತೆಗೆ ತಾಷ್ಕೆಂಟ್ ಗೆ ಹೊರಟರು. ತಾಷ್ಕೆಂಟ್ ನಲ್ಲಿ ಸತತ ಏಳು ದಿನಗಳ ಕಾಲ ಶೃಂಗಸಭೆ ನಡೆಯಿತು. ಅಂತಿಮ ವಾಗಿ ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕರಿಂದ ಸಹಿ ಬಿತ್ತು. ಆದರೆ ಆ ಸಹಿಯ ಶಾಯಿ ಆರುವ ಮುನ್ನವೇ ಶಾಸ್ತ್ರೀಜಿ ಸಾವಿನ ಸುದ್ದಿ ಬರಸಿಡಿಲಿನಂತೆ ಭಾರತಕ್ಕೆ ಬಡಿದಿತ್ತು.
ನಿಜಕ್ಕೂ ಅಂದು ರಾತ್ರಿ ಏನಾಯಿತು?, ಶಾಸ್ತ್ರೀಜಿ ಹಾಗೆ ಹಠಾತ್ತನೆ ಕುಸಿದು ಬೀಳಲು ಕಾರಣವೇನು? ಇವೆಲ್ಲವೂ ನಿಗೂಢ. ಶಾಸ್ತ್ರೀಜಿ ಅವರ ಸಾವಿನ ಬಗ್ಗೆ ಸಾಲು ಸಾಲು ಅನು ಮಾನಗಳು ಮತ್ತು ತರ್ಕಗಳು ಹುಟ್ಟಿಕೊಂಡವಾದರೂ ಸ್ಪಷ್ಟ ಉತ್ತರ ಸಿಗದೇ ಹೋದುದು ಮಾತ್ರ ವಿಪರ್ಯಾಸ.
ಅವರು ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ. ಅಷ್ಟು ಸಣ್ಣ ಅವಧಿಯಲ್ಲೇ ಪಾಕಿಸ್ಥಾನದೊಂದಿಗಿನ ಯುದ್ಧದಲ್ಲಿ ದೇಶವನ್ನೂ ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆ ಯನ್ನು ನೀಗಿಸಿದರು. ಹಿಂದಿ-ಇಂಗ್ಲಿಷ್ ಭಾಷಾ ಗೊಂದಲ ವನ್ನು ಬಗೆಹರಿಸಿದರು. ಕಾಶ್ಮೀರದ ಹಜರತಾಲ್‌ನಂತಹ ಸಮಸ್ಯೆಯನ್ನು ಹೂವೆತ್ತಿದಂತೆ ಪರಿಹರಿಸಿದರು. ವಿಶ್ವಸಂಸ್ಥೆ ಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಹೇಳಿದರು. ಅವರೆಂದೂ ಅನ್ಯಾಯವನ್ನು ಸಹಿಸಿದವರಲ್ಲ, ತಾವು ನಂಬಿದ್ದ ತಣ್ತೀ ಮತ್ತು ಸಿದ್ಧಾಂತದಿಂದ ದೂರ ಸರಿದವರಲ್ಲ. ಅವರ ಬದುಕಿನ ಒಂದೊಂದು ಘಟನೆಗಳೂ ಅವರ ಉದಾತ್ತ ಚಿಂತನೆಗಳು ಮತ್ತು ಆದರ್ಶ ಗಳಿಗೆ ಹಿಡಿದ ಕನ್ನಡಿಯಂತೆ ನಮ್ಮ ಮುಂದಿವೆ.
– ಪ್ರಕಾಶ್ ಮಲ್ಪೆ