ಕಂಪ್ಲಿ: ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ಲಕ್ಷ್ಮೀ ನಾರಾಯಣ ದೇವಾಲಯದ ಗಂಟೆಯ ಮೇಲೆ 18 ನೇ ಶತಮಾನದ ಶಾಸನವೊಂದು ಬೆಳಕಿಗೆ ಬಂದಿದೆ.
ಗಂಗಾವತಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ಅಧ್ಯಾಪಕ ಡಾ. ಮಂಜಣ್ಣ.ಪಿ.ಬಿ ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ದೇವಾಲಯದಲ್ಲಿ ಕಟ್ಟಿರುವ ತಾಮ್ರದ ಗಂಟೆಯ ಮೇಲೆ ಮೂರು ಸಾಲುಗಳಲ್ಲಿ ಶಾಸನ ಬರೆಯಲ್ಪಟ್ಟಿದೆ. “ಶ್ರೀ ಲಕ್ಷ್ಮೀ ನಾರಾಯಣ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರುಷಂಗಳ 1717 ನೆಯ ಆನಂದ ನಾಮ ಸಂವತ್ಸರದ ಚೈತ್ರ ಶುದ್ಧ 1 ರಲ್ಲು ದೇವಸಮುದ್ರದ ಸರ ದೇಸಾಯಿ ತಿಮ್ಮಯ್ಯನ ಮೊಮ್ಮಗ ಸೀನಜನು ಶ್ರೀ ಸ್ವಾಮಿಗೆ ಸಮರ್ಪಿಸಿದ ಘಂಟೆ” ಎಂದು ಬರೆಯಲಾಗಿದೆ.
ಶಾಸನದಲ್ಲಿ ಉಲ್ಲೇಖಿತ ಕಾಲ ಕ್ರಿ. ಶ .1795 ಕ್ಕೆ ಸರಿಹೊಂದುತ್ತದೆ. ಅಂದರೆ ಆ ಸಮಯದಲ್ಲಿ ದೇವಸಮುದ್ರದಲ್ಲಿ ಸರ್ ದೇಸಾಯಿಗಳು ಆಡಳಿತ ನಡೆಸುತ್ತಿದ್ದರೆಂದು ತಿಳಿದುಬರುತ್ತದೆ. ಮತ್ತು ವಿಜಯನಗರ ಕಾಲದ ಸದರಿ ದೇವಾಲಯವು ಕಾಲಕಾಲಕ್ಕೆ ಆಡಳಿತಗಾರರ ದೈವಭಕ್ತಿಗೆ ಒಳಗಾಗಿ ಪ್ರಭಾವಿಯಾಗಿತ್ತೆಂದು ತಿಳಿಯುತ್ತದೆ ಎಂದು ಡಾ. ಮಂಜಣ್ಣನವರು ಅಭಿಪ್ರಾಯ ಪಟ್ಟಿದ್ದಾರೆ. ಶಾಸನ ಓದುವಲ್ಲಿ ಗಂಗಾವತಿಯ ಡಾ. ಶರಣಬಸಪ್ಪ ಕೋಲ್ಕಾರ ಹಾಗೂ ಶೋಧನೆಯಲ್ಲಿ ದೇವಸಮುದ್ರದ ವಿದ್ಯಾರ್ಥಿ ಕುರುಗೋಡು ಮಾರುತಿ ಸಹಕರಿಸಿದ್ದಾರೆಂದು ಅವರು ತಿಳಿಸಿದ್ದಾರೆ.
– ಜಿ.ಚಂದ್ರಶೇಖರಗೌಡ