2008ರಲ್ಲಿ ಉದಯವಾದ ಬೆಳಗಾವಿ ಗ್ರಾಮೀಣ ಕ್ಷೇತ್ರ ಕಳೆದ ಚುನಾವಣೆಯಿಂದ ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ ಇಲ್ಲಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
2008ಕ್ಕಿಂತ ಮೊದಲು ಇದು ಬಾಗೇವಾಡಿ ವಿಧಾನಸಭಾ ಕ್ಷೇತ್ರವಾಗಿತ್ತು. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿರುವ ಹೆಬ್ಟಾಳ್ಕರ್ ಈ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಷ್ಟೇ ಅಲ್ಲ ಇಡೀ ಜಿಲ್ಲೆಯಲ್ಲಿ ಇದುವರೆಗೆ ಯಾರೂ ಗಳಿಸದಷ್ಟು ಮತಗಳನ್ನು ಗಳಿಸಿ ದಾಖಲೆ ಮಾಡಿದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಲಕ್ಷ್ಮೀ ಹೆಬ್ಟಾಳ್ಕರ್1,02,040 ಮತಗಳನ್ನು ಗಳಿಸಿ ಹೊಸ ದಾಖಲೆ ಬರೆದರು. ಜಿಲ್ಲೆಯ ಇದುವರೆಗಿನ ಚುನಾವಣೆ ಇತಿಹಾಸದಲ್ಲಿ ಯಾವ ಅಭ್ಯರ್ಥಿಯೂ ಒಂದು ಲಕ್ಷ ಮತಗಳನ್ನು ಪಡೆದ ಉದಾಹರಣೆಗಳಿಲ್ಲ. ಹೆಬ್ಟಾಳ್ಕರ್ ಈ ಸಾಧನೆ ಮಾಡಿ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿದರು. ಜತೆಗೆ ತಮ್ಮ ಸಮೀಪದ ಸ್ಪರ್ಧಿ ಬಿಜೆಪಿಯ ಸಂಜಯ ಪಾಟೀಲ ಅವರನ್ನು 51 ಸಾವಿರ ಮತಗಳಿಂದ ಸೋಲಿಸಿ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದರು. ಈ ಕ್ಷೇತ್ರದಲ್ಲಿ ಇದುವರೆಗೆ ಇಷ್ಟು ಮತಗಳ ಅಂತರದಿಂದ ಯಾರೂ ಗೆದ್ದಿಲ್ಲ. ಇದಲ್ಲದೆ ಲಕ್ಷ್ಮೀ ಹೆಬ್ಟಾಳ್ಕರ್ 2013ರ ಚುನಾವಣೆಯ ಸೋಲಿನ ಸೇಡು ಸಹ ತೀರಿಸಿಕೊಂಡರು. 2013ರಲ್ಲಿ ಸಂಜಯ ಪಾಟೀಲ 2,511 ಮತಗಳ ಅಂತರದಿಂದ ಹೆಬ್ಟಾಳ್ಕರ್ ಅವರನ್ನು ಸೋಲಿಸಿದ್ದರು. ಆದರೆ 2018ರ ಚುನಾವಣೆ, ಪ್ರಚಾರದ ಅಬ್ಬರ ಮತ್ತು ಹೆಬ್ಟಾಳ್ಕರ್ ಅವರು ಪಡೆದ ಮತಗಳು ಜಿಲ್ಲೆಯ ಮಟ್ಟಿಗೆ ಬಹಳ ದಿನಗಳ ಕಾಲ ದಾಖಲೆಯಾಗಿ ಉಳಿಯಲಿವೆ.