ತೆಕ್ಕಟ್ಟೆ : ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಕಾರ್ತಿಕ ಸಂಕಷ್ಟಹರ ಚತುರ್ಥಿ ಮತ್ತು ಲಕ್ಷ ದೀಪೋತ್ಸವದ ಪ್ರಯುಕ್ತ ಸಹಸ್ರ ನಾಲಿಕೇರ ಗಣಯಾಗ ಹಾಗೂ ರಜತ ರಥೋತ್ಸವ ಸಹಿತ ಲಕ್ಷ ದೀಪೋತ್ಸವವು ನ.12ರಂದು ಜರಗಿತು. ಇದೇ ಸಂದರ್ಭದಲ್ಲಿ ಶ್ರೀದೇವರಿಗೆ ವಿಶೇಷ ಪೂಜೆ ಹಾಗೂ ಸಂಪ್ರದಾಯದಂತೆ ಸ್ವರ್ಣ ಪಲ್ಲಕ್ಕಿ ಉತ್ಸವದೊಂದಿಗೆ ರಜತ ರಥೋತ್ಸವ ವಿಜಂಭೃಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಗಮನಸೆಳೆದ 25 ಅಡಿ ಎತ್ತರದ ಕಬ್ಬಿನ ತೆನೆ : ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ದೇಗುಲವು ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ರಥಬೀದಿ ಉದ್ದಕ್ಕೂ ಹಣತೆ ಇರಿಸಿ, ಭಕ್ತರಿಗೆ ಹಣತೆ ಬೆಳಗಲು ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಅಲಂಕಾರದಲ್ಲಿ ಸುಮಾರು 25ಅಡಿ ಎತ್ತರದ ಕಬ್ಬಿನ ತೆನೆಯನ್ನು ಅಳವಡಿಸಿರುವುದು ಎಲ್ಲರ ಗಮನ ಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶರತ್ ಹಳೆಯಂಗಡಿ ತಂಡದಿಂದ ಶಾಸ್ತ್ರೀಯ ಗಿಟಾರ್ ವಾದನ, ಕೋಟೇಶ್ವರ ನಾಟ್ಯ ಸ್ಕೂಲ್ ಆಫ್ ಡಾನ್ಸ್ ಇವರಿಂದ ಭಕ್ತಿ ಪ್ರಧಾನ ನೃತ್ಯಗಳು ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮೊಕ್ತೇಸರ ಕೆ. ಶ್ರೀರಮಣ ಉಪಾಧ್ಯಾಯ, ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ ಪರ್ಯಾಯ ಅರ್ಚಕ ದೇವಿದಾಸ ಉಪಾಧ್ಯಾಯ, ಕಛೇರಿ ವ್ಯವಸ್ಥಾಪಕ ನಟೇಶ್ ಕಾರಂತ್,ಅರ್ಚಕ ಮಂಡಳಿಯ ಸದಸ್ಯರು, ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.