Advertisement

ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಬಣ್ಣ, ಬಣ್ಣದ ಬಳೆಗಳ ಸದ್ದು… 

05:52 PM Dec 03, 2021 | Team Udayavani |

ಉತ್ಸವ ಅಂದರೆ ಸಂಭ್ರಮ ನಿಜ. ಆದ್ರೆ ಲಕ್ಷದೀಪೋತ್ಸವ ಮಾತ್ರ ಎಲ್ಲಾ ಉತ್ಸವಗಳಿಗಿಂತ ಕೊಂಚ ಸ್ಪೆಷಲ್ ಆಗಿದೆ. ಎಲ್ಲೆಡೆ ದೀಪಗಳ ಸಾಲು, ಅವುಗಳ ನಡುವೆ ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಣ್ಣುತುಂಬಿಕೊಳ್ಳುತ್ತಿರುವ ಭಕ್ತಾದಿಗಳ ಸಾಗರ. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಮೂರನೇ ದಿನದ ಬೆಳ್ಳಿರಥ ಉತ್ಸವ ನೋಡುವುದೇ ಚಂದ. ಸ್ವರ್ಣ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು. ವಾದ್ಯವೃಂದ, ದೀವಟಿಕೆ, ನಿಶಾನೆ, ಆನೆ ಹಾಗೂ ಬಸವನ ನೇತೃತ್ವದಲ್ಲಿ ಸಾಗಿಬಂದ ಉತ್ಸವ ವಿಜೃಂಭಣೆಯಿಂದ ಕೂಡಿತ್ತು.

Advertisement

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಳೆ ಅನ್ನುವುದು, ಕೇವಲ ಒಂದು ಆಭರಣವಲ್ಲ. ಅದು ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯೊಂದಿಗೆ ಬೆರೆತು ಹೋಗಿರುವ ಒಂದು ಅಂಶ. ಗಾಜಿನ ಬಳೆ ಭಾರತೀಯ ನಾರಿಯರ ಸಾಂಪ್ರದಾಯಿಕ ಆಭರಣ. ನಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಇಂದಿನ ಫ್ಯಾಷನ್ ಯುಗದಲ್ಲೂ ಈ ಬಳೆ ಬೇಡಿಕೆ ಕಳೆದುಕೊಳ್ಳದೆ ಮಹಿಳೆಯರ ಮನ ಗೆದ್ದಿದೆ.

ಬಹಳ ಹಿಂದಿನಿಂದಲೂ, ಎಲ್ಲ ಧರ್ಮದ ಮಹಿಳೆಯರೂ ಬಳೆ ಧರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಹಸಿರು ಗಾಜಿನ ಹಾಗೂ ಬಂಗಾರದ ಬಳೆಗಳನ್ನು ಮಂಗಳಕರವೆಂದರೆ, ಉತ್ತರ ಭಾರತದಲ್ಲಿ ಕೆಂಪು ಮತ್ತು ಹಸಿರು ಬಳೆಗಳನ್ನು ಶುಭವೆಂದು ಧರಿಸುತ್ತಾರೆ. ಅದ್ರಲ್ಲೂ ಜಾತ್ರೆ ಅಂದರೆ ಹೆಣ್ಮಕ್ಕಳಿಗೆ ಒಂಥರಾ ಖುಷಿ. ಯಾಕಂದರೆ ಕೂದಲಿಗೆ ಹಾಕೋ ಕ್ಲಿಪ್​ಯಿಂದ ಹಿಡಿದು ಬಳೆಗಳವರೆಗೂ ಕಲೆಕ್ಷನ್ಸ್ ಸಿಗುತ್ತದೆ. ಈ ಜಾತ್ರೆಯೂ ಅಷ್ಟೇ. ಜಾತ್ರೆಗೆ ಬರುವ ಮಹಿಳೆಯರು ಬರಿಗೈನಲ್ಲಿ ಬಂದರೂ ಮರಳುವಾಗ ಕೈತುಂಬಾ ಬಳೆ ತೊಟ್ಟಿರುತ್ತಾರೆ.

ಕಂಡೊಡನೆ ಕಣ್ಣರಳಿಸುವಷ್ಟು ಸುಂದರ.. ಘಲ್ ಘಲ್ ನಾದದ ಜೊತೆ ಕಲರವದ ಝೇಂಕಾರ. ಕಾಮನಬಿಲ್ಲಿನ ರಂಗನ್ನೇ ಮೀರಿಸುವಷ್ಟು ಚಿತ್ತಾರ. ನೋಡಿದಷ್ಟೂ ಮನಸೆಳೆಯುವಷ್ಟು ಮನೋಹರ. ಅಬ್ಬಾ.. ಬಣ್ಣ ಬಣ್ಣದ ಬಳೆ ಧರಿಸಿ ಹೆಣ್ಮಕ್ಕಳದ್ದು ವಯ್ಯಾರವೋ ವಯ್ಯಾರ.

ಆಯ್ಕೆಯಲ್ಲಿ ರಾಜಿಯಾಗಬೇಕಿಲ್ಲ. ಕಲರ್​ ಸೆಲೆಕ್ಷನ್​ನಲ್ಲಿ ತಲೆಬಿಸಿ ಮಾಡಬೇಕಿಲ್ಲ. ಯಾಕೆಂದರೆ ಇಲ್ಲಿರುವ ಎಲ್ಲಾ ಡಿಸೈನ್ ನಿಮ್ಮ ಮನಸೆಳೆಯುವುದರಲ್ಲಿ ಅನುಮಾನ ಇಲ್ಲ. ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಕಲರ್​ಫುಲ್ ಬಳೆಗಳು ಹೆಣ್ಮಕ್ಕಳನ್ನು ಸೆಳೆಯುತ್ತಿವೆ. ನೂರಾರು ಬಳೆಗಳ ಅಂಗಡಿಗಳು ತೆರೆದಿದ್ದು, ಸಾಲು ಸಾಲಾಗಿ ಜೋಡಿಸಿಟ್ಟ ಬಣ್ಣ, ಬಣ್ಣದ, ಥರಹೇವಾರಿ ಡಿಸೈನ್ ಬಳೆಗಳು ಕಮಾಲ್ ಮಾಡುತ್ತಿವೆ. ಹೀಗಾಗಿ ಕೈಗೆ ಚೆಂದದ ಬಳೆ ತೊಡಲು ಹೆಣ್ಮಕ್ಕಳು ಮುಗಿ ಬೀಳುತ್ತಿದ್ದಾರೆ.

Advertisement

ಇನ್ನು ಲಕ್ಷದೀಪೋತ್ಸವದ ಬಳೆಗಳೆಂದರೆ ಭಾರಿ ಪ್ರಸಿದ್ದ. ಯಾಕಂದರೆ ಯಾವುದೇ ಹೊಸ ಡಿಸೈನ್ ಬಳೆ ಬಂದರೂ ಲಕ್ಷದೀಪೋತ್ಸವಕ್ಕೆ ಲಗ್ಗೆ ಇಡುತ್ತದೆ.  ನಂತರ ಪ್ಲೇನ್ ಬಳೆ, ಚುಕ್ಕೆ ಬಳೆ, ಡಿಜೈನ್ ಬಳೆ, ಮುತ್ತಿನ ಬಳೆ, ಹರಳಿನ ಬಳೆ, ಮೆಟಲ್ ಬಳೆ, ಗಾಜಿನ ಬಳೆ ಸೇರಿದಂತೆ ವಿವಿಧ ಬಗೆಯ ಬಳೆಗಳನ್ನು ಕೊಂಡುಕೊಳ್ತಾರೆ. ವ್ಯಾಪಾರಸ್ಥರಿಗೆ ಕೈ ನೀಡಿ ಕೈತುಂಬಾ ಬಳೆ ತೊಡಿಸಿಕೊಳ್ಳುತ್ತಾರೆ. ಮಹಿಳೆಯರ ಸ್ಪಂದನೆಗೆ ವ್ಯಾಪಾರಸ್ಥರು ಖುಷಿಯಾಗಿದ್ದಾರೆ.

” ಕಳೆದ ವರ್ಷಕ್ಕಿಂತ ಈ ವರ್ಷ ಅಷ್ಟೇನೂ ಲಾಭದಾಯಕವಾಗಿಲ್ಲ, ಮಂಜುನಾಥ ದೇವರನ್ನು ನೆನೆಸಿಕೊಂಡು ನಾವು ವ್ಯಾಪಾರ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ದೇವರು ನಮ್ಮ ಕೈ ಬಿಟ್ಟಿಲ್ಲ ಆ ಕಾರಣಕ್ಕೆ ಇನ್ನೂ ನಾವು ವ್ಯಾಪಾರ ಮಾಡುತ್ತಿದ್ದೇವೆ.” – ದಿನೇಶ್, ಶಿವಮೊಗ್ಗ, ಬಳೆ ವ್ಯಾಪಾರಸ್ಥರು 

-ಆಕರ್ಷ ಆರಿಗ,  ಎಸ್ ಡಿಎಮ್ ಉಜಿರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next