Advertisement
ಯಕ್ಷಗಾನ ತಾಳಮದ್ದಳೆಲಕ್ಷ ದೀಪೋತ್ಸವ ಅಂಗವಾಗಿ ಸಂಜೆ ದೇಗುಲದ ರಾಜಗೋಪುರದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದ ವತಿಯಿಂದ “ಕರ್ಣಾವಸಾನ’ ತಾಳಮದ್ದಳೆ ನಡೆಯಿತು. ದೇಗುಲದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ತಾಳಮದ್ದಳೆ ಉದ್ಘಾಟಿಸಿದರು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಜಯಪ್ರಕಾಶ್ ನಾಕೂರು, ಮುರಳೀಧರ ಕಲ್ಲೂರಾಯ ಕುಂಜೂರುಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಕರ್ಣ), ಶುಭಾ ಗಣೇಶ್ (ಅರ್ಜುನ), ಕಿಶೋರಿ ದುಗ್ಗಪ್ಪ (ಕೃಷ್ಣ), ಹರಿಣಾಕ್ಷಿ ಜೆ. ಶೆಟ್ಟಿ (ಶಲ್ಯ), ಶಾರದಾ ಅರಸ್ (ಅಶ್ವಸೇನ), ಪ್ರೇಮಲತಾ ರಾವ್ (ವೃದ್ಧ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ದೇಗುಲದ ರಥ ಬೀದಿಯಲ್ಲಿ ಮಹಿಳಾ ಭಕ್ತರು ರಂಗೋಲಿ ಬಿಡಿಸಿದರು. ರಂಗೋಲಿ ಮಧ್ಯ ಭಾಗ ಮತ್ತು ಎರಡು ಬದಿಗಳಲ್ಲಿ ಹಣತೆ ಇರಿಸಿ ಸಂಜೆ ಪೂಜೆಯ ಬಳಿಕ ದೀಪ ಬೆಳಗಿಸಲಾಯಿತು.
ದೇಗುಲಕ್ಕೆ ನೇರ ಸಂಬಂಧವಿರುವ ಬೆಳ್ಳಿಪ್ಪಾಡಿ ಮನೆತನದವರಿಂದ ಪ್ರತಿ ವರ್ಷ ದಂತೆ ಈ ಬಾರಿಯೂ ಶ್ರೀ ದೇವರಿಗೆ ಏಕಾದಶ ರುದ್ರ ಸೇವೆ, ಬಾಲಗಣಪತಿ ದೇವರಿಗೆ ಗಣಪತಿ ಹೋಮ ಸೇವೆ, ಮಧ್ಯಾಹ್ನ ಮಹಾಪೂಜೆ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಬೆಳ್ಳಿಪ್ಪಾಡಿ ಮನೆತನದ ಬೆಳ್ಳಿಪ್ಪಾಡಿ ವಿಶ್ವನಾಥ ರೈ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ನೇತೃತ್ವ ದಲ್ಲಿ ದೇಗುಲದ ಗರ್ಭಗುಡಿಯ ಎದುರು ತುಪ್ಪದ ದೀಪ ಬೆಳಗಿಸಿ ಸಂಕಲ್ಪ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಇತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ರಥೋತ್ಸವ, ತೆಪ್ಪೋತ್ಸವ
ಶ್ರೀ ದೇವರ ಪೂಜೆ ಅನಂತರ ಬಲಿ ಉತ್ಸವ ಆರಂಭಗೊಂಡು ವಸಂತ ಕಟ್ಟೆ ಪೂಜೆ, ಚಂದ್ರಮಂಡಲ ರಥೋತ್ಸವ ನಡೆಯಿತು. ಬಳಿಕ ಕಟ್ಟೆ ಪೂಜೆ ಸ್ವೀಕರಿಸಿ, ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು. ದೇಗುಲದ ಆಡಳಿತಾಧಿಕಾರಿ ವಿಷ್ಣುಪ್ರಸಾದ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.