ಗದಗ: ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಉತ್ತರ ಕರ್ನಾಟಕದ ಪ್ರವಾಸಿ ತಾಣವಾಗಿರುವ ಲಕ್ಕುಂಡಿ ಗ್ರಾಮವನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸರಕಾರದ ಚಿಂತನೆ ಕಾರ್ಯರೂಪಕ್ಕೆ ಬಂದಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿ, 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಅನುದಾನ ಬಳಕೆಗೆ ಮಾರ್ಗವಿಲ್ಲದೇ ಸರಕಾರಕ್ಕೆ ವಾಪಸಾಗಿದೆ.
ತಾಲೂಕಿನ ಲಕ್ಕುಂಡಿ ಗ್ರಾಮ ಚಾಲುಕ್ಯರ ಸಾಮ್ರಾಜ್ಯದ ರಾಜಧಾನಿ ಹಾಗೂ ಕನ್ನಡ ಸಾಹಿತ್ಯದ ಪೋಷಕಿಯಾಗಿದ್ದ ಅತ್ತಿಮಬ್ಬೆಯವರ ಸ್ಥಳವಾಗಿದೆ. ನೂರೊಂದು ಬಾವಿ ಹಾಗೂ ನೂರೊಂದು ಗುಡಿ ಹೊಂದಿದ ಕೀರ್ತಿ ಲಕ್ಕುಂಡಿಯದು. ಪ್ರಾಚೀನ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿತ್ತು. ಶತಮಾನಗಳ ಹಿಂದೆ ನಿರ್ಮಿಸಿರುವ ಇಲ್ಲಿನ ಬ್ರಹ್ಮಜಿನಾಲಯ, ನಾಗನಾಥ, ನೀಲಕಂಠೇಶ್ವರ, ವಿದ್ಯಾಶಂಕರ, ನಾರಾಯಣ, ಕಲ್ಮೇಶ್ವರ, ಕಾಶಿವಿಶ್ವನಾಥ, ನನ್ನೇಶ್ವರ, ಹಾಲುಗುಂಡಿ ಬಸವೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷೇಶ್ವರ, ಕುಂಬಾರೇಶ್ವರ, ವೀರಭದ್ರೇಶ್ವರ, ಚಂದ್ರಮೌಳೇಶ್ವರ ಸೇರಿದಂತೆ ಹಲವು ಗುಡಿಗಳು ದೇಶದ ವಾಸ್ತುಶಿಲ್ಪ, ಧಾರ್ಮಿಕ ಹಾಗೂ ಸಾಂಸ್ಕೃತಿ ವೈಭವವನ್ನು ಸಾರುತ್ತವೆ.
ಇಲ್ಲಿ ನೂರೊಂದು ದೇವಸ್ಥಾನಗಳಿದ್ದವು ಎನ್ನಲಾಗುತ್ತಿದ್ದರೂ, ಸದ್ಯ 30ಕ್ಕಿಂತ ಹೆಚ್ಚು ದೇಗುಲಗಳು ಕಾಣಸಿಗದು. ಹಲವು ದೇಗುಲಗಳು ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿದ್ದರೆ, ಬೆರಳೆಣಿಕೆಯಷ್ಟು ಸ್ಥಳೀಯರ ನಿರ್ಲಕ್ಷ್ಯದಿಂದ ಹಾಳಾಗಿವೆ. ಹೀಗಾಗಿ ಹಂಪಿ ಮಾದರಿಯಲ್ಲಿ ಪ್ರತ್ಯೇಕವಾಗಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಸ್ಮಾರಕಗಳ ರಕ್ಷಣೆ, ಅಭಿವೃದ್ಧಿ, ಉತ್ಖನನದೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಬೇಕು ಎಂಬುದು ಜನಾಗ್ರಹವಾಗಿದೆ.
ಸರಕಾರಕ್ಕೆ ಅನುದಾನ ವಾಪಸ್: ಸ್ಥಳೀಯರ ಒತ್ತಾಸೆಯಂತೆ 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವನ್ನು ಘೋಷಿಸಿದರು. ಬಳಿಕ ಪ್ರಾಧಿಕಾರ ರಚನೆ ಕುರಿತು ಕರಡು ರೂಪಿಸಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆ, ಜಿಲ್ಲಾ ಉಸ್ತುವಾರಿ ಸಚಿವರ ಉಪಾಧ್ಯಕ್ಷತೆ, ಸ್ಥಳೀಯ ಶಾಸಕರು, ಲಕ್ಕುಂಡಿ ಜಿಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ 18 ಸದಸ್ಯರ ಸಮಿತಿಗೆ ಸರಕಾರ ಒಪ್ಪಿಗೆ ಸೂಚಿಸಿತ್ತು. ಈಗಾಗಲೇ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿ ಗುರುತಿಸಲಾಗಿದೆ.
ವಿವಿಧ 7 ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿ 3 ಕೋಟಿ ರೂ. ಬಿಡುಗಡೆಗೆ ಸರಕಾರ ಆಡಳಿತಾತ್ಮಕ ಮಂಜೂರಾತಿ ನೀಡಿ, ಮೊದಲ ಕಂತಿನಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಿತ್ತು. ಆದರೆ, ಪ್ರಾಧಿಕಾರಕ್ಕೆ ಪ್ರತ್ಯೇಕ ಆಯುಕ್ತರು, ಸಿಬ್ಬಂದಿ ಹಾಗೂ ಕಚೇರಿಯನ್ನು ಒದಗಿಸಲಿಲ್ಲ. ಪ್ರಾಧಿಕಾರ ರಚನೆಗೆ ಸರಕಾರ ಮಸೂದೆಯನ್ನೂ ಅಂಗೀಕರಿಸಿಲ್ಲ. ಹೀಗಾಗಿ ಅನುದಾನ ಬಳಕೆಯಾಗದೇ ಸರಕಾರಕ್ಕೆ ಹಿಂದಿರುಗಿದೆ ಎನ್ನುತ್ತಾರೆ ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉನ್ನತಾಧಿಕಾರಿಗಳು.
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಘೊಷಣೆಯಾಗಿ ವರ್ಷಗಳೇ ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ. ಒಟ್ಟಾರೆ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಸ್ಥಿತಿ.
ಲಕ್ಕುಂಡಿಯ ಮೂರ್ತ, ಅಮೂರ್ತ ಹಾಗೂ ನೈಸಗಿಕ ಪರಂಪರೆಯನ್ನು ಉದ್ದೇಶಿತ ಪ್ರಾ ಧಿಕಾರ ವ್ಯಾಪ್ತಿಯಲ್ಲಿ ಗುರುತಿಸಿದೆ. ಆದರೆ, ಪ್ರಾಧಿಕಾರಕ್ಕೆ ಸಂಬಂಧಿಸಿ ಮಸೂದೆ ಅಂಗೀಕಾರವಾಗಿಲ್ಲ. ಪ್ರಾಧಿಕಾರ ರಚನೆಯಾಗದ
ಕಾರಣ ಅನುದಾನ ವಾಪಸ್ ಆಗಿದೆ.
– ನಿಮರ್ಲಾ ಮಠಪತಿ, ನಿರ್ದೇಶಕರು, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ
-ವೀರೇಂದ್ರ ನಾಗಲದಿನ್ನಿ