Advertisement

ಲಕ್ಯಾ ನೀರು ಮಂಗಳೂರಿಗೆ ಶೀಘ್ರದಲ್ಲೇ ಬರಲಿ

12:43 PM Sep 30, 2018 | Team Udayavani |

ಬೆಳೆಯುತ್ತಿರುವ ಮಂಗಳೂರು ನಗರಿಗೆ ನೀರಿನ ಅಗತ್ಯತೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಲ್ಲಿರುವ ಅವಕಾಶಗಳನ್ನು ಬಳಸಿಕೊಂಡು, ಹೊಸದನ್ನು ಹುಡುಕಿಕೊಂಡು ಈಗಲೇ ಸಾಗಿದರೆ ಭವಿಷ್ಯದಲ್ಲಿ ಎದುರಾಗುವ ಅಪಾಯದಿಂದ ನಗರವನ್ನು, ನಗರದ ಜನತೆಯನ್ನು ಪಾರುಮಾಡಬಹುದು. ಈ ನಿಟ್ಟಿನಲ್ಲಿ ಆಡಳಿತ ಈಗಲೇ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕಿದೆ.

Advertisement

ಮಂಗಳೂರಿಗೆ ಪ್ರಸ್ತುತ ಏಕೈಕ ಕುಡಿಯುವ ನೀರಿನ ಮೂಲ ತುಂಬೆ ವೆಂಟೆಡ್‌ ಡ್ಯಾಂ. ಹೊಸ ಡ್ಯಾಂನಲ್ಲಿ 7 ಮೀ. ನೀರು ಸಂಗ್ರಹಿಸಲು ಸಾಧ್ಯವಿದೆ. ನೇತ್ರಾವತಿ ನದಿಯಲ್ಲಿ ನೀರಿನ ಲಭ್ಯತೆಯ ಆಧಾರದ ಮೇಲೆ ಮುಂದಿನ 20 ವರ್ಷಗಳಿಗೆ ನೀರಿನ ಲಭ್ಯತೆ ಸಾಕಾಗಬಹುದು ಎಂಬ ಲೆಕ್ಕಚಾರವಿದೆ.

ಮಳೆಗಾಲ ಮುಗಿಯುವುದರಲ್ಲೇ ನೇತ್ರಾವತಿ ಸಹಿತ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದ್ದು ಆತಂಕ ಮೂಡಿಸಿದೆ. ಜತೆಗೆ ಕುಡಿಯುವ ನೀರಿಗೆ ಇನ್ನೊಂದು ಪರ್ಯಾಯ ವ್ಯವಸ್ಥೆಯನ್ನು ಈಗಲೇ ಸಿದ್ಧವಾಗಿಡುವುದು ಅತೀ ಅವಶ್ಯ. ಈ ನಿಟ್ಟಿನಲ್ಲಿ ಬಹಳಷ್ಟು ವರ್ಷಗಳಿಂದ ಪ್ರಸ್ತಾವನೆಯಲ್ಲಿರುವ ಲಕ್ಯಾಡ್ಯಾಂನಿಂದ ಮಂಗಳೂರಿಗೆ ನೀರು ಪೂರೈಕೆ ಪ್ರಸ್ತಾವನೆಗೆ ಆದ್ಯತೆ ನೀಡಿ ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನಿಸುವುದು ಅಗತ್ಯವಾಗಿದೆ.

ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಆಪತ್ಪಾಂಧವನಾಗಿ ಕಾಣಿಸಿಕೊಳ್ಳುತ್ತಿದ್ದುದು ಕುದುರೆಮುಖ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟು. ಕುದುರೆಮುಖ ಗಣಿಗಾರಿಕೆ ಪ್ರದೇಶ ಅರಣ್ಯ ಇಲಾಖೆಗೆ ಹಸ್ತಾಂತರವಾಗುವ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿದೆ. ಇದರೊಂದಿಗೆ ಕುದುರೆಮುಖ ಅದಿರು ಕಂಪೆನಿಯ ಆ ಪ್ರದೇಶದಲ್ಲಿ ಹೊಂದಿರುವ ನಂಟು ಕಳಚಿಕೊಳ್ಳಲಿದೆ. ಈ ನೀರನ್ನು ಮಂಗಳೂರಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಬಹಳಷ್ಟು ವರ್ಷಗಳಿಂದ ನಡೆಯುತ್ತಿರುವ ಪ್ರಯತ್ನಗಳಿಗೆ ಹೆಚ್ಚು ಒತ್ತು ನೀಡಲು ಇದು ಪೂರಕವಾಗಿದೆ.

ಲಕ್ಯಾ ಅಣೆಕಟ್ಟಿನಿಂದ ಪಣಂಬೂರಿನ ಕುದುರೆಮುಖ ಕಂಪೆನಿ ಪ್ರದೇಶಕ್ಕೆ ಪ್ರಸ್ತುತ 2.3 ಎಂಜಿಡಿ ನೀರು ಸರಬರಾಜು ಆಗುತ್ತಿದೆ. ಅಲ್ಲಿಂದ ದಿನವೊಂದಕ್ಕೆ 6 ಎಂಜಿಡಿ ನೀರು ತೆಗೆಯಬಹುದಾಗಿದೆ. ಗುರುತ್ವಾಕರ್ಷಣಾ ಶಕ್ತಿ ಮೂಲಕ ನೀರನ್ನು ಅಲ್ಲಿಂದ ಮಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ.

Advertisement

ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕೆ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟಿನಿಂದ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪಡೆಯುವ ಚಿಂತನೆ ಅಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಕೆಲವು ಸಮಯದ ಬಳಿಕ ಚರ್ಚೆಗೆ ಬಂದಿತ್ತು. ಆದರೆ ಇದು ಸ್ವಷ್ಟ ರೂಪಕ್ಕೆ ಬಂದಿದ್ದು 2011ರಲ್ಲಿ.

2011ರಲ್ಲಿ ಪ್ರಸ್ತಾವನೆ
2011ರ ಎಪ್ರಿಲ್‌ನಲ್ಲಿ ಮಂಗಳೂರನಗರಕ್ಕೆ ಕುಡಿಯುವ ನೀರು ಪೂರೈಕೆಯ ಏಕೈಕ ಮೂಲವಾಗಿರುವ ತುಂಬೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿ ಕೊರತೆಯ ಭೀತಿ ಆವರಿಸಿದಾಗ ಲಕ್ಯಾದಿಂದ ನೀರು ಪಡೆಯುವ ಬಗ್ಗೆ ಆಗ ಶಾಸಕರಾಗಿದ್ದ ಎನ್‌. ಯೋಗೀಶ್‌ ಭಟ್‌ ಪ್ರಸ್ತಾವನೆಯನ್ನು ಮಂಡಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಎನ್‌. ಯೋಗೀಶ್‌ ಭಟ್‌, ಆಗ ಜಿಲ್ಲಾಧಿಕಾರಿಯಾಗಿದ್ದ ಡಾ| ಎನ್‌.ಎಸ್‌. ಚನ್ನಪ್ಪ ಗೌಡ, ಮನಪಾ ಅಧಿಕಾರಿಗಳು, ಕುದುರೆಮುಖ ಕಂಪೆನಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಕುರಿತಂತೆ ಮನಪಾದಲ್ಲಿ ನಿರ್ಣಯ ಕೈಗೊಂಡು ಇದರ ಪ್ರತಿಯೊಂದಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅನುಮತಿಗಾಗಿ ಪಾಲಿಕೆ ಅರ್ಜಿಯನ್ನು ಸಲ್ಲಿಸಿತ್ತು. ಕುದುರೆಮುಖ ಗಣಿಗಾರಿಕೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಗಣಿಗಾರಿಕೆ ಪ್ರದೇಶದಲ್ಲಿರುವ ಲಕ್ಯಾ ಡ್ಯಾಂನಿಂದ ನೀರು ಪಡೆಯುವುದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನೀರು ತರಲು ಅನುಮತಿ ಕೋರಿತ್ತು. ಪಣಂಬೂರಿನಿಂದ ಈಗಾಗಲೇ ಇರುವ ನೀರು ಸರಬರಾಜು ಕೊಳವೆಗೆ ಲಿಂಕ್‌ ಮಾಡಿ ನೀರು ಸಂಗ್ರಹ ಸ್ಥಾವರಗಳಿಗೆ ತರುವ ಪ್ರಸ್ತಾವನೆಯನ್ನು ಮನಪಾ ಸಿದ್ಧಪಡಿಸಿತ್ತು.

ಲಕ್ಯಾ ಡ್ಯಾಂ ನೀರಿನ ಆವಶ್ಯಕತೆ
ತುಂಬೆ ವೆಂಟೆಡ್‌ಡ್ಯಾನಿಂದ ಈಗಾಗಲೇ ಮಂಗಳೂರು ನಗರವಲ್ಲದೇ ಮೂಲ್ಕಿ ಹಾಗೂ ಉಳ್ಳಾಲ ಪ್ರದೇಶಕ್ಕೂ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಲಕ್ಯಾ ಡ್ಯಾಂನ ನೀರು ಪಡೆಯಲು ಸಾಧ್ಯವಾದರೆ ಮೂಲ್ಕಿ ಭಾಗದ ಜನರು ಕುಡಿಯುವ ನೀರಿಗಾಗಿ ತುಂಬೆ ವೆಂಟೆಡ್‌ ಡ್ಯಾಂನ್ನು ಅವಲಂಬಿಸುವುದು ತಪ್ಪುತ್ತದೆ.

ಬೃಹತ್‌ ಮಂಗಳೂರು ಮಹಾನಗರ ಪಾಲಿಕೆ (ಗ್ರೇಟರ್‌ ಮಂಗಳೂರು ) ರಚನೆಗೆ ಪ್ರಸ್ತಾವನೆ ಸಿದ್ಧಗೊಂಡಿದೆ. ಇದು ಕಾರ್ಯರೂಪಕ್ಕೆ ಬಂದರೆ ನಗರದ ಆಸುಪಾಸಿನ 33 ಗ್ರಾಮಗಳ ಸೇರ್ಪಡೆ ಪಾಲಿಕೆಗೆ ಸೇರ್ಪಡೆಯಾಗಲಿದೆ. ಮಂಗಳೂರು ಮಹಾನಗರದ ಜನಸಂಖ್ಯೆಗೆ 1.80 ಲಕ್ಷ ಜನಸಂಖ್ಯೆ ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಆಗ ಪಾಲಿಕೆ ಕುಡಿಯುವ ನೀರು ಪೂರೈಕೆಗೆ ಹೆಚ್ಚುವರಿಯಾಗಿ ಜಲಸಂಪನ್ಮೂಲಗಳನ್ನು ಹೊಂದಬೇಕಾಗುತ್ತದೆ. ಲಕ್ಯಾ ಡ್ಯಾಂ ಒಂದು ಉಪಯುಕ್ತ ಮೂಲವಾಗಲಿದೆ. 

ಲಕ್ಯಾ ಡ್ಯಾಂ
ಕುದುರೆಮುಖ ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿರುವ ಲಕ್ಯಾದಲ್ಲಿ ಲಕ್ಯಾಅಣೆಕಟ್ಟು ಇದೆ. ಒಟ್ಟು 2 ಹಂತಗಳಲ್ಲಿ ಇದು ನಿರ್ಮಾಣಗೊಂಡಿತ್ತು. ಪ್ರಥಮ ಹಂತವನ್ನು 1979 ಮೇ 11 ರಂದು ಆಗ ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾಗಿದ್ದ ಬಿಜು ಪಟ್ನಾಯಕ್‌ ಉದ್ಘಾಟಿಸಿದ್ದರು. 2 ನೇ ಹಂತವನ್ನು 1999 ರ ಫೆ. 2 ರಂದು ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾಗಿದ್ದ , ಪ್ರಸ್ತುತ ಓಡಿಶ್ಸಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಉದ್ಘಾಟಿಸಿದ್ದರು. ನವೀನ್‌ ಪಟ್ನಾಯಕ್‌ ಅವರು ಮೊದಲ ಹಂತವನ್ನು ಉದ್ಘಾಟಿಸಿದ್ದ ಬಿಜು ಪಟ್ನಾಯಕ್‌ ಅವರ ಪುತ್ರ ಎಂಬುದು ಉಲ್ಲೇಖನಿಯ ಅಂಶ. ಹೊಸದಿಲ್ಲಿಯ ಜಯಪ್ರಕಾಶ್‌ ಇಂಡಸ್ಟ್ರೀಸ್‌ ಇದನ್ನು ನಿರ್ಮಿಸಿತ್ತು.  1048 ಮೀಟರ್‌ ಉದ್ದ , 100 ಮೀಟರ್‌ ಎತ್ತರವಿರುವ ಲಕ್ಯಾ ಡ್ಯಾಂ 254 ಚ.ಘ.ಮೀಟರ್‌ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. 6.05 ಚದರ ಕಿ.ಮೀ. ವಿಸ್ತೀರ್ಣವಿದ್ದು 18.20 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. 

ಮಂಗಳೂರು ನಗರಕ್ಕೆ ಪ್ರಸ್ತುತ 137.8 ಎಂಲ್‌ಡಿ ನೀರಿನ ಬೇಡಿಕೆ ಇದ್ದು , ಇದು 2031ಕ್ಕೆ 180.01 ಎಂಎಲ್‌ಡಿ ಹಾಗೂ 2046 ಕ್ಕೆ 236.60 ಎಂಎಲ್‌ಡಿಗೆ ಏರಿಕೆಯಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಈಗ ನಗರಕ್ಕೆ 171.7 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. 78,968ಮನೆಗಳಿಗೆ ಸಂಪರ್ಕವಿದೆ. 761.11 ಕಿ.ಮೀ. ನೀರು ವಿತರಣೆ ಪೈಪ್‌ಲೈನ್‌ಗಳಿವೆ .

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next