Advertisement
ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಸಭೆ ಸಿದ್ಧತೆಗಳಿಗೆ ಅರಮನೆ ಮೈದಾನದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮೋದಿಯವರ ಪ್ರಚಾರ ರ್ಯಾಲಿಗೆ ಸಿದ್ಧತೆ ಆರಂಭಿಸಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಜನ ಸೇರಿಸುವ ಗುರಿಯಿದ್ದು, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಿದ್ದೇವೆ ಎಂದರು.
Related Articles
Advertisement
ಕುಟುಂಬ ಕಲ್ಯಾಣ ಮಾಡುವ ನಾಮಧಾರಿ ರಾಹುಲ್ ಗಾಂಧಿ ಬೇಕಾ ಅಥವಾ ಜನಕಲ್ಯಾಣ ಮಾಡುವ ಕಾಮಧಾರಿ ನರೇಂದ್ರ ಮೋದಿ ಬೇಕಾ ಎಂಬ ಪ್ರಶ್ನೆ ಜನರ ಮುಂದಿಡುತ್ತೇವೆ. ಮೈತ್ರಿ ಪಕ್ಷದಲ್ಲಿ ಬಂಡಾಯ, ಗೊಂದಲ ಹೆಚ್ಚಿದೆ. ಬೆಂಗಳೂರಿನಲ್ಲಿ ರೋಷನ್ ಬೇಗ್, ಮಂಡ್ಯದಲ್ಲಿ ರಮೇಶ್ ಬಂಡಿಸಿದ್ದೇಗೌಡ, ಬಾಲಕೃಷ್ಣ ಸೇರಿದಂತೆ ಹಲವರು ಬಂಡಾಯ ಎದ್ದಿದ್ದಾರೆ.
ಬಂಡಾಯ ಶಮನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಿದ್ದಾರೆ. ಮಂಡ್ಯದಲ್ಲಿ ಒಬ್ಬ ಹೆಣ್ಣುಮಗಳನ್ನು ಎದುರಿಸಲು ಮಾಜಿ ಪ್ರಧಾನಿ, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಮೂವರು ಸಚಿವರು, ನಾಲ್ವರು ಶಾಸಕರು ಹರಸಾಹಸ ಪಡುತ್ತಿದ್ದಾರೆ ಎಂದರು.
ನಮ್ಮದು ನಿಂಬೆ ಹಣ್ಣಿನ ಪಕ್ಷವಲ್ಲ: ಜ್ಯೋತಿಷ್ಯ ಅಥವಾ ಮೂಢ ನಂಬಿಕೆಯಲ್ಲಿ ವಿಶ್ವಾಸವಿಡುವ “ನಿಂಬೆಹಣ್ಣಿನ ಪಕ್ಷ’ ನಮ್ಮದಲ್ಲ. ಜೆಡಿಎಸ್ ತ್ರೀ-ಜನರೇಷನ್, ಫೋರ್-ಜನರೇಷನ್ ಪಕ್ಷ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಟಾಂಗ್ ನೀಡಿದರು.
ಪ್ರಚಾರ ವೇದಿಕೆಗೆ ಭೂಮಿ ಪೂಜೆ: ಬೆಂಗಳೂರಿನ ಅರಮನೆ ಮೈದಾನದನಲ್ಲಿ ಏ.13ರಂದು ಪ್ರಧಾನಿ ಮೋದಿ ಅವರ ಪ್ರಚಾರ ಸಭೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಭೂಮಿ ಪೂಜೆ ನೆರವೇರಿಸಿದರು. ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕರಾದ ಅಶ್ವತ್ಥನಾರಾಯಣ, ರವಿ ಸುಬ್ರಹ್ಮಣ್ಯ, ಅರವಿಂದ ಲಿಂಬಾವಳಿ ಇದ್ದರು.