ಬೆಂಗಳೂರು: ಕರೆದ ಕಡೆಗೆ ಬಾಡಿಗೆಗೆ ಬರಲು ನಿರಾಕರಿಸಿದ ಹಾಗೂ ದುಬಾರಿ ಬಾಡಿಗೆ ಕೇಳಿದ ಆಟೋ ಚಾಲಕರ ವಿರುದ್ಧ ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ 1.03 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸದನದಲ್ಲಿ ಮಂಡಿಸಿದ ಲಿಖೀತ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.
ಕೆಲ ಆಟೋ ಚಾಲಕರು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, “ಕರೆದ ಕಡೆ ಬಾಡಿಗೆಗೆ ಬರಲು ನಿರಾಕರಿಸುವ, ದುಬಾರಿ ಬಾಡಿಗೆ ಕೇಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಯಂತ್ರಣಕ್ಕೆ ರಹದಾರಿ ನಿಯಮ ಜಾರಿಗೊಳಿಸಲಾಗಿದೆ. ಇದನ್ನು ಉಲ್ಲಂ ಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.
ಅದರಂತೆ ಕರೆದ ಕಡೆ ಬಾಡಿಗೆ ಬರಲು ನಿರಾಕರಿಸಿದ 22,570 ಮತ್ತು ದುಬಾರಿ ಬಾಡಿಗೆಗೆ ಒತ್ತಾಯಪಡಿಸಿದ 13,104 ಪ್ರಕರಣಗಳನ್ನು 2014ರಲ್ಲಿ ದಾಖಲಿಸಲಾಗಿದೆ. ಅಲ್ಲದೇ 2015ರಲ್ಲಿ ಕ್ರಮವಾಗಿ 19,804 ಮತ್ತು 10,591 ಪ್ರಕರಣಗಳು, 2016ರಲ್ಲಿ 18,693 ಹಾಗೂ 12,153 ಪ್ರಕರಣಗಳು. ಅದೇ ರೀರಿ 2017ರ ಏಪ್ರಿಲ್ ಅಂತ್ಯಕ್ಕೆ 4,175 ಮತ್ತು 2,614 ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂರು ವರ್ಷಗಳಲ್ಲಿ ಒಟ್ಟು 1,03,764 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ರಹದಾರಿ ಉಲ್ಲಂ ಸಿದ ಆಟೋಗಳ ವಿರುದ್ಧ 2014ರಲ್ಲಿ 679, 2015ರಲ್ಲಿ 710, 2016ರಲ್ಲಿ 481 ಹಾಗೂ ಪ್ರಸಕ್ತ ವರ್ಷದಲ್ಲಿ ಏಪ್ರಿಲ್ ಅಂತ್ಯಕ್ಕೆ 70 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳ ಇತ್ಯರ್ಥಕ್ಕೆ ಆಟೋ ಮಾಲಿಕರು ಮತ್ತು ಚಾಲಕರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
1,03,764 ಲಕ್ಷ: ಕರೆದ ಕಡೆ ಬಾರದ, ಹೆಚ್ಚು ಬಾಡಿಗೆ ಕೇಳಿದ ಆಟೋ ಚಾಲಕರ ವಿರುದ್ದ ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ದಾಖಲಾದ ಕೇಸುಗಳು