Advertisement

ಕೆರೆಗಳ ಪರೀಲನೆ ನಡೆಸಿದ ಸಂಸದ ಆರ್‌ಸಿ 

11:58 AM Jun 18, 2017 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿರುವ ಕೆರೆಗಳ ಸಂರಕ್ಷಣೆಗೆ ಅಭಿಯಾನ ಆರಂಭಿಸಿರುವ “ಯುನೈಟೆಡ್‌ ಬೆಂಗಳೂರು’ ಸಂಘಟನೆ ಶನಿವಾರ ನಗರದ ಮೂರು ಕೆರೆಗಳಿಗೆ ಭೇಟಿ ನೀಡಿ ಕೆರೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿತು. 

Advertisement

ಸಂಸದ ರಾಜೀವ್‌ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಗುಬ್ಬಲಾಳ, ತಲಘಟ್ಟಪುರ ಹಾಗೂ ಸೋಂಪುರ ಕೆರೆಗಳಿಗೆ ಭೇಟಿ ನೀಡಲಾಯಿತು. ಕೆರೆಗಳಲ್ಲಿ ಸುರಿಯಲಾಗಿರುವ ಕಟ್ಟಡ ತ್ಯಾಜ್ಯ ಹಾಗೂ ಕೆರೆಗೆ ಸಂಸ್ಕರಣೆಯಾಗದೆ ಸೇರುತ್ತಿರುವ ನೀರನ್ನು ನಿಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು. 

ಉತ್ತರಹಳ್ಳಿ ವಾರ್ಡ್‌ ವ್ಯಾಪ್ತಿಯ ಗುಬ್ಬಲಾಳ ಕೆರೆಗೆ ಮೊದಲು ಭೇಟಿ ನೀಡಿಲಾಯಿತು. ಕೆರೆ ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಕೆರೆಯ ಅಭಿವೃದ್ಧಿಗೆ ಯಾವುದೇ ಇಲಾಖೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದರು. 

ಈ ವೇಳೆ ಮಾತನಾಡಿದ ಸಂಸದ ರಾಜೀವ್‌ ಚಂದ್ರಶೇಖರ್‌, “ನಾಗರಿಕರಿಗೆ ಕೆರೆ ಮೂಲಭೂತ ಅಗತ್ಯ ಎಂಬುದು ಅರಿವಿಗೆ ಬರಬೇಕಿದೆ. ಭವಿಷ್ಯದ ನಗರದ ಸುಸ್ಥಿರ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಆರೋಗ್ಯ, ಅಂತರ್ಜಲ ವೃದ್ಧಿಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು,’ ಎಂದರು. 

ಕೆರೆಯ ಅಭಿವೃದ್ಧಿಗೆ ಹಣ ಅಗತ್ಯವಾಗಿರುವುದರಿಂದ ಸರ್ಕಾರ, ಉಕ್ಕಿನ ಸೇತುವೆ, ಟೆಂಡರ್‌ಶ್ಯೂರ್‌, ಕೇಬಲ್‌ ಕಾರ್‌ನಂತಹ ಯೋಜನೆಗಳನ್ನು ಬಿಟ್ಟು ಒಳಚರಂಡಿ ವ್ಯವಸ್ಥೆ, ಕೆರೆಗಳಿಗೆ ಕೊಳಚೆ ನೀರು ಪ್ರವೇಶಿಸದಂತೆ ತ್ಯಾಜ್ಯನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಿ ಎಂದರು. 

Advertisement

ತಲಘಟ್ಟಪುರ ಕೆರೆಗೆ ಭೇಟಿ ನೀಡಿದ ವೇಳೆ ಸ್ಥಳೀಯ ನಿವಾಸಿ ಚೇತನ್‌ ಎಂಬುವರು, ಕೋಳಿವಾಡ ಸದನ ಸಮಿತಿ ವರದಿ ಪ್ರಕಾರ ಕೆರೆ 19.16 ಎಕರೆ ಪ್ರದೇಶ ಹೊಂದಿದೆ. 2.29 ಎಕರೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಸ್ಥಳೀಯರು ಕೆರೆಗೆ ತ್ಯಾಜ್ಯ, ಕಟ್ಟಡ ಅವಶೇಷಗಳು ಸುರಿಯುತ್ತಿದ್ದಾರೆ. ಇದರೊಂದಿಗೆ ಅಪಾರ್ಟ್‌ಮೆಂಟ್‌ಗಳು ಸಂಸ್ಕರಿಸದ ತ್ಯಾಜ್ಯ ನೀರು ಹರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು. 

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಸ್ಥಳೀಯ ಪಾಲಿಕೆ ಸದಸ್ಯರಾದ ಹನುಮಂತಯ್ಯ, ಆರ್ಯ ಶ್ರೀನಿವಾಸ್‌, ಸಿಟಿಜನ್‌ ಆಕ್ಷನ್‌ ಫೋರಂ ಸಂಸ್ಥಾಪಕ ಅಧ್ಯಕ್ಷ ಎನ್‌.ಎಸ್‌.ಮುಕುಂದ, ರೈನ್‌ ವಾಟರ್‌ ಕ್ಲಬ್‌ನ ಎಸ್‌.ವಿಶ್ವನಾಥ್‌ ಸೇರಿದಂತೆ ಪ್ರಮುಖರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next