Advertisement

ಕೆರೆ ಅಭಿವೃದ್ಧಿ ಯೋಜನೆಯ ಪರಿ; ಪ್ರಧಾನಿ ಮೆಚ್ಚಿದ ಬಿಲ್‌ಕೆರೂರ ಸರೋವರ!

05:46 PM Aug 29, 2022 | Team Udayavani |

ಬಾಗಲಕೋಟೆ: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾದ ಹಿನ್ನೆಲೆಯಲ್ಲಿ ಜಿಲ್ಲೆಯ 75 ಕೆರೆಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಕಾರ್ಯ ಯೋಜನೆ ಸಾಧಿಸಿದ್ದು, ಕೇಂದ್ರದ ಮಹತ್ವಾಕಾಂಕ್ಷಿ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿದ ತಾಲೂಕಿನ ಬಿಲ್‌ಕೆರೂರ ಕೆರೆಯ ಕಂಡು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ.

Advertisement

ಹೌದು, ಬಾಗಲಕೋಟೆ ತಾಲೂಕಿನ ಬಿಲ್‌ ಕೆರೂರ ಗ್ರಾಮದಲ್ಲಿ ಪ್ರಧಾನಮಂತ್ರಿ ಅಮೃತ ಸರೋವರ ಯೋಜನೆ ಅಡಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದ ಕೆರೆಯನ್ನು ಆಕರ್ಷಕವಾಗಿ ಪುನರುಜ್ಜೀವನಗೊಳಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಕೆರೆಯು ರಾಜ್ಯದಲ್ಲಿಯೇ ಮಾದರಿಯಾಗಿದೆ. ಹೀಗಾಗಿ ಕೆರೆಯ ಬಗ್ಗೆ ರವಿವಾರದ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಲ್‌ ಕೆರೂರು ಗ್ರಾಮದಲ್ಲಿ ಪ್ರಧಾನ ಮಂತ್ರಿ ಅಮೃತ ಸರೋವರ ಯೋಜನೆ ಅಡಿ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಕೆರೆಯು ಇಡೀ ರಾಜ್ಯ ಹಾಗೂ ದೇಶದಲ್ಲಿಯೇ ಆಕರ್ಷಣೆಯ ಕೇಂದ್ರವಾಗಿದೆ. ಮೊದಲು ಈ ಸ್ಥಳದಲ್ಲಿ ನೀರು ಸಂಗ್ರಹವಾಗಿ ಕೆಸರುಮಯವಾಗಿತ್ತು. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಿ, ಆಗಸ್ಟ್‌ 15ರಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸ್ವತಃ ಭೇಟಿ ನೀಡಿ, ಅಭಿವೃದ್ಧಿಗೊಂಡ ಕೆರೆಯನ್ನು ಲೋಕಾರ್ಪಣೆಗೊಳಿಸಿ, ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯ ಶ್ಲಾಘಿಸಿದ್ದನ್ನು ಹರ್ಷ ವ್ಯಕ್ತಪಡಿಸಿದ ಶಾಸಕ ಡಾ|ವೀರಣ್ಣ ಚರಂತಿಮಠ, ನೀರು ನಿಲ್ಲುವುದಕ್ಕೆ ಸುಮಾರು 6 ರಿಂದ 7 ಅಡಿ ಉದ್ದ ಹಾಗೂ ಸುಮಾರು 100 ಅಡಿಗೂ ಅಗಲವಾಗಿ ಅಗೆಯುವ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿ ಮಾಡಿಸಲಾಗಿದೆ. ಇದರ ಜೊತೆಗೆ ಕೆರೆಯ ಸುತ್ತಲೂ ಕಲ್ಲಿನಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ನಂತರ ಸುತ್ತಲೂ ಕಬ್ಬಿಣದ ಕಾಂಪೌಂಡ್‌ ನಿರ್ಮಾಣ ಮಾಡಿದ್ದು, ಸುಂದರವಾಗಿ ಕೆರೆ ಕಂಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ಮೂರು ಕೆರೆ ನಿರ್ಮಾಣ: ಮಳೆ ಬಂದಾಗ ಬೆಟ್ಟದಿಂದ ನೀರು ಬಂದು ಈ ಕೆರೆಗೆ ಸಂಗ್ರಹವಾಗುತ್ತದೆ. ಇದೇ ನೀರು ಜಾನುವಾರುಗಳಿಗೆ ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಬಳಕೆ ಆಗುತ್ತಿದ್ದು, ಸ್ಥಳೀಯ ರೈತರಿಗೆ ಅನುಕೂಲವಾಗುತ್ತಿದೆ. ಈ ಕೆರೆಯಿಂದ ಅಂತರ್‌ ಜಲಮಟ್ಟ ಹೆಚ್ಚಾಗುತ್ತಿದ್ದು, ಸ್ಥಳೀಯರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ಅಮೃತ ಯೋಜನೆ ಅಡಿ, ಬಾಗಲಕೋಟೆ ತಾಲೂಕಿನಲ್ಲಿ ಮೂರು ಕೆರೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

Advertisement

ಬಾಗಲಕೋಟೆ ಮತಕ್ಷೇತ್ರದದಲ್ಲಿ ಸಾಕಷ್ಟು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಮೊದಲು 20 ಲಕ್ಷ ರೂಪಾಯಿಗಳ ಅನುದಾನ ನಂತರ, 8 ಲಕ್ಷ ರೂಪಾಯಿಗಳಿಂದ ಸುತ್ತಲೂ ಕಾಂಪೌಂಡ್‌ ಹಾಗೂ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಮೇಶಗೌಡ ಗೌಡರ ತಿಳಿಸಿದರು.

ಗ್ರಾಮಸ್ಥರಿಂದ ಕೆರೆ ಅಭಿವೃದ್ಧಿ: ಕೆರೆಯ ಪಕ್ಕದಲ್ಲೇ ಹಳೆಯ ಭಾವಿ ಇದ್ದು, ಕೆರೆಯಿಂದ ಇದರಲ್ಲಿಯೂ ಸಹ ಜಲಮಟ್ಟ ಹೆಚ್ಚಾಗಿದೆ. ಇದರಿಂದ ಇಡೀ ಪ್ರದೇಶ ಸುಂದರ ವನದಂತೆ ಕಾಣುತ್ತಿದೆ ಎಂದು ಗ್ರಾಮಸ್ಥ ಬಿ.ಎಲ್‌. ಪಾಟೀಲ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮೆಚ್ಚುಗೆ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ದಿನದಂದು ಸಚಿವ ಸಿ.ಸಿ. ಪಾಟೀಲ, ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್‌ ಸೇರಿದಂತೆ ಇತರ ಗಣ್ಯರು ಈ ಕೆರೆಗೆ ಬಾಗಿನ ಅರ್ಪಿಸುವ ಮೂಲಕ  ಲೋಕಾರ್ಪಣೆ ಮಾಡಿದ್ದರು. ಇಂತಹ ಕೆರೆಯು ಇಡೀ ರಾಜ್ಯದಲ್ಲಿ ಮಾದರಿಯಾಗಿದ್ದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್‌ ಕೀ ಬಾತ್‌ ನಲ್ಲಿ ಬಿಲ್‌ ಕೆರೂರು ಗ್ರಾಮದಲ್ಲಿ ಅಭಿವೃದ್ಧಿ ಮಾಡಿರುವ ಈ ಕೆರೆಯನ್ನು ಪ್ರಸ್ತಾವನೆ ಮಾಡಿ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯ ಶ್ಲಾಘಿಸಿರುವುದು ಜಿಲ್ಲೆಯ ಹೆಮ್ಮೆ ಎಂದು ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next