Advertisement

ಕೆರೆ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ; ನ್ಯಾ. ಸಂದೀಪ್‌

12:55 PM Jun 16, 2022 | Team Udayavani |

ದೇವನಹಳ್ಳಿ: ಕೆರೆಗಳನ್ನು ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ನೀಡಿದ್ದು, ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ ಎಂದು ಜಿಲ್ಲಾಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸದಸ್ಯ ಹಾಗೂ ನ್ಯಾ. ಸಂದೀಪ್‌ ಸಾಲಿಯಾನ್‌ ತಿಳಿಸಿದರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ ದೇವನಹಳ್ಳಿ ಹಾಗೂ ವಕೀಲರ ಸಂಘ ದೇವನಹಳ್ಳಿ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿ ಗಿಡಮರಗಳನ್ನು ಬೆಳೆಸಿದಾಗ ಮಾತ್ರ ಭೂಮಿಯ ಮೇಲಿನ ಜೀವಸಂಕುಲ ನೆಮ್ಮದಿ ಯಿಂದ ಬದುಕಲು ಸಾಧ್ಯವಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಬಿದ್ದಿರುವ ಮಳೆಯಿಂದ ಕೆರೆಗಳಲ್ಲಿ ನೀರು ಇರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲು ನೀರನ್ನು ಸದ್ಬಳಕೆ ಮಾಡಬೇಕು. ಕೆರೆ ಸಂರಕ್ಷಣಾ ಕಾರ್ಯಾಗಾರಗಳಲ್ಲಿ ಕೆರೆಗಳ ಮಹತ್ವದ ಬಗ್ಗೆ ತಿಳಿಸಿ ಕೊಡುತ್ತಿದ್ದು, ಅದರ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಕೃತಿ ಸೇವೆಗೆ ಕೈಜೋಡಿಸಿ: ಪ್ರಸ್ತುತ ದಿನಗಳಲ್ಲಿ ಮೊ ಬೈಲ್‌ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ. ನಮ್ಮ ಮಕ್ಕಳ ಹುಟ್ಟುಹಬ್ಬವನ್ನು ಪ್ರಕೃತಿಯೊಂದಿಗೆ ಆಚರಿಸಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಸೇವೆಗೆ ಕೈಜೋಡಿಸಬೇಕು. ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ಕೆರೆಗಳನ್ನು ಸಂರಕ್ಷಣೆಗೆ ಕ್ರಮವಹಿಸಲಾಗಿದೆ. 1976ರಲ್ಲಿ 47ನೇ ತಿದ್ದುಪಡಿಯಂತೆ ಕೆರೆ, ಅರಣ್ಯ, ಜೀವಸಂಕುಲದ ರಕ್ಷಣೆ ಎಲ್ಲರ ಕರ್ತವ್ಯ ಎನ್ನುವುದನ್ನು ತಿಳಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಯುವ ಜನತೆಗೆ ಮೋಜು, ಮಸ್ತಿ ಮಾಡಲು ಕೆರೆ ದಂಡೆಗಳು ಬೇಕು. ಆದರೆ, ಅದರ ರಕ್ಷಣೆ ಯಾರಿಗೂ ಬೇಕಾಗಿಲ್ಲ ಎಂದು ಹೇಳಿದರು.

ತಿಮ್ಮಕ್ಕರ ಕೊಡುಗೆ ಅವಿಸ್ಮರಣೀಯ: ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಮಾತನಾಡಿ, ಬೆಂಗಳೂರು ನಗರದ ಬಹುತೇಕ ಕೆರೆಗಳು ನೂರು ಎಕರೆಗೆ ಹೆಚ್ಚಿನ ವಿಸ್ತೀರ್ಣದಲ್ಲಿದೆ. ಈ ಕೆರೆಗಳ ಅಭಿವೃದ್ಧಿಯಾದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಸಾಲುಮರದ ತಿಮ್ಮಕ್ಕನಲ್ಲಿರುವ ಪ್ರಕೃತಿಯೊಂದಿಗೆ ಬೆರೆಯುವ ಸಂಸ್ಕೃತಿಯಿಂದ ಅವರ ಸಾಲು ಮರಗಳ ಕೊಡುಗೆ ಅವಿಸ್ಮರಣೀಯ ಎಂದರು.

Advertisement

ಪ್ರತಿಯೊಬ್ಬರ ಕರ್ತವ್ಯ: ಕೆರೆ ಸಂರಕ್ಷಣೆಯ ಕಾರ್ಯಾಗಾರ ವಿಚಾರ ಬೆಂಗಳೂರು ಸೇರಿದಂತೆ ಎಲ್ಲೆಡೆ ಪ್ರಚಾರವಾಗಬೇಕು. ಒಂದು ಕೈಯಿಂದ ಈ ಕೆಲಸ ಸಾಧ್ಯವಿಲ್ಲ. ಎಲ್ಲರ ಕೊಡುಗೆಯಿಂದ ಕೆರೆಗಳ ರಕ್ಷಣೆ ಸಾಧ್ಯ. ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯತೆಯರು, ಅಂಗನವಾಡಿ ಕಾರ್ಯಕತೆಯರ ಕೊಡುಗೆ ಅಪಾರ. ಭೂಮಿಯನ್ನು, ಪರಿಸರವನ್ನು ದೇವರಾಗಿ ಪೂಜಿಸುವ ದೇಶ ಭಾರತ. ಕೆರೆಗಳ ರಕ್ಷಣೆ ಕೇವಲ ಅಧಿಕಾರಿಗಳ, ಜಿಲ್ಲಾಡಳಿತದ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಜಿಲ್ಲಾಧಿಕಾರಿ ಕೆ ಶ್ರೀನಿವಾಸ್‌, ಜಿಪಂ ಸಿಇಒ ರೇವಣಪ್ಪ, ತಹಶೀಲ್ದಾರ್‌ ಶಿವ ರಾಜು, ದೇವನ ‌ಹಳ್ಳಿ ತಾಪಂ ಇಒ ಎಚ್‌.ಡಿ. ವಸಂತಕುಮಾರ್‌, ಎನ್ವಿರಾನ್ಮೆಂಟ್‌ ಸಪೋರ್ಟ್‌ ಗ್ರೂಪ್‌ ಬೆಂಗಳೂರು ಸಂಯೋಜಕ ಲಿಯೋ ಎಫ್. ಸಲ್ದಾನ್‌, ಎನ್ವಿರಾನ್ಮೆಂಟ್‌ ಸಪೋರ್ಟ್‌ ಗ್ರೂಪ್‌ ಬೆಂಗಳೂರು ಟ್ರಸ್ಟಿ ಭಾರ್ಗವಿ ಎಸ್‌. ರಾವ್‌, ಗ್ರಾಪಂ ಪಿಡಿಒ, ಆಶಾ ಕಾರ್ಯಕರ್ತೆಯರು ಇದ್ದರು.

ಕೆರೆಗಳ ಸ್ವಚ್ಛತೆಗೆ ಕ್ರಮವಹಿಸಿ
ಮನೆಯ ಕಸ, ಕೋಳಿ ತ್ಯಾಜ್ಯಗಳಿಗೆ ಕೆರೆಗಳೇ ಕಸದ ತೊಟ್ಟಿ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರೂ ಮನೆ ಸುತ್ತಮುತ್ತಲಿನ ಕೆರೆಗಳಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಯೋಚಿಸಬೇಕು. ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಕೆರೆಗಳ ಸ್ವತ್ಛತೆಗೆ ಕ್ರಮವಹಿಸಬೇಕು ಎಂದು ಜಿಲ್ಲಾಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸದಸ್ಯ ಹಾಗೂ ನ್ಯಾ. ಸಂದೀಪ್‌ ಸಾಲಿಯಾನ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next