ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಯಸ್ಥನೊಬ್ಬ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರ ಮೊಬೈಲ್ ನಂಬರ್ ಅನ್ನು ಕೆಎಸ್‌ಆರ್‌ಟಿಸಿಯ ಪುರುಷರ ಶೌಚಾಲಯದಲ್ಲಿ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಮಹಿಳಾ ಕಾನ್‌ಸ್ಟೇಬಲ್ ನೀಡಿದ ದೂರಿನ ಮೇರೆಗೆ ಕಡೂರು ಮೂಲದ ಸತೀಶ್ ಎಂಬಾತನ ವಿರುದ್ಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್‌ಸ್ಟೇಬಲ್‌ಗೆ ಇತ್ತೀಚೆಗೆ ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಲೈಂಗಿಕ ವಿಚಾರವಾಗಿ ಮಾತನಾಡುತ್ತಿದ್ದರು. ಬಳಿಕ ವಿಚಾರಿಸಿದಾಗ ಕಡೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪುರುಷರ ಶೌಚಾಲಯದಲ್ಲಿ ಸಂತ್ರಸ್ತೆಯ ಮೊಬೈಲ್ ನಂಬರ್ ಬರೆದಿರುವುದು ಗೊತ್ತಾಗಿತ್ತು.
ಇದನ್ನೂ ಓದಿ:ಶಾಸಕ ಯು.ಟಿ.ಖಾದರ್ ಸಂಚರಿಸುತ್ತಿದ್ದ ಕಾರನ್ನು ಬೈಕಿನಲ್ಲಿ ಹಿಂಬಾಲಿಸಿದ ಅಪರಿಚಿತರು
ಸಂತ್ರಸ್ತೆ 2006ರಲ್ಲಿ ಡಿ.ಇಡಿ ವ್ಯಾಸಂಗ ಮಾಡುವಾಗ ಸತೀಶ್ ಸಹಪಾಠಿಯಾಗಿದ್ದ. 2017ರಲ್ಲಿ ಕಾಲೇಜಿನ ಸ್ನೇಹಿತರು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದರು. ಈ ಗ್ರೂಪ್‌ನಲ್ಲಿ ಸತೀಶ್ ಕೂಡ ಇದ್ದು, ಆಗಾಗ್ಗೆ ಸಂತ್ರಸ್ತೆಗೆ ಕರೆ ಮಾಡಿ ಮಾತನಾಡುವುದು, ಸಂದೇಶ ಕಳುಹಿಸುವುದು ಮಾಡುತ್ತಿದ್ದ. ಅದರಿಂದ ಬೇಸತ್ತ ಸಂತ್ರಸ್ತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಆರೋಪಿ ದ್ವೇಷ ಇಟ್ಟುಕೊಂಡು ಶೌಚಾಗೃಹದಲ್ಲಿ ಫೋನ್ ನಂಬರ್ ಬರೆದಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.