Advertisement

ನಾರಿಯರೇ ಎಚ್ಚರ…ಸೈಬರ್‌ ಲಂಪಟರಿಗೆ ಮಹಿಳೆಯರೇ ಟಾರ್ಗೆಟ್‌!

12:30 AM Aug 06, 2022 | Team Udayavani |

ನಾರಿಯರೇ ಎಚ್ಚರ. ಶ್ರೀಮಂತ ಮಹಿಳೆಯರು, ಮಹಿಳಾ ಟೆಕ್ಕಿಗಳು, ಉನ್ನತ ಹುದ್ದೆಯಲ್ಲಿರುವ ನಾರಿಯರನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಖೆಡ್ಡಾಕ್ಕೆ ಬೀಳಿಸಿ ಲಕ್ಷಾಂತರ ದುಡ್ಡು ಲಪಟಾಯಿಸುವ ಖದೀಮರಿದ್ದಾರೆ. ವಿಶೇಷವೆಂದರೆ, ಭಾವನೆಗಳ ಜತೆಗೆ ನಾಟಕವಾಡಿ ಕಡೆಗೆ ಮೋಸ ಮಾಡುವ ಇಂಥವರ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಇವರಿಗೆ ಬೆಂಗಳೂರೇ ಹಾಟ್‌ ಫೇವರಿಟ್‌ ಆಗಿದೆ ಎಂಬುದು ವಿಚಿತ್ರವೆನಿಸಿದರೂ ಸತ.

Advertisement

ನಿತ್ಯ 5-6 ಪ್ರಕರಣ ದಾಖಲು
ನಗರದಲ್ಲಿ ದಿನೇ ದಿನೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ವಂಚನೆಗೊಳಗಾದವರ ಕಥೆಗಳೂ ವಿಚಿತ್ರವಾಗಿವೆ. ಈ ಮಾದರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿತ್ಯ ರಾಜ್ಯದಲ್ಲಿ 5-6 ಕೇಸ್‌ಗಳು ಠಾಣೆ ಮೆಟ್ಟಿಲೇರುತ್ತಿವೆ. ದೇಶಾದ್ಯಂತ ದಿನಕ್ಕೆ ಸರಾಸರಿ 650ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ದೇಶದ ವಿವಿಧ ಸೈಬರ್‌ ಪೊಲೀಸ್‌ ಠಾಣೆಗಳಿಗೆ 13,587 ದೂರುಗಳು ಬಂದಿವೆ. ಆದರೆ, ಈ ಪೈಕಿ ಬೆರಳೆಣಿಕೆಯಷ್ಟು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ. ಶೇ.80ರಷ್ಟು ಕೇಸ್‌ಗಳಲ್ಲಿ ಪೊಲೀಸರಿಗೆ ಆರೋಪಿಗಳ ಸಣ್ಣ ಸುಳಿವೂ ಸಿಕ್ಕಿಲ್ಲ. ಇನ್ನು ವಂಚನೆಗೊಳಗಾದ ಶೇ.90ರಷ್ಟು ಮಹಿಳೆಯರು ಮಾನಕ್ಕೆ ಅಂಜಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸೈಬರ್‌ ಪೊಲೀಸ್‌ ಮೂಲಗಳು ತಿಳಿಸಿವೆ.

ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯಾದ್ಯಂತ 34,241 ಸೈಬರ್‌ ಕ್ರೈಂ ಪ್ರಕರಣ ದಾಖಲಾಗಿದ್ದು, ಈ ಪೈಕಿ ಶೇ.10ರಷ್ಟು ಕೇಸ್‌ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ವಂಚಿಸಿದ್ದಾಗಿದೆ. 2 ವರ್ಷಗಳಲ್ಲಿ 160ಕ್ಕೂ ಅಧಿಕ ಕೇಸ್‌ಗಳು ಮಹಿಳಾ ಆಯೋಗದ ಮೆಟ್ಟಿಲೇರಿವೆ.

ಕೇಸ್‌ ನಂ.1
ಫೇಸ್‌ಬುಕ್‌ ಫ್ರೆಂಡ್‌ನ‌ ನಂಬಿಕೆ ದ್ರೋಹ
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ವಿವಾಹಿತ ಮಹಿಳೆಗೆ ಫೇಸ್‌ಬುಕ್‌ನಲ್ಲಿ ದೆಹಲಿ ಮೂಲದ ಯುವಕನ ಪರಿಚಯವಾಗಿತ್ತು. ಪತಿಯೊಂದಿಗೆ ಪ್ರತಿದಿನ ಜಗಳ ಮಾಡುತ್ತಿದ್ದ ಮಹಿಳೆ ಆತನೊಂದಿಗೆ ಅಂತರ ಕಾಯ್ದುಕೊಂಡಿದ್ದಳು. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ ಯುವಕ ಮಹಿಳೆಯನ್ನು ಭೇಟಿ ಮಾಡಲು ಇಚ್ಛಿಸಿದ್ದ. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ್ದ ಮಹಿಳೆ, ಆತನನ್ನು ಅಲ್ಲಿಗೆ ಬರುವಂತೆ ಸೂಚಿಸಿ ವಿಳಾಸ ನೀಡಿದ್ದಳು. ಪತಿಗೆ ಸುಳ್ಳು ಹೇಳಿ ಮನೆಯಿಂದ ಹೊರಬಂದು, ಫೇಸ್‌ಬುಕ್‌ ಯುವಕನನ್ನು ಐಷಾರಾಮಿ ಹೋಟೆಲ್‌ನಲ್ಲಿ ಭೇಟಿಯಾಗಿದ್ದಳು. ಮೊದಲ ದಿನ ಇಬ್ಬರೂ ನಗರದಲ್ಲಿ ಸುತ್ತಾಡಿದ್ದು, ದೈಹಿಕ ಸಂಪರ್ಕ ಬೆಳೆಸಿದ್ದರು. ಇದಾದ ಬಳಿಕ ತನ್ನ ವರಸೆ ಬದಲಾಯಿಸಿದ ಯುವಕ, “ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿದೆ. ಇದಕ್ಕೆ ಕನಿಷ್ಠ 30 ಲಕ್ಷ ರೂ. ಅಗತ್ಯವಿದೆ. ನೀನೇ ಸಹಾಯ ಮಾಡಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡುತ್ತೇನೆ. ಕೆಲ ದಿನಗಳಲ್ಲೇ ಹಣ ಹಿಂತಿರುಗಿಸುತ್ತೇನೆ’ ಎಂದು ಮಹಿಳೆಯ ನಂಬಿಕೆ ಗಿಟ್ಟಿಸಿಕೊಂಡಿದ್ದ. ಪ್ರಿಯಕರನ ಮಾತಿಗೆ ಮರುಳಾದ ಟೆಕಿ ಕಷ್ಟಪಟ್ಟು 20 ಲಕ್ಷ ಜೋಡಿಸಿ ಕೊಟ್ಟಿದ್ದಳು. 3 ದಿನ ಮಹಿಳೆಯ ದುಡ್ಡಲ್ಲೇ ಮೋಜು-ಮಸ್ತಿ ಮಾಡಿದ ಯುವಕ, ಸದ್ಯದಲ್ಲೇ ಮತ್ತೆ ಸಿಗುವುದಾಗಿ ಹೇಳಿ ಹೋಗಿದ್ದ. ಮರುದಿನ ಮಹಿಳೆ ಆತನಿಗೆ ಕರೆ ಮಾಡದರೆ ಆತನ ಮೊಬೈಲ್‌ ಸ್ವಿಚ್‌x ಆಫ್ ಆಗಿತ್ತು. ಇದಾದ ಬಳಿಕ ಯುವಕ ಮಹಿಳೆಯ ಸಂಪರ್ಕಕ್ಕೆ ಸಿಗಲಿಲ್ಲ. ಇದಲ್ಲದೇ, ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡಿದ್ದ. ಈಗ ಚಿನ್ನ, ದುಡ್ಡು ಕೊಟ್ಟ ಮಹಿಳೆ ಪಜೀತಿಗೆ ಸಿಲುಕಿದ್ದು, ನ್ಯಾಯಕ್ಕಾಗಿ ಮಹಿಳಾ ಆಯೋಗದ ಮೊರೆ ಹೋಗಿದ್ದಾಳೆ.

ಕೇಸ್‌ ನಂ.2
ಪ್ರೇಮಿಗಳ ದಿನಕ್ಕಾಗಿ ಸ್ನೇಹಿತ
ಬೆಂಗಳೂರಿನ ಕಾಲೇಜೊಂದರಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ಫೇಸ್‌ಬುಕ್‌ನಲ್ಲಿ ಮಂಗಳೂರು ಮೂಲದ ಯುವಕ ಪರಿಚಯವಾಗಿದ್ದ. ಆತನ ಜತೆಗೆ ಪ್ರತಿದಿನ ಚಾಟ್‌ ಮಾಡುತ್ತಿದ್ದಳು. ಕಳೆದ ವ್ಯಾಲೆಂಟೈನ್ಸ್‌ ಡೇ (ಪ್ರೇಮಿಗಳ ದಿನ) ದಿನದಂದು ವಿದ್ಯಾರ್ಥಿನಿಯ ಸ್ನೇಹಿತೆಯರು ತಮ್ಮ ಬಾಯ್‌ ಫ್ರೆಂಡ್‌ಗಳ ಜತೆಗೆ ಪಾರ್ಟಿ ಮಾಡಲು ಯೋಜನೆ ರೂಪಿಸಿದ್ದರು. ಆದರೆ, ಈಕೆಗೆ ಮಾತ್ರ ಯಾರೂ ಬಾಯ್‌ಫ್ರೆಂಡ್‌ ಇರದ ಹಿನ್ನೆಲೆಯಲ್ಲಿ ಸ್ನೇಹಿತೆಯರು ದೂರ ಇಟ್ಟಿದ್ದರು. ಹೇಗಾದರೂ ಮಾಡಿ ತಾನೂ ಸ್ನೇಹಿತೆಯರ ಜತೆ ಪಾರ್ಟಿ ಮಾಡಬೇಕೆಂದುಕೊಂಡ ವಿದ್ಯಾರ್ಥಿನಿ, ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡುತ್ತಿದ್ದ ಯುವಕನಿಗೆ ಈ ವಿಚಾರ ತಿಳಿಸಿದ್ದಳು. “ಪ್ರೇಮಿಗಳ ದಿನದಂದು ಒಂದು ದಿನದ ಮಟ್ಟಿಗೆ ಸ್ನೇಹಿತೆಯರ ಜತೆಗೆ ಪಾರ್ಟಿ ಮಾಡುವ ಉದ್ದೇಶದಿಂದ ನನ್ನ ಪ್ರಿಯಕರನಾಗಿರಬೇಕು. ನಂತರ ನಿನಗೂ, ನನಗೂ ಸಂಬಂಧವಿಲ್ಲ’ ಎಂದಿದ್ದಳು. ಇದಕ್ಕೊಪ್ಪಿದ ಯುವಕ ವಿದ್ಯಾರ್ಥಿನಿಯನ್ನು ಭೇಟಿಯಾಗಿದ್ದ. ಸ್ನೇಹಿತೆಯರ ಗುಂಪಿನಲ್ಲಿ ಈಕೆಯೂ ಫೇಸ್‌ಬುಕ್‌ ಫ್ರೆಂಡ್‌ ಜತೆಗೆ ಪಾರ್ಟಿ ಮುಗಿಸಿದ್ದಳು. ಇಷ್ಟಕ್ಕೆ ಸುಮ್ಮನಾಗದ ಯುವಕ, ಆಕೆಯನ್ನು ಪುಸಲಾಯಿಸಿ ಲಾಡ್ಜ್ವೊಂದಕ್ಕೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆದಿದ್ದ. ಸಾಲದ್ದಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ಕೊಡದಿದ್ದರೆ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ನಿನ್ನ ಸ್ನೇಹಿತರಿಗೆ ಹೇಳುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿ ವಿದ್ಯಾರ್ಥಿನಿಯ ಬ್ಯಾಂಕ್‌ ಖಾತೆಯಲ್ಲಿದ್ದ ಸಾವಿರಾರು ರೂ.ಪಡೆದು ಪರಾರಿಯಾಗಿದ್ದಾನೆ.

ಕೇಸ್‌ ನಂ.3

ಅಮೆರಿಕದ ಕನಸು ಹತ್ತಿ
ಬೆಂಗಳೂರಿನ ಪ್ರಸಿದ್ಧ ಕಾಲೇಜೊಂದರ ಉಪನ್ಯಾಸಕಿಯೊಬ್ಬರಿಗೆ ಅಮೆರಿಕದ ಪ್ರಜೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಉಪನ್ಯಾಸಕಿ ಆತನ ರಿಕ್ವೆಸ್ಟ್‌ ಸ್ವೀಕರಿಸಿದ ಕೂಡಲೇ ತಾನು ಎಂಜಿನಿಯರ್‌ ಆಗಿ ಅಮೆರಿಕದಲ್ಲೇ ಕೆಲ ವರ್ಷಗಳಿಂದ ನೆಲೆಸಿರುವುದಾಗಿ ಹೇಳಿದ್ದ. ಪ್ರತಿದಿನ ಉಪನ್ಯಾಸಕಿ ಜತೆ ಆತ್ಮೀಯತೆಯಿಂದ ಮಾತನಾಡಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ಕೆಲ ದಿನಗಳ ಹಿಂದೆ ಉಪನ್ಯಾಸಕಿಗೆ ಪ್ರೇಮ ನಿವೇದನೆ ಮಾಡಿದ್ದ. ವಿವಾಹವಾಗಿ ಅಮೆರಿಕಕ್ಕೆ ಕರೆದುಕೊಂಡು ಬರುತ್ತೇನೆ ಎಂದೂ ಭರವಸೆ ಕೊಟ್ಟಿದ್ದ. ನಿಮ್ಮನ್ನು ಭೇಟಿಯಾಗುವುದಾಗಿ ಹೇಳಿ ಉಪನ್ಯಾಸಕಿಯ ಮನೆಯ ವಿಳಾಸ ಪಡೆದುಕೊಂಡಿದ್ದ. ಇತ್ತೀಚೆಗೆ ಉಪನ್ಯಾಸಕಿಗೆ ಕರೆ ಮಾಡಿದ ಆತ “ನಾನು ಅಮೆರಿಕದಿಂದ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ. ನನ್ನ ಬ್ಯಾಂಕ್‌ ಖಾತೆಯಲ್ಲಿ ಕೋಟ್ಯಂತರ ಯುಎಸ್‌ ಡಾಲರ್‌ ಇದೆ. ಇಲ್ಲಿ ಓಡಾಡಲು ಭಾರತೀಯ ರೂಪಾಯಿ ಕೇಳುತ್ತಿದ್ದಾರೆ. ಇಲ್ಲಿ ನನಗೆ ಪರಿಚಯವಾಗಿರುವ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಗೆ ತುರ್ತಾಗಿ 6 ಲಕ್ಷ ರೂ. ಜಮೆ ಮಾಡು. ಅವರು ಅದನ್ನು ನನಗೆ ನಗದು ರೂಪದಲ್ಲಿ ಕೊಡುತ್ತಾರೆ. ನಾನು ಭೇಟಿಯಾದ ಕೂಡಲೇ ಹಣ ಹಿಂತಿರುಗಿಸುತ್ತೇನೆ’ ಎಂದು ಹೇಳಿದ್ದ. ಮುಂದೆ ಆತನನ್ನು ವಿವಾಹವಾಗಿ ಅಮೆರಿಕದಲ್ಲಿ ಐಷಾರಾಮಿ ಜೀವನ ನಡೆಸುವ ಕನಸು ಕಂಡುಕೊಂಡಿದ್ದ ಉಪನ್ಯಾಸಕಿ, ಆತನೇ ತನ್ನ ಭಾವಿ ಪತಿ ಎಂದು ಭಾವಿಸಿ 2.50 ಲಕ್ಷ ರೂ. ಅನ್ನು ಆತ ಹೇಳಿದ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದಳು. ಇಷ್ಟಕ್ಕೆ ಸುಮ್ಮನಾಗದ ಯುವಕ, ಒಟ್ಟು 6 ಲಕ್ಷ ರೂ. ಕಳುಹಿಸುವಂತೆ ಹೇಳಿದ್ದೇನೆ. ನೀನು ಕೇವಲ 2.50 ಲಕ್ಷ ರೂ. ಕಳುಹಿಸಿದ್ದೀಯಾ.ಕೂಡಲೇ ಬಾಕಿ ಹಣ ಕಳಿಸುವಂತೆ ಉಪನ್ಯಾಸಕಿಗೆ ಬೆದರಿಸಿದ್ದ. ಆಕೆ ಮರುದಿನ ಹಣ ಕಳುಹಿಸುವುದಾಗಿ ಅಂಗಲಾಚಿದರೂ ಕೇಳದೇ ಮೊಬೈಲ್‌ ಸ್ವಿಚ್‌x ಆಫ್ ಮಾಡಿಕೊಂಡಿದ್ದ. ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ತನ್ನ ಪರಿಚಿತರಿಗೆ ಉಪನ್ಯಾಸಕಿ ನಡೆದ ಸಂಗತಿ ವಿವರಿಸಿದಾಗ ಇದು ಸೈಬರ್‌ ಕಳ್ಳರ ಕೃತ್ಯ ಎಂಬುದು ಗೊತ್ತಾಗಿದೆ. ಇದೀಗ ಅಮೆರಿಕಾಕ್ಕೆ ಹೋಗುವ ಕನಸು ಕಂಡಿದ್ದ ಉಪನ್ಯಾಸಕಿ, ಪೆಚ್ಚು ಮೋರೆ ಹಾಕಿಕೊಂಡು ಮಹಿಳಾ ಆಯೋಗಕ್ಕೆ ಹೋಗಿದ್ದಾರೆ.

Advertisement

-ಅವಿನಾಶ್‌ ಮೂಡಂಬಿಕಾನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next