ಹೊಸದಿಲ್ಲಿ: ಅಲ್‌ಕಾಯಿದಾ ಉಗ್ರ ಉಸಾಮಾ ಬಿನ್ ಲಾದನ್ ಭಾರತದ ವಿಚಾರಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ. ಕಾಶ್ಮೀರದ ವಿಚಾರಗಳು ಹಾಗೂ ಮುಂಬಯಿ ದಾಳಿ ಆರೋಪಿ, ಲಷ್ಕರ್ ಉಗ್ರ ಡೇವಿಡ್ ಹೆಡ್ಲಿ ವಿಚಾರ ಣೆಯ ವಿವರಗಳನ್ನು ಆತ ಪಡೆಯುತ್ತಿದ್ದ. ಅಷ್ಟೇ ಅಲ್ಲ, ಭಾರತದ ಕೆಲವು ಪತ್ರಿಕೆಗಳನ್ನು ನಿತ್ಯವೂ ಓದುತ್ತಿದ್ದ ಎಂದು ತಿಳಿದುಬಂದಿದೆ. 2011ರಲ್ಲಿ ಅಮೆರಿಕದ ದಾಳಿ ವೇಳೆ ಲಾದನ್ ಅಡಗಿದ್ದ ಮನೆಯಲ್ಲಿ ಸಿಕಿದ್ಕ 4.70 ಲಕ್ಷ ಕಡತಗಳನ್ನು ಅಮೆರಿಕದ ಕೇಂದ್ರೀಯ ಗುಪ್ತಚರ ದಳ (ಸಿಐಎ) ಬಿಡುಗಡೆ ಮಾಡಿದೆ.
ಈ ಕಡತಗಳಲ್ಲಿ ಲಾದನ್ ಪುತ್ರನ ವಿವಾದ ವೀಡಿಯೋ ಹಾಗೂ ಲಾದನ್ ಬರೆದಿದ್ದ ಡೈರಿಗಳೂ ಲಭ್ಯವಾಗಿವೆ.
ಕಾಶ್ಮೀರಕ್ಕೆ ಸಂಬಂಧಿಸಿದ ಹಾಗೂ ಅಲ್ಲಿನ ಉಗ್ರರಿಗೆ ಸಂಬಂಧಿಸಿದ ಹಲವು ಲೇಖನಗಳು ಮತ್ತು ಸುದ್ದಿಗಳ ತುಣುಕುಗಳು ಲಾದನ್ ಬಳಿ ಇದ್ದ ಕಂಪ್ಯೂಟರಿನಲ್ಲಿ ಪತ್ತೆಯಾಗಿವೆ. ಅಲ್ಲದೆ ಪಾಕಿಸ್ಥಾನದ ಇನ್ನೊಬ್ಬ ಉಗ್ರ ಇಲ್ಯಾಸ್ ಕಶ್ಮೀರಿಗೆ ಸಂಬಂಧಿಸಿದ ಲೇಖನಗಳನ್ನೂ ಈತ ಸಂಗ್ರಹಿಸಿದ್ದ. ಹತ್ತಕ್ಕೂ ಹೆಚ್ಚು ಭಾರತೀಯ ಪತ್ರಿಕೆಗಳ ಸುದ್ದಿ, ಲೇಖನಗಳ ತುಣುಕುಗಳು ಅವನ ಮನೆಯಲ್ಲಿದ್ದವು. ಆದರೆ ಕೆಲವು ವೀಡಿಯೋಗಳು, ಕಡತಗಳನ್ನು ಬಹಿರಂಗಗೊಳಿಸಿಲ್ಲ. ಈ ಪೈಕಿ ಕೆಲವು ಕೃತಿಸ್ವಾಮ್ಯ ಹೊಂದಿದ್ದಾಗಿವೆ ಎಂದು ಸಿಐಎ ಹೇಳಿದೆ. ಅಧ್ಯಕ್ಷ ಟ್ರಂಪ್ ಆದೇಶದ ಮೇರೆಗೆ ಇವನ್ನು ಬಿಡುಗಡೆ ಮಾಡಲಾಗಿದೆ.
ಮಕ್ಕಳ ವೀಡಿಯೋಗಳು, ಕಾಮಿಡಿ ಸಿನಿಮಾ, ಜಾಕಿಚಾನ್‌ನ ಶೋ, ಇಂಗ್ಲಿಷ್ ಕಲಿಕೆ ಸಾಮಗ್ರಿಗಳೂ ಲಾದನ್ ಮನೆಯಲ್ಲಿ ಪತ್ತೆಯಾಗಿದ್ದು, ಮಕ್ಕಳು ಹಾಗೂ ಕುಟುಂಬದೊಂದಿಗೆ ಇಲ್ಲಿ ನೆಲೆಸಿದ್ದ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಸಿಐಎ ಹೇಳಿದೆ. ಈ ದಾಖಲೆಗಳು ಲಾದನ್ ವರ್ತನೆಯ ಬಗ್ಗೆ ಮಹತ್ವದ ವಿವರಗಳನ್ನು ನೀಡಲಿವೆ.