ನವದೆಹಲಿ/ಬೀಜಿಂಗ್:ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ದೀರ್ಘಕಾಲದ ಮಾತುಕತೆ ಬಳಿಕ ಚೀನಾ ಮತ್ತು ಭಾರತ ಮುಂದಾಗಿದ್ದು, ಈ ನಿಟ್ಟಿನಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಪ್ರದೇಶದಿಂದ ಹಂತ, ಹಂತವಾಗಿ ಸೇನೆಯನ್ನು ಹಿಂದೆ ಸರಿಸಲು ಪರಸ್ಪರ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವ ಸೂಕ್ಷ್ಮ ಪ್ರದೇಶದಿಂದ ಶೇ.30ರಷ್ಟು ಸೇನೆಯನ್ನು ಎಂಟು ದಿನದೊಳಗೆ ಹಿಂಪಡೆಯುವುದಾಗಿ ಚೀನಾ ಒಪ್ಪಿಕೊಂಡಿರುವುದಾಗಿ ಹೇಳಿದೆ.
ಉಭಯ ದೇಶಗಳ ನಡುವಿನ ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನವೆಂಬರ್ 6ರಂದು ಚುಶೂಲ್ ನಲ್ಲಿ ಎಂಟನೇ ಬಾರಿ ಮಿಲಿಟರಿ ಕಮಾಂಡರ್ ಹಂತದ ಮಾತುಕತೆ ನಡೆದಿತ್ತು. ಸೇನೆಯನ್ನು ಹಿಂಪಡೆಯುವುದು ಸೇರಿದಂತೆ ಮೂರು ಹಂತಗಳ ಸಂಘರ್ಷರಹಿತ ಪ್ರಸ್ತಾಪಕ್ಕೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಕ್ರಮ ಚಿನ್ನ ಸಾಗಾಣಿಕೆ ಬಗ್ಗೆ ಶಿವಶಂಕರ್‌ಗೆ ಗೊತ್ತಿತ್ತು: ಕೋರ್ಟ್‌ಗೆ ಇ.ಡಿ. ಮಾಹಿತಿ
ಆದರೆ ಸದ್ಯದ ಸ್ಥಿತಿಯಲ್ಲಿ ಗಡಿಯಲ್ಲಿ ಯಾವ ಘಟನೆಯೂ ನಡೆದಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಐಎಎನ್ ಎಸ್ ಗೆ ತಿಳಿಸಿದ್ದಾರೆ. ಅಲ್ಲದೇ ಒಂಬತ್ತನೇ ಸುತ್ತಿನ ಮಾತುಕತೆ ಈ ವಾರದಲ್ಲಿ ನಡೆಯುವ ಸಾಧ್ಯತೆ ಇದ್ದು, ದಿನಾಂಕವನ್ನು ಇನ್ನಷ್ಟೇ ನಿಗದಿಪಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಐಎಎನ್ ಎಸ್ ವರದಿ ಪ್ರಕಾರ, ಭಾರತ ಮತ್ತು ಚೀನಾ ಸೇರಿದಂತೆ ಎರಡೂ ದೇಶಗಳ ಯೋಧರು ಮೈನಸ್ 20ಡಿಗ್ರಿ ಸೆಲ್ಸಿಯಸ್ ಚಳಿಗಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ತಕ್ಷಣಕ್ಕೆ ಜಾರಿಯಾಗುವಂತೆ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿದೆ. ಪ್ರತಿದಿನ ಶೇ.30ರಷ್ಟು ಯೋಧರನ್ನು ಹಿಂಪಡೆಯುವುದಾಗಿ ತಿಳಿಸಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ವಿಡಿಯೋ ಗೇಮ್ ಆಡಬೇಡ ಎಂದ ಪತ್ನಿಯ ಮಾತಿಗೆ ಬೇಸರಗೊಂಡ ಪತಿ ಆತ್ಮಹತ್ಯೆ!
ವಿವಾದಕ್ಕೆ ಕಾರಣವಾದ ಪ್ರದೇಶದಿಂದ ಸೇನೆಯನ್ನು ಹಿಂಪಡೆದಿರುವ ಬಗ್ಗೆ ಡ್ರೋನ್ ಮತ್ತು ನಿಯೋಗಗಳ ಮಾತುಕತೆಯಲ್ಲಿ ದೃಢಪಡಿಸಿಕೊಳ್ಳಲಾಗುವುದು ಎಂದು ವರದಿ ತಿಳಿಸಿದೆ.