ಬಹುಶಃ ಕನ್ನಡ ಚಿತ್ರರಂಗದಲ್ಲಿ ಕವಿ ಹಾಗೂ ಆತನ ಅಭಿಮಾನಿಯ ಕುರಿತು ಯಾವೊಂದು ಸಿನಿಮಾ ಬಂದ ಉದಾಹರಣೆಯಿಲ್ಲ. ಈಗ ಅಂಥದ್ದೊಂದು ಪ್ರಯತ್ನವಾಗಿರುವುದಷ್ಟೇ ಅಲ್ಲ, ಆ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಹೆಸರು “ಹಳ್ಳಿ ಸೊಗಡು’. ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಿರಿಯ ಗೀತರಚನೆಕಾರ ಮತ್ತು ಕವಿ ಡಾ. ದೊಡ್ಡರಂಗೇಗೌಡ ಹಾಗೂ ಅವರ ಅಭಿಮಾನಿಯ ಕುರಿತು ಒಂದು ಸಿನಿಮಾ ಮೂಡಿ ಬಂದಿದೆ. ಇದುವರೆಗೆ ಸುಮಾರು 185 ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಕಪಿಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
“ನನಗೆ ತಿಳಿದ ಮಟ್ಟಿಗೆ ಇದುವರೆಗೆ ಕ್ರಿಕೆಟರ್, ಕುಸ್ತಿಪಟು, ಕ್ರೀಡಾಪಟುಗಳ ಕುರಿತ ಚಿತ್ರ ಬಂದಿದೆ. ಕೆಲ ದಂತಕತೆ ಎನಿಸಿದವರ ಚಿತ್ರಗಳು ಮೂಡಿಬಂದಿವೆ. ಆದರೆ, ಒಬ್ಬ ಗೀತರಚನೆಕಾರ, ಕವಿಯೊಬ್ಬನ ಕುರಿತು ಚಿತ್ರ ಬಂದಿಲ್ಲ. “ಹಳ್ಳಿ ಸೊಗಡು’ ಆ ಸಾಲಿಗೆ ಮೊದಲ ಚಿತ್ರ ಎನಿಸಿಕೊಳ್ಳುತ್ತದೆ. ಆರು ಜನ ವಿದ್ಯಾರ್ಥಿಗಳು ಸೇರಿ ಪ್ರೀತಿಯಿಂದ ಮಾಡಿರುವ ಚಿತ್ರವಿದು. ನನ್ನೂರು ಕುರುಬರಹಳ್ಳಿ. ಅಲ್ಲಿ ಹುಡುಗನೊಬ್ಬ ಗೀತರಚನೆಕಾರ ದೊಡ್ಡರಂಗೇಗೌಡರ ಅಭಿಮಾನಿ. ಅವನ ಹಾಗೂ ಅವನ ಗೆಳೆಯರ ಕುರಿತ ಕಥೆ ಇಲ್ಲಿದೆ. ಚಿಕ್ಕಂದಿನಲ್ಲಿ ಹಾಡು ಕೇಳುವ ಖಯಾಲಿ ಅವನದು.
“ಪಡುವಾರಳ್ಳಿ ಪಾಂಡವರು’ ಚಿತ್ರದ “ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೇ ಮರೆಯಲಿ …’ ಹಾಡು ಅವನಿಗಿಷ್ಟ. ಆ ಹಾಡು ಕೇಳಲು ತಂದೆ-ತಾಯಿ ಜತೆ ಹಠ ಮಾಡಿ ಒಂದು ಟೇಪ್‌ರೆಕಾರ್ಡರ್ ಪಡೆದು, ಅದನ್ನು ಕಾಪಿ ಮಾಡಿಕೊಂಡು ಪದೇ ಪದೇ ಕೇಳುವ ಗೀಳು ಅವನದು. ಹೀರೋ ತನ್ನ ಹಳ್ಳಿಯಲ್ಲಿ ರೈತರಾದಿಯಾಗಿ, ಸಂಗೀತ-ಸಾಹಿತ್ಯ ಕಡೆ ಆಸಕ್ತಿ ಇರುವ ಒಂದಷ್ಟು ಗೆಳೆಯರನ್ನು ಸೇರಿಸಿ ಸಂಘ ಮಾಡಿಕೊಂಡು, ಹಾಡುವುದನ್ನು ಶುರುವಿಟ್ಟುಕೊಳ್ಳುತ್ತಾನೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕವಿ ಬರೆದ ಹಾಡುಗಳನ್ನು ಹಾಡುತ್ತ ಬದುಕು ಸವೆಸುತ್ತಾನೆ. ಆ ಮಧ್ಯೆ ಭರತನಾಟ್ಯ ಪ್ರವೀಣೆ ನಾಯಕಿ ಜತೆ ಪ್ರೀತಿ ಚಿಗುರುತ್ತೆ. ಆಮೇಲೆ ಏನಾಗುತ್ತೆ ಎಂಬುದು ಸಸ್ಪೆನ್ಸ್ ಎನ್ನುತ್ತಾರೆ ಅವರು.
“ಚಿತ್ರದಲ್ಲಿ ನಾನು ಬರೆದ ನಾಲ್ಕು ವಿಶೇಷ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ವೇಲು, ಸಾ.ರಾ.ಗೋವಿಂದು ಹಾಗೂ ಆಕಾಶ್ ಆಡಿಯೋ ಕಂಪೆನಿ ಪಡೆದಿದ್ದ ಹಕ್ಕುಗಳ ಹಾಡುಗಳನ್ನು ಮನವಿ ಮಾಡಿಕೊಂಡು ಇಲ್ಲಿ ಬಳಸಿದ್ದೇವೆ. ಹೀರೋ ಇಲ್ಲಿ ಗೀತರಚನೆಕಾರರ ಅಭಿಮಾನಿಯಾಗಿರುವುದರಿಂದ ಹಾಡುಗಳು ಇಲ್ಲಿ ಹೈಲೈಟ್ ಆಗಿವೆ. ಹೀರೋ ಚಿಕ್ಕಂದಿನ ಪಾತ್ರಧಾರಿಯಾಗಿ ನನ್ನ ಮೊಮ್ಮಗ ಹೇಮಂತ್ ಪುಷ್ಕರ್ ಮಾಡಿದ್ದಾನೆ. ಹೀರೋ ಆಗಿ ಆರವ್ ಸೂರ್ಯ ನಟಿಸಿದರೆ, ಆತನಿಗೆ ನಾಯಕಿಯಾಗಿ ಅಕ್ಷರ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಬೇರೆ ರೀತಿಯಲ್ಲಿವೆ. ಇನ್ನು, ನನ್ನ ಪುತ್ರ ಕೂಡ ಒಂದು ಹಾಡು ಬರೆದಿದ್ದಾರೆ.
ಉದಯಲೇಖ ಎಂಬುವರು ಒಂದು ಹಾಡು ಬರೆದಿದ್ದಾರೆ. ನಾನು ಕೂಡ ಸಾಮಾಜಿಕ ಸಮಸ್ಯೆ ಇಟ್ಟುಕೊಂಡು ಒಂದು ಹಾಡನ್ನು ಬರೆದಿದ್ದೇನೆ’ ಎಂದು ವಿವರ ಕೊಡುತ್ತಾರೆ ದೊಡ್ಡರಂಗೇಗೌಡರು. “ಇಲ್ಲಿ ಗಂಭೀರ ವಿಷಯದ ಜತೆಗೆ ಹಾಸ್ಯವೂ ಇದೆ. ಡಿಂಗ್ರಿ ನಾಗರಾಜ್, ಅರವಿಂದ್ ಇತರರು ಇದ್ದಾರೆ. ನನ್ನ 45 ವರ್ಷಗಳ ಆಲ್ಬಂ ಕೂಡ ನಿರ್ದೇಶಕರಿಗೆ ಕೊಟ್ಟಿದ್ದೆ. ಅಲ್ಲಿರುವ ಅಪರೂಪದ ವ್ಯಕ್ತಿಗಳ ಜತೆಗಿನ ಫೋಟೋಗಳನ್ನು ಬಳಸಿ ಹಾಡೊಂದನ್ನು ಮಾಡಿದ್ದಾರೆ. ಚಿತ್ರದಲ್ಲೊಂದು ವಿಶೇಷತೆ ಇದೆ. ಅದೇ ಕ್ಲೈಮ್ಯಾಕ್ಸ್. ನಾನು ಸಿನಿಮಾ ನೋಡಿ, ಪುನಃ ಕೆಲ ಅಂಶಗಳೊಂದಿಗೆ ಚಿತ್ರೀಕರಿಸುವಂತೆ ಹೇಳಿದ್ದೆ. ಅದನ್ನೆಲ್ಲವೂ ಚಿತ್ರತಂಡ ಮಾಡಿದೆ’ ಎಂಬುದು ಅವರ ಮಾತು.