ಬೆಂಗಳೂರು: ‘ಒಕ್ಕಲಿಗ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಸಮುದಾಯದ ಮೂವರು ಸ್ವಾಮೀಜಿಗಳು ಸಮಾಜವನ್ನು ಒಟ್ಟಿಗೆ ಮುನ್ನಡೆಸುವ ಮೂಲಕ ಸಮುದಾಯದವರಲ್ಲಿ ಐಕ್ಯತೆ ಮೂಡಿಸಲು ಮುಂದಾಗಬೇಕು’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ರಾಜ್ಯ ಒಕ್ಕಲಿಗರ ಸಂಘವು ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಅಪೂರ್ವ ಪುರುಷಸಿಂಹ ಕೆ.ಎಚ್. ರಾಮಯ್ಯ’ ಸಂಸ್ಮರಣ ಗ್ರಂಥ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಆದಿಚುಂಚನಗಿರಿ ಮಠದ ಹಿಂದಿನ ಮಠಾಧಿಪತಿಗಳಾಗಿದ್ದ ಡಾ| ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಸ್ವಲ್ಪ ವ್ಯತ್ಯಾಸವಿದ್ದರೂ ಅದು ವೈಯಕ್ತಿಕವಾಗಿರಲಿಲ್ಲ. ಅವರ ದೂರದೃಷ್ಟಿ, ಕೊಡುಗೆಯನ್ನು ಸಮುದಾಯವರು ಸದಾ ಸ್ಮರಿಸಬೇಕು’ ಎಂದು ಅವರು ಬಣ್ಣಿಸಿದರು.
ದೇವೇಗೌಡರು ನನ್ನ ನಾಯಕರು
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ‘ದೇವೇಗೌಡರು ನನ್ನ ನಾಯಕರು. ಯಾವುದೇ ಸಂದರ್ಭದಲ್ಲೂ ನಮ್ಮತನವನ್ನು ಗಟ್ಟಿಯಾಗಿ ಉಳಿಸಿಕೊಂಡು ನಡೆಸುವಲ್ಲಿ ಈ ಹಿಂದೆ ಕೆಲವು ಲೋಪಗಳಾಗಿದ್ದು, ಅದನ್ನು ಒಪ್ಪಿಕೊಳ್ಳುತ್ತೇನೆ. ಇನ್ನು ಮುಂದೆ ಆ ರೀತಿ ಆಗದಂತೆ ಮುನ್ನೆಚ್ಚರಿಕೆಯಿಂದ ಮುಂದುವರಿಯುತ್ತೇನೆ’ ಎಂದು ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.36ರಷ್ಟು ಒಕ್ಕಲಿಗರಿದ್ದು, ಗೆಲುವಿಗೆ ನಿರ್ಣಾಯಕರೆನಿಸಿದ್ದಾರೆ. ಆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದಾಗ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದಾಗ ಹೆಸರಿನೊಂದಿಗೆ ಗೌಡ ಎಂಬುದನ್ನು ಸೇರಿಸಿಕೊಂಡರೆ ಉಪಯುಕ್ತವಾಗಲಿದೆ ಎಂದು ಸಲಹೆ ನೀಡಿದರು. ಅಲ್ಲಿಯವರೆಗೆ ಸದಾನಂದನಾಗಿದ್ದ ನಾನು ಸದಾನಂದ ಗೌಡನಾದೆ. ಈ ಗೌಡ ಹೆಸರಿನ ಏಣಿಯ ಮೂಲಕ ಈವರೆಗೆ ನಾನಾ ಉನ್ನತ ಸ್ಥಾನಗಳನ್ನು ಪಡೆದಿದ್ದೇನೆ ಎಂದು ಅವರು ನುಡಿದರು.