Advertisement

ಜಿಲ್ಲೆಯಲ್ಲಿ 1888 ಶಿಕ್ಷಕರ ಕೊರತೆ  

03:01 PM Jun 08, 2023 | Team Udayavani |

ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು, ಕಳೆದ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಶೇ.96.04ರಷ್ಟು ಫಲಿತಾಂಶ ಬಂದಿದೆ. ಆದರೆ, ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ.

Advertisement

ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲೂಕು ಮಟ್ಟದ ಸಭೆಯಲ್ಲೂ ಶಿಕ್ಷಕರ ಕೊರತೆ ಬಗ್ಗೆ ದೊಡ್ಡಮಟ್ಟದ ಚರ್ಚೆಯಾಗಿದೆ. ಆದರೆ, ಸರ್ಕಾರದಿಂದ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರ ನೇಮಕಾತಿ ಮಾಡದಿರುವುದು ಕೊರತೆಗೆ ಕಾರಣವಾಗಿದೆ. ಒಂದು ಶಾಲೆಗೆ ಒಬ್ಬರೇ ಶಿಕ್ಷಕರಿದ್ದರೆ, ಕೆಲವು ಕಡೆ ಇಬ್ಬರು, ಮೂವರಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

1562 ಪ್ರಾಥಮಿಕ ಶಿಕ್ಷಕರ ಕೊರತೆ: ಪ್ರಾಥಮಿಕ ಶಾಲೆಗಳಿಗೆ ಒಟ್ಟು 1562 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಪ್ರಾಥಮಿಕ ಶಾಲೆಗಳಿಗೆ 5183 ಶಿಕ್ಷಕರ ಮಂಜೂರು ಮಾಡಲಾಗಿದ್ದು, 3621 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಕೆ.ಆರ್‌.ಪೇಟೆ 258, ಮದ್ದೂರು 268, ಮಳವಳ್ಳಿ 329, ಮಂಡ್ಯ ದಕ್ಷಿಣ ವಲಯ 95, ಮಂಡ್ಯ ಉತ್ತರ ವಲಯ 140, ನಾಗಮಂಗಲ 234, ಪಾಂಡವಪುರ 139 ಹಾಗೂ ಶ್ರೀರಂಗಪಟ್ಟಣ ದಲ್ಲಿ 99 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.

326 ಪ್ರೌಢಶಾಲಾ ಶಿಕ್ಷಕರ ಹುದ್ದೆ ಖಾಲಿ: ಪ್ರೌಢಶಾಲಾ ವಿಭಾಗದಲ್ಲಿ 326 ಶಿಕ್ಷಕರ ಕೊರತೆ ಇದೆ. ಕೆ.ಆರ್‌.ಪೇಟೆ 77, ಮದ್ದೂರು 63, ಮಳವಳ್ಳಿ 66, ಮಂಡ್ಯ ಉತ್ತರ ವಲಯ 21, ಮಂಡ್ಯ ದಕ್ಷಿಣ ವಲಯ 19, ನಾಗಮಂಗಲ 29, ಪಾಂಡವಪುರ 37 ಹಾಗೂ ಶ್ರೀರಂಗಪಟ್ಟಣದಲ್ಲಿ 14 ಶಿಕ್ಷಕರ ಕೊರತೆ ಇದೆ. ಅದರಲ್ಲೂ ಕನ್ನಡ ವಿಷಯಕ್ಕೆ 61, ಇಂಗ್ಲಿಷ್‌ಗೆ 53, ಹಿಂದಿಗೆ 56, ಉರ್ದು 3, ಪಿಸಿಎಂ ಕನ್ನಡ 27, ಸಿಬಿಝೆಡ್‌ ಕನ್ನಡ 62 ಹಾಗೂ ಆರ್ಟ್ಸ್ ಕನ್ನಡಕ್ಕೆ 64 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.

827 ಪ್ರಾಥಮಿಕ ಅತಿಥಿ ಶಿಕ್ಷಕರ ನೇಮಕ: ಪ್ರಾಥಮಿಕ ವಿಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 827 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಕೆ.ಆರ್‌.ಪೇಟೆ 149, ಮದ್ದೂರು 124, ಮಳವಳ್ಳಿ 156, ಮಂಡ್ಯ ದಕ್ಷಿಣ ವಲಯ 36, ಮಂಡ್ಯ ಉತ್ತರ ವಲಯ 78, ನಾಗಮಂಗಲ 138, ಪಾಂಡವಪುರ 83 ಹಾಗೂ ಶ್ರೀರಂಗಪಟ್ಟಣ 63 ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಇವರ ಗೌರವ ಧನಕ್ಕಾಗಿ 8.27 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

219 ಪ್ರೌಢಶಾಲಾ ಅತಿಥಿ ಶಿಕ್ಷಕರ ನೇಮಕ: ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 326 ಅತಿಥಿ ಶಿಕ್ಷಕರ ಅಗತ್ಯವಿದೆ. ಆದರೆ, ಅದರಲ್ಲಿ ಈಗಾಗಲೇ 219 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕೆ.ಆರ್‌.ಪೇಟೆ 77 ಪೈಕಿ 51, ಮದ್ದೂರು 63 ಪೈಕಿ 42, ಮಳವಳ್ಳಿ 66 ಪೈಕಿ 44, ಮಂಡ್ಯ ಉತ್ತರ 21 ಪೈಕಿ 14, ಮಂಡ್ಯ ದಕ್ಷಿಣ 19 ಪೈಕಿ 14, ನಾಗಮಂಗಲ 29 ಪೈಕಿ 19, ಪಾಂಡವಪುರ 37 ಪೈಕಿ 25 ಹಾಗೂ ಶ್ರೀರಂಗಪಟ್ಟಣದ 14 ಅತಿಥಿ ಶಿಕ್ಷಕರ ಪೈಕಿ 10 ಮಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.

456 ಶಿಕ್ಷಕರ ನೇಮಕಾತಿಗೆ ಮಂಜೂರು: ಪ್ರಸ್ತುತ ಸಾಲಿನಲ್ಲಿ ಜಿಲ್ಲೆಗೆ 456 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮಂಜೂರು ಮಾಡಿದೆ. ಈಗಾಗಲೇ ಇದರಲ್ಲಿ 444 ಮಂದಿ ದಾಖಲಾತಿ ಪರಿಶೀಲನೆ ನಡೆ ಸಿದ್ದು, ಪೊಲೀಸ್‌ ಪರಿಶೀಲನೆಗೆ ಕಳುಹಿಸಲಾಗಿದೆ. ಇದರಲ್ಲಿ 382 ಗಣಿತ ಹಾಗೂ ವಿಜ್ಞಾನ, 26 ಸಮಾಜ, 35 ಇಂಗ್ಲಿಷ್‌ ಹಾಗೂ ಸಿಬಿಝೆಡ್‌ ಇಬ್ಬರನ್ನು ನೇಮಕಾತಿ ಮಾಡಿಕೊಳ್ಳಲು ದಾಖಲಾತಿ ಪರಿಶೀಲನೆ ನಡೆಸಲಾಗಿದೆ.

ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಾಲಿನಲ್ಲಿ 456 ಶಿಕ್ಷಕರ ನೇಮಕಾತಿಗೆ ಮಂಜೂರು ಮಾಡಲಾಗಿದ್ದು, ಅಗತ್ಯ ದಾಖಲಾತಿ ಗಳ ಪರಿಶೀಲನೆ ನಡೆಯುತ್ತಿದೆ. ಅಲ್ಲದೆ, ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಶಾಲೆಗಳಿಗೆ ನಿಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಕ್ರಮ ವಹಿಸಲಾಗಿದೆ. ● ಎಸ್‌.ಟಿ.ಜವರೇಗೌಡ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಡ್ಯ

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next