Advertisement

ವಿದ್ಯಾರ್ಥಿಗಳ ಕೊರತೆ:  ದ.ಕ. ಜಿಲ್ಲೆಯ 2 ಪಿಯು ಕಾಲೇಜು ಹೊರ ಜಿಲ್ಲೆಗೆ

12:49 AM Jun 24, 2022 | Team Udayavani |

ಸುಳ್ಯ: ಸತತವಾಗಿ ಶೂನ್ಯ ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನು ಬೇಡಿಕೆ ಇರುವ ಸರಕಾರಿ ಪ್ರೌಢ ಶಾಲೆಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸಿ ಸರಕಾರಿ ಪ.ಪೂ. ಕಾಲೇಜುಗಳಾಗಿ ಮೇಲ್ದರ್ಜೇಗೇರಿಸಿ ಸರಕಾರ ಆದೇಶ ಮಾಡಿದೆ. ಅದರಂತೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಪದವಿ ಪೂರ್ವ ಕಾಲೇಜು ಸಹಿತ ಜಿಲ್ಲೆಯ ಎರಡು ಸೇರಿದಂತೆ ರಾಜ್ಯದಲ್ಲಿ ಒಟ್ಟು ಏಳು ಸರಕಾರಿ ಪಿಯು ಕಾಲೇಜುಗಳು ಸ್ಥಳಾಂತರಗೊಳ್ಳಲಿವೆ.

Advertisement

ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಸ.ಪ.ಪೂ. ಕಾಲೇಜು ಕೊಲಾರ ಜಿಲ್ಲೆಯ ಬಂಗಾರು ತಿರುಪತಿಗೆ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಸ.ಪ.ಪೂ. ಕಾಲೇಜು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಪಡಕೆರೆಗೆ ಸ್ಥಳಾಂತರಗೊಳ್ಳಲಿವೆ.

ಮೂಡುಬಿದಿರೆಗೆ ಪಿಯು ಕಾಲೇಜು :

ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗಿರಿಯಾಪುರ ಸ.ಪ.ಪೂ. ಕಾಲೇಜು ದ.ಕ. ಜಿಲ್ಲೆಯ ಮೂಡುಬಿದಿರೆಯ ಅಳಿಯೂರು ಸರಕಾರಿ ಪ್ರೌಢ ಶಾಲೆಗೆ ಸ್ಥಳಾಂತರಗೊಂಡು ಪ.ಪೂ. ಕಾಲೇಜಾಗಿ ಮೇಲ್ದರ್ಜೆಗೇರಲಿದೆ. ಉಳಿದಂತೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ತಾವರಕೇರಿ ಪ.ಪೂ. ಕಾಲೇಜು ಅದೇ ಜಿಲ್ಲೆಯ ದೇವರಹಳ್ಳಿ ತಾಲೂಕಿಗೆ, ಗದಗ ಜಿಲ್ಲೆ ರೋಣದ ಹುಲ್ಲೂರು ಪ.ಪೂ. ಕಾಲೇಜು ಧಾರವಾಡ ಜಿಲ್ಲೆಯ ಅಳ್ನಾವರ್‌ಗೆ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಅನಿವಾಳ ಪ.ಪೂ. ಕಾಲೇಜು ಬೆಂಗಳೂರು ದಕ್ಷಿಣ ಗೋವಿಂದರಾಜ ನಗರಕ್ಕೆ, ರಾಮನಗರ ಜಿಲ್ಲೆಯ ಮಾಗಡಿ ಮಂಚಿನಬೆಲೆ ಪ.ಪೂ. ಕಾಲೇಜು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗೋಕುಳ ಗ್ರಾಮಕ್ಕೆ ಹುದ್ದೆ ಸಮೇತ ಸ್ಥಳಾಂತಗೊಳ್ಳಲಿದೆ ಎಂದು ಸರಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಉಪನ್ಯಾಸಕರಿಗೆ ಸಮಸ್ಯೆ:

Advertisement

ಸ್ಥಳಾಂತರಗೊಳ್ಳುವ ಕಾಲೇಜು ಗಳಲ್ಲಿರುವ ಉಪನ್ಯಾಸಕರು ಮತ್ತು ಸಿಬಂದಿಯನ್ನು ಕೂಡ ಹುದ್ದೆ ಸಮೇತ ತಿಳಿಸಲಾಗುವ ಕಡೆಗೆ ಸ್ಥಳಾಂತರಿಸುವ ಆದೇಶದಿಂದ ಅಂತಹ ಸ್ಥಳಗಳಲ್ಲಿರುವ ಸಿಬಂದಿ, ಉಪನ್ಯಾಸಕರು ಸಮಸ್ಯೆಗೊಳಗಾಗಿದ್ದಾರೆ. ಹೆಚ್ಚಿನ ಕಾಲೇಜುಗಳು ದೂರದ ಹೊರ ಜಿಲ್ಲೆಗಳಿಗೆ ಸ್ಥಳಾಂತರಗೊಂಡಿರುವುದು ಅವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಶೂನ್ಯ ದಾಖಲಾತಿ, ದಾಖಲಾತಿ ಕೊರತೆ ರಾಜ್ಯದಲ್ಲಿ ಕೆಲವು ಸ.ಪ.ಪೂ. ಕಾಲೇಜುಗಳನ್ನು ಸ್ಥಳಾಂತರಿಸಿದ ಆದೇಶ ಬಂದಿದ್ದು, ದ.ಕ. ಜಿಲ್ಲೆಯ 2 ಕಾಲೇಜುಗಳು ಸ್ಥಳಾಂತಗೊಳ್ಳಲಿವೆ. ಅಂತಹ ಕಾಲೇಜುಗಳಿಗೆ ಈ ಮೊದಲೇ ಮಕ್ಕಳನ್ನು ದಾಖಲಿಸದಂತೆ ಸೂಚಿಸಲಾಗಿತ್ತು. ಒಂದು ವೇಳೆ ಯಾರಾದರೂ ದಾಖಲಾಗಿದ್ದಲ್ಲಿ ಅವರನ್ನು ಸಮೀಪದ ಕಾಲೇಜುಗಳಿಗೆ ಸೇರ್ಪಡೆಗೊಳಿಸಬೇಕಿದೆ.– ಜಯಣ್ಣ, ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ ದ.ಕ.

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next