Advertisement

ಮಳೆ ಕೊರತೆ, ಬಿತ್ತನೆಯಲ್ಲಿ ಭಾರೀ ಹಿನ್ನಡೆ

10:48 AM Jul 12, 2019 | Team Udayavani |

ನೆಲಮಂಗಲ: ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಎಲ್ಲೆಲ್ಲೂ ಜನ-ಜಾನುವಾರಗಳು ಮತ್ತೂಮ್ಮೆ ಭೀಕರ ಬರಗಾಲಕ್ಕೆ ತುತ್ತಾಗುವ ಭೀತಿಯಲ್ಲಿ ದಿನಕಳೆಯುವಂತಾಗಿದೆ. ರೈತರು ವರುಣನ ಕೃಪೆಗೆ ಕಾಯುತ್ತಿದ್ದು, ಆಗಸವನ್ನು ನೋಡುತ್ತ ಕುಳಿತುಕೊಳ್ಳುವಂತಾಗಿದೆ. ವಾಡಿಕೆಯಂತೆ ಜೂನ್‌ ತಿಂಗಳಲ್ಲಿ ಸಾಕಷ್ಟು ಮಳೆ

Advertisement

ಸುರಿದು ಎಲ್ಲೆಡೆಯಲ್ಲಿರುವ ಕೃಷಿ ಭೂಮಿಯಲ್ಲಿ ಹಸಿರು ಮೂಡಿಸುವ ಸಲುವಾಗಿ ಕೃಷಿ ಚಟುವಟಿಕೆಯ ಭರದಿಂದ ಸಾಗಬೇಕಿತ್ತು. ಆದರೆ ಜುಲೈ ಬಂದು 10 ದಿನ ಕಳೆದರೂ ತಾಲೂಕಿಗೆ ವರುಣನ ಆಗಮನವಿಲ್ಲ. ಹೀಗಾಗಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಗರಿಷ್ಠ ಪ್ರಮಾಣದಲ್ಲಿ ಬಿತ್ತನೆಯಿಲ್ಲ: ಬೆಂಗಳೂರಿಗೆ ಹೊಂದಿಕೊಂಡಿರುವ ತಾಲೂಕಿನಾದ್ಯಂತ ಸರಿ ಸುಮಾರು 14,648 ಹೆಕ್ಟೇರ್‌ ಖುಷ್ಕಿ ಜಮೀನು ಮತ್ತು 400 ಹೆಕ್ಟೇರ್‌ ನೀರಾವರಿ ಜಮೀನು ಸೇರಿ ಒಟ್ಟಾರೆ 15,048 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲು ಕೃಷಿ ಇಲಾಖೆ ಗುರಿ ಹೊಂದಿದೆ.

ಆದರೆ ಸಕಾಲಕ್ಕೆ ಮಳೆ ಬಾರದ ಕಾರಣಕ್ಕೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗೆ ತೀವ್ರವಾಗಿ ಇಳಿಮುಖ ಕಂಡಿದೆ. 32 ಹೆಕ್ಟೇರ್‌ ನೀರಾವರಿ ಮತ್ತು 80 ಹೆಕ್ಟೇರ್‌ ಖುಷ್ಕಿ ಜಮೀಮು ಸೇರಿದಂತೆ ಒಟ್ಟಾರೆ 112 ಹೆಕ್ಟೇರ್‌ ಭೂಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದೆ. ಉಳಿದ 14,936 ಹೆಕ್ಟೇರ್‌ ಕೃಷಿ ಭೂಮಿ ಮಳೆಯಾಗದ ಕಾರಣ ಬಿತ್ತನೆಯಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೀಜ, ಗೊಬ್ಬರ ದಾಸ್ತಾನು: ತಾಲೂಕಿನಲ್ಲಿರುವ 15,048 ಹೆಕ್ಟೇರ್‌ ಕೃಷಿ ಭೂಮಿ ಚಟುವಟಕೆಗಾಗಿ ರಾಗಿ ಎಂಆರ್‌1 ಬಿತ್ತನೆ ಬೀಜ 24 ಕ್ವಿಂಟಲ್‌, ಎಂಆರ್‌ 6 ಬಿತ್ತನೆ ಬೀಜ 6.40 ಕ್ವಿಂಟಲ್‌, ಜಿಪಿಯು 3ಜಿ ಬಿತ್ತನೆ ಬೀಜ 5 ಕ್ವಿಂಟಲ್‌, ತೊಗರಿ ಬಿಆರ್‌ಜಿ 01 ಕ್ವಿಂಟಲ್‌, ಬಿಆರ್‌ಐ 5 ಬಿತ್ತನೆ ಬೀಜ 1.20 ಕ್ವಿಂಟಲ್‌, ಭತ್ತ ಐಆರ್‌-64 ಬಿತ್ತನೆ ಬೀಜ 4.50 ಕ್ವಿಂಟಲ್‌, ಬಿಪಿಟಿಎಸ್‌ 5204 ಬಿತ್ತನೆ ಬೀಜ 50 ಕೆ.ಜಿ. ಶೇಂಗಾ ಜಿಪಿಬಿಡಿ-4 ಬಿತ್ತನೆ ಬೀಜ 15 ಕ್ವಿಂಟಲ್‌, ಮುಸುಕಿನ ಜೋಳ ಜಿಕೆ 3018 ಬಿತ್ತನೆ ಬೀಜ 17 ಕ್ವಿಂಟಲ್‌, ಜಿಕೆ 3059 ಬಿತ್ತನೆ ಬೀಜ 8.80 ಕ್ವಿಂಟಲ್‌, ಸೂಪರ್‌ 900ಎಂ 7.50 ಕ್ವಿಂಟಲ್‌, ಸೂಪರ್‌ 9149 ಬಿತ್ತನೆ ಬೀಜ 17.20 ಕ್ವಿಂಟಲ್‌ ದಾಸ್ತಾನು ಗೋದಾಮಿನಲ್ಲಿ ಶೇಖರಿಸಿಡಲಾಗಿದೆ. ಕೃಷಿಕರು ತಮಗೆ ಅಗತ್ಯವಾಗಿರುವ ಬಿತ್ತನೆ ಬೀಜ ಪಡೆದುಕೊಳ್ಳಬಹುದಾಗಿದೆ.

ಮತ್ತೂಮ್ಮೆ ಬರಗಾಲದ ಭೀತಿ: ಸಕಾಲಕ್ಕೆ ಮಳೆಯಾಗದ್ದರಿಂದ ಮುಂಬರುವ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಉತ್ಪಾದನೆಯಾಗುವುದಿಲ್ಲ. ಹೀಗಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಲಿದ್ದು, ಮುಂದಿನ ದಿನಗಳನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಹತೋಟಿಗೆ ತರುವಲ್ಲಿ ಸೂಕ್ತ ರೀತಿಯ ಕ್ರಮ ಕೈಗೊಂಡು ಜನ ಸಾಮಾನ್ಯರು ಸಹಜ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೂಲಿ ಕಾರ್ಮಿಕ ಮಂಜುನಾಥ್‌ ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣಕ್ಕೆ ಬಿತ್ತನೆ ಕಾರ್ಯ ತೀವ್ರವಾಗಿ ಇಳಿಮುಖಗೊಂಡಿದೆ.

Advertisement

ಜುಲೈ ಅಂತ್ಯದವರೆಗೂ ಮಳೆ ಕಾಯುತ್ತಿರುವ ರೈತರಿಗೆ ಮುಂಗಾರಿಗೆ ಪರ್ಯಾಯವಾಗಿ ಅಲ್ಪವಧಿ ರಾಗಿ ಬಿತ್ತನೆಗೆ ಸಲಹೆ ನೀಡಲಾಗುತ್ತಿದೆ. ಒಂದು ವೇಳೆ ಮಳೆ ಬಾರದಿದ್ದರೆ ಹುರುಳಿ ಬಿತ್ತನೆಗೆ ತಿಳಿಸಿಲಾಗಿದೆ. ರೈತ ಸಿರಿ ಯೋಜನೆಯಡಿ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೈತರು ತಮಗೆ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶೂನ್ಯ ಬಂಡವಾಳ ಯೋಜನೆಯಡಿ ತಾಲೂಕಿನ ಸೋಂಪುರ ಹೋಬಳಿಯಲ್ಲಿ 83 ಹೆಕ್ಟೇರ್‌ ಜಮೀನಿನಲ್ಲಿ ನೈಸರ್ಗಿಕ  ಕೃಷಿ ಚಟುವಟಿಕೆ ಮಾಡಲಾಗುತ್ತಿದೆ. ಕೃಷಿಕರು ತಾವು ಬೆಳೆಯಲಿಚ್ಚಿಸುವ ಬೆಳೆಗಳಿಗೆ ಆಗಸ್ಟ್‌ 14ರೊಳಗೆ ಬೆಳೆವಿಮೆ ಮಾಡಿಸಿಕೊಳ್ಳಿ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದ್ದಾರೆ.

ಜುಲೈ ತಿಂಗಳ ಅಂತ್ಯದೊಳಗೆ ಮಳೆಬಾರದಿದ್ದಲ್ಲಿ ಕೃಷಿಕರು ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡಬೇಕಾಗುತ್ತದೆ. ಜನ ಜಾನುವಾರುಗಳುಗೆ ಆಹಾರದ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೆಕಾಗಿದೆ. ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ ಹೆಚ್ಚಾಗಿರುವ ಕಾರಣಕ್ಕೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ಶೂಕ್ತ ರೀತಿಯಕ ಕ್ರಮವಹಿಸಲು ರತರಿಗೆ ಸಲಹೆಯನ್ನು ನೀಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಮೃತ್ಯುಂಜಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next