ದಾವಣಗೆರೆ: “ಪಿಎಂ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ತೊಗರಿಬೇಳೆಯ ಕೊರತೆ ಎದುರಾಗಿದೆ. ಹಲವು ಶಾಲೆಗಳಲ್ಲಿ ತೊಗರಿಬೇಳೆ ಇಲ್ಲದೆ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅನೇಕ ಶಾಲೆಗಳಲ್ಲಿ ನವೆಂಬರ್‌ನಲ್ಲಿಯೇ ತೊಗರಿ ಬೇಳೆ ದಾಸ್ತಾನು ಖಾಲಿಯಾಗಿದೆ. ಕೆಲವು ಶಾಲೆಗಳಲ್ಲಿ ಡಿಸೆಂಬರ್ ಮೊದಲ ವಾರಕ್ಕೆ ಆಗುವಷ್ಟು ದಾಸ್ತಾನು ಇದ್ದು, ತೀರಾ ಕಡಿಮೆ ಪ್ರಮಾಣದಲ್ಲಿ ಬೇಳೆ ಬಳಸಲಾಗುತ್ತಿದೆ.
ಟೆಂಡರ್ ವಿಳಂಬ
ಕೋವಿಡ್ ಬರುವ ಮೊದಲು ಪ್ರತೀ ತಿಂಗಳು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ತೊಗರಿಬೇಳೆ ಪೂರೈಸಲಾಗುತ್ತಿತ್ತು. ಕೋವಿಡ್ ಬಳಿಕ ಮೂರು ತಿಂಗಳಿಗೊಮ್ಮೆ ತೊಗರಿಬೇಳೆಯನ್ನು ಒಮ್ಮೆಲೆ ಸರಬರಾಜು ಮಾಡಲಾಗುತ್ತಿದೆ. ಕಳೆದ ಸೆಪ್ಟಂಬರ್ ಮೊದಲ ವಾರದಲ್ಲಿ ಶಾಲೆಗಳಿಗೆ ತೊಗರಿಬೇಳೆ ಸರಬರಾಜು ಆಗಿತ್ತು. ಬಳಿಕ ನವೆಂಬರ್ ವೇಳೆಗೆ ಪೂರೈಕೆ ಆಗಬೇಕಿತ್ತು. ಆದರೆ ರಾಜ್ಯ ಮಟ್ಟದಲ್ಲಿ ಟೆಂಡರ್ ವಿಳಂಬವಾದದ್ದರಿಂದ ಡಿಸೆಂಬರ್ ಬಂದರೂ ಸರಬರಾಜು ಆಗಿಲ್ಲ. ಈಗ 3 ತಿಂಗಳಿಗೊಮ್ಮೆ ಬೇಳೆ ಪೂರೈಸುತ್ತಿರುವುದರಿಂದ ಗುಣಮಟ್ಟವೂ ಕೆಡುತ್ತಿದೆ. ಇದರಿಂದ ಕಳಪೆ ಬೇಳೆ ನೀಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ಶಾಲಾ ಹಂತದಲ್ಲೇ ಖರೀದಿಗೆ ಸೂಚನೆ
ರಾಜ್ಯಾದ್ಯಂತ ಶಾಲೆಗಳಲ್ಲಿ ತೊಗರಿಬೇಳೆ ಕೊರತೆ ಉಂಟಾಗಿರುವುದನ್ನು ಮನಗಂಡ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ನಿರ್ದೇಶಕರು, ತೊಗರಿಬೇಳೆ ಕೊರತೆಯಾದಲ್ಲಿ ಶಾಲಾ ಹಂತದಲ್ಲಿ ಉಳಿಕೆ ಇರುವ ಅಕ್ಷರ ದಾಸೋಹ ಅನುದಾನ ಬಳಸಿ, ಬೇಳೆ ಪೂರೈಕೆ ಆಗುವವರೆಗೆ ಸ್ಥಳೀಯವಾಗಿ ಗುಣಮಟ್ಟದ ತೊಗರಿಬೇಳೆ ಖರೀದಿಸಲು ಸೂಚನೆ ನೀಡಿದ್ದಾರೆ.
Related Articles
ನವೆಂಬರ್-ಡಿಸೆಂಬರ್ ತಿಂಗಳ ತೊಗರಿ ಬೇಳೆ ಪೂರೈಕೆ ವಿಳಂಬವಾಗಿದೆ. ಆದರೆ ಅದರಿಂದ ತುಂಬಾ ಸಮಸ್ಯೆಯಾಗಿಲ್ಲ. ಇದುವರೆಗೆ ದಾಸ್ತಾನಿದ್ದ ತೊಗರಿಬೇಳೆ ಬಳಸಿಕೊಂಡಿದ್ದೇವೆ. ಸ್ಥಳೀಯವಾಗಿ ಶಾಲಾ ಮಟ್ಟದಲ್ಲಿಯೇ ತೊಗರಿಬೇಳೆ ಖರೀದಿಸಲು ಕೂಡ ಆದೇಶ ನೀಡಿದ್ದೇವೆ.
– ಉಷಾ, ಶಿಕ್ಷಣಾಧಿಕಾರಿ,
ಅಕ್ಷರ ದಾಸೋಹ, ದ.ಕ. ಜಿಲ್ಲೆ
ಉಡುಪಿ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಂಬಂಧಿಸಿ ತೋಗರಿಬೇಳೆ ಅಥವಾ ಯಾವುದೇ ಆಹಾರ ಪದಾರ್ಥಗಳ ಕೊರತೆ ಇಲ್ಲ. ಎಲ್ಲ ಶಾಲೆಗಳಲ್ಲೂ ಸರಕಾರದ ನಿಯಮದಂತೆ ಬಿಸಿಯೂಟ ಯಥಾಪ್ರಕಾರ ನಡೆಯುತ್ತಿದೆ.
-ಪ್ರಸನ್ನ ಎಚ್.,
ಸಿಇಒ ಜಿ.ಪಂ. ಉಡುಪಿ
ರಾಜ್ಯ ಮಟ್ಟದಲ್ಲಿ ನಡೆಯಬೇಕಿದ್ದ ಟೆಂಡರ್ ವಿಳಂಬವಾಗಿದ್ದರಿಂದ ಶಾಲೆಗಳಲ್ಲಿ ತೊಗರಿಬೇಳೆ ಕೊರತೆಯುಂಟಾಗಿದೆ. ಯೋಜನೆಯ ನಿರ್ದೇಶಕರು ಶಾಲಾ ಅನುದಾನದಲ್ಲಿ ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಿರುವುದರಿಂದ ಬೇಳೆ ಬರುವವರೆಗೆ ಮಕ್ಕಳ ಊಟಕ್ಕೆ ಸಮಸ್ಯೆಯಾಗದಂತೆ ಸ್ಥಳೀಯವಾಗಿ ಬೇಳೆ ಖರೀದಿಸಿ ಮಕ್ಕಳ ಊಟಕ್ಕೆ ಬಳಸಲಾಗುವುದು.
-ಡಾ| ಎ. ಚನ್ನಪ್ಪ, ದಾವಣಗೆರೆ ಜಿ.ಪಂ. ಸಿಇಒ
- ಎಚ್.ಕೆ. ನಟರಾಜ