ನಾಗರಹಾಳ: ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸುವರ್ಣ ಗ್ರಾಮೋದಯ, ಜಿಪಂ, ತಾಪಂ ಹಾಗೂ ಗ್ರಾಪಂ ಅನುದಾನದಲ್ಲಿ ನಿರ್ಮಿಸಲಾದ ಸೋಲಾರ್ ದೀಪಗಳು ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿವೆ.
ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತವಾದಾಗ ಕಳ್ಳಕಾಕರ ಹಾವಳಿ ತಪ್ಪಿಸಲು ಹಾಗೂ ವಯೋವೃದ್ಧರಿಗೆ ಅನುಕೂಲವಾಗಲೆಂದು ಸರಕಾರ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ನಾಗರಹಾಳ ಸುತ್ತಲಿನ ಗ್ರಾಮೀಣ ಪ್ರದೇಶಗಳಾದ ನರಕಲದಿನ್ನಿ, ತುಂಬಲಗಡ್ಡಿ, ಅಂಕನಾಳ, ನಂದಿಹಾಳ, ಕನಸಾವಿ, ಆದಾಪೂರ, ಯರದಿಹಾಳ, ಬೊಮ್ಮನಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸೋಲಾರ್ ದೀಪ ಅಳವಡಿಸಲಾಗಿದೆ. ಆದರೆ, ಸಂಬಂಧಿಸಿದ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಲಾರ್ ದೀಪಗಳು ಉಪಯೋಗಕ್ಕೆ ಬಾರದಾಗಿವೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.