Advertisement

ಮೂರ್ತಿ ತಯಾರಿಕೆಗೆ ಜೇಡಿ ಮಣ್ಣು, ನೈಸರ್ಗಿಕ ಬಣ್ಣ ಕೊರತೆ

10:41 AM Aug 29, 2022 | Suhan S |

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಗಣಪತಿ ಮೂರ್ತಿ ಗಳನ್ನು ಸಂಪೂರ್ಣವಾಗಿ ನಿಷೇಧಿಸಿ ರುವ ಪರಿಣಾಮ, ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳ ರಚನೆಗೆ ಅವಶ್ಯವಿರುವ ಜೇಡಿ ಮಣ್ಣು, ನೈಸರ್ಗಿಕ ಬಣ್ಣಗಳ ಕೊರತೆ ಎದುರಾಗಿದೆ. ಅಷ್ಟೇ ಅಲ್ಲದೆ ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಸೇರಿದಂತೆ ಕಚ್ಚಾ ವಸ್ತುಗಳ ದರವೂ ಹೆಚ್ಚಳವಾಗಿ, ಮೂರ್ತಿ ತಯಾರಕರ ಕೈ ಸುಡುವಂತಾಗಿದೆ.

Advertisement

ಕೊರೊನಾದಿಂದ 2 ವರ್ಷಗಳಿಂದ ವಹಿವಾಟು ಇಲ್ಲದೆ ಪರದಾಡಿದ್ದ ಗಣೇಶ ಮೂರ್ತಿಗಳ ತಯಾರಕರಲ್ಲಿ ಈ ಬಾರಿ ಮಂದಹಾಸ ಬೀರಿತ್ತು. ಸಾರ್ವಜನಿಕರು ಮಣ್ಣಿನ ಗಣಪತಿ ಮೂರ್ತಿಗಳಿಗೆ ಮೊರೆ ಹೋಗಿ ದ್ದಾರೆ. ಆದರೆ, ಕಚ್ಚಾ ಪದಾರ್ಥಗಳ ಸರಬರಾಜು ದಾರರು ಬೆಲೆ ಏರಿಸಿರುವುದು ತಲೆಬಿಸಿ ತಂದಿದೆ. ಬೆಂಗಳೂರಿನಲ್ಲಿ ಮಾರಾಟವಾಗುವ ಗಣಪತಿ ಮೂರ್ತಿಗಳ ರಚನೆಗೆ ಮಂಡ್ಯ, ರಾಮನಗರ, ಚನ್ನ ಪಟ್ಟಣದ ಕಡೆಯಿಂದ ಜೇಡಿಮಣ್ಣನ್ನು ತರಲಾಗುತ್ತದೆ. ಕೆರೆಗಳಿಂದ ಜೇಡಿಮಣ್ಣು ತರುತ್ತಿದ್ದೆವು. ಇದೀಗ ಕೆರೆಗಳು ಭರ್ತಿ ಹಿನ್ನೆಲೆ ಜೇಡಿಮಣ್ಣು ದೊರೆಯುತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಮೂರ್ತಿಗಳ ತಯಾರಕ ಸುನೀಲ್‌, ತಾವು ಕಳೆದ 16 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಆದರೆ, ಈ ವರ್ಷ ಮಣ್ಣಿನ ಗಣಪತಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕೇಳುತ್ತಿದ್ದಾರೆ. ಇದು ಪರಿಸರದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಕೂಡ ಹೆಚ್ಚಾಗಿದೆ. ಹಿಂದಿನ ವರ್ಷ ಒಂದು ಲೋಡ್‌ ಮಣ್ಣಿಗೆ 50 ಸಾವಿರ ರೂ. ಇತ್ತು. ಇದೀಗ 75-80 ಸಾವಿರ ರೂ. ಕೇಳುತ್ತಿದ್ದಾರೆ. ನೈಸರ್ಗಿಕ ಬಣ್ಣಗಳ ಬೆಲೆ ಕೂಡ ಹೆಚ್ಚಳವಾಗಿದೆ. ಇದರಿಂದ ಮೂರ್ತಿಗಳ ರಚನೆ ಮೇಲಿನ ದರ ಕೂಡ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ಹೇಳುತ್ತಾರೆ.

ಶೇ.30ರಷ್ಟು ವಹಿವಾಟು ಚೇತರಿಕೆ: ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸುವಂತಿಲ್ಲವೆಂದು ಹಿಂದಿನ ಎರಡು ವರ್ಷ, ಗಣೇಶೋತ್ಸವ ಸಂಪೂರ್ಣವಾಗಿ ನಿರಾಸದಾಯಕವಾಗಿತ್ತು. ಇದು ನಮ್ಮ ಬದುಕಿನ ಮೇಲೆಯೂ ಪರಿಣಾಮ ಬೀರಿತ್ತು. ಈ ವರ್ಷ ಹಬ್ಬ ಆಚರಣೆಗೆ ಇಂದಿಷ್ಟು ಕಳೆ ಬಂದಿದ್ದು, ಜನರು ಕೂಡ ಆಚರಣೆಗೆ ಮುಂದಾಗು ತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇ.30ರಷ್ಟು ವಹಿವಾಟಿನಲ್ಲಿ ಹೆಚ್ಚಳವಾಗಿದೆ. ಕೊರೊನಾ ದಿಂದ ಜನರು ಇನ್ನೂ ಚೇತರಿಸಿಕೊಳ್ಳ ಬೇಕಿದ್ದು, ಕೊರೊನಾ ಪೂರ್ವ ವರ್ಷಗಳಿಗೆ ಹೋಲಿಸಿಕೊಂಡರೆ, ಹಿಂದಿನ ಸಂಭ್ರಮದ ದಾರಿಗೆ ಇನ್ನೂ ಮರಳಿಲ್ಲವೆನ್ನಬಹುದು ಎನ್ನುತ್ತಾರೆ ಮತ್ತೂಬ್ಬ ಗಣೇಶ ಮೂರ್ತಿ ತಯಾರಕ ಶಿವಕುಮಾರ್‌.

ಮಣ್ಣಿನ ಮೂರ್ತಿಗಳ ನಿರ್ವಹಣೆ ಕಷ್ಟ: ಹಿಂದಿನ ವರ್ಷಗಳಲ್ಲಿ 10 ರಿಂದ 15 ಸಾವಿರದಷ್ಟು ಮೂರ್ತಿಗಳನ್ನು ರಚನೆ ಮಾಡುತ್ತಿದ್ದೇವು. ಈಗ 5 ಸಾವಿರವಷ್ಟೇ ರಚನೆ ಮಾಡುತ್ತಿದ್ದೇವೆ. ಪಿಒಪಿ ಮೂರ್ತಿಗಳಿಗೆ ಹೋಲಿಸಿಕೊಂಡರೆ ಮಣ್ಣಿನ ಮೂರ್ತಿಗಳ ನಿರ್ವಹಣೆ ಬಹಳ ಕಷ್ಟ. ಮಣ್ಣಿನ ಮೂರ್ತಿಗಳು ಸೀಳು ಬಿಡುವುದು, ಸ್ವಲ್ಪ ತಗುಲಿಸಿದರೆ ಮುರಿದು ಹೋಗುತ್ತವೆ. ಪಿಒಪಿ ಮೂರ್ತಿಗಳನ್ನು ಮತ್ತೂಂದು ವರ್ಷಕ್ಕೆ ಹಾಗೆಯೇ ಸಂಗ್ರಹಿಸಿ ಇಡಬಹುದಿತ್ತು. ಮಣ್ಣಿನ ಮೂರ್ತಿಗಳನ್ನು ವರ್ಷಾನುಗಟ್ಟಲೆ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜನರು ಮುಂಗಡವಾಗಿ ಆರ್ಡರ್‌ ಮಾಡಿದ ನಂತರ ಮೂರ್ತಿಗಳ ರಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಭಾಗ್ಯ.

Advertisement

2.5ರಿಂದ 3 ಅಡಿ ಗಣೇಶ ಮೂರ್ತಿಗಳಿಗೆ ಬೇಡಿಕೆ: ಮೊದಲು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು 5 ಅಡಿ, 10 ಅಡಿ ಗಣೇಶ ಮೂರ್ತಿ ಗಳನ್ನು ಕೇಳುತ್ತಿದ್ದ ಜನರು, ಈಗ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಜಾಸ್ತಿ ಎಂದರೆ 5 ಅಡಿ ಉದ್ದವನ್ನು ಕೇಳುತ್ತಾರೆ. 2.5ರಿಂದ 3 ಅಡಿ ಗಣೇಶ ಮೂರ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಇದರಿಂದ ಜನರಲ್ಲಿಯೂ ಪರಿಸರ ಜಾಗೃತಿ ಮೂಡಿದೆ. ಈ ಬಾರಿ ಸಾರ್ವಜನಿಕ ಪ್ರತಿಷ್ಠಾಪನೆಗಿಂತ ವೈಯಕ್ತಿಕವಾಗಿ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವವರೇ ಭಾಗಶಃ ಮುಂಗಡವಾಗಿ ಬುಕ್‌ ಮಾಡಿದ್ದಾರೆ ಎಂದು ಮೂರ್ತಿ ತಯಾ ರಕ ಮಹೇಶ್‌ ತಿಳಿಸಿದ್ದಾರೆ.

-ಎನ್‌.ಎಲ್‌.ಶಿವಮಾದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next