Advertisement

ಶಿಥಿಲಾವಸ್ಥೆಯಲ್ಲಿ ರಾಮಸಮುದ್ರ ರುದ್ರಭೂಮಿ

09:59 PM Mar 15, 2020 | Sriram |

ಕಾರ್ಕಳ: ಹಲವು ದಶಕಗಳ ಹಿಂದೆ ನಿರ್ಮಾಣವಾದ ರಾಮಸಮುದ್ರ ರುದ್ರಭೂಮಿ ಶಿಥಿಲಾವಸ್ಥೆಯಲ್ಲಿದ್ದು, ಶವ ಸುಡಲಾಗದ ದುಸ್ಥಿತಿ ಇದೆ. ದಾನಶಾಲೆ, ತೆಳ್ಳಾರು, ಮಾರ್ಕೆಟ್‌ ಪ್ರದೇಶ, ಜೋಗಲ್‌ಬೆಟ್ಟು, ವರ್ಣಬೆಟ್ಟು, ಪತ್ತೂಂಜಿಕಟ್ಟೆ, ಕುಂಬ್ರಿಪದವು, ಕಾವೆರಡ್ಕ ಎಂಬ ಪುರಸಭೆಯ 5 ವಾರ್ಡ್‌ ವ್ಯಾಪ್ತಿಯವರು ಅಂತ್ಯಸಂಸ್ಕಾರ ನೆರವೇರಿಸಲು ಇದೇ ರುದ್ರಭೂಮಿ ಬಳಸುತ್ತಿದ್ದರು.

Advertisement

ಮೂಲಸೌಕರ್ಯ ಕೊರತೆ
ರುದ್ರಭೂಮಿಯಲ್ಲಿ ಅಗತ್ಯವಾಗಿ ಬೇಕಾಗಿದ್ದ ಮೂಲ ಸೌಕರ್ಯವಿಲ್ಲದ ಕಾರಣ 2 ವರ್ಷಗಳಿಂದ ಶವಸಂಸ್ಕಾರ ಇಲ್ಲಿ ನಡೆಯುತ್ತಿಲ್ಲ. ಹೀಗಾಗಿ ಯಾರಾದರೂ ನಿಧನರಾದರೆ ಶವಸಂಸ್ಕಾರಕ್ಕಾಗಿ ದೂರದಲ್ಲಿನ ಕರಿಯಕಲ್ಲು, ಕುಂಟಲ್ಪಾಡಿ ರುದ್ರಭೂಮಿ ಅವಲಂಬಿಸಬೇಕಿದೆ.

ಮಳೆಗಾಲದಲ್ಲಿ ಕಷ್ಟ
ಈ ರುದ್ರಭೂಮಿಯಲ್ಲಿ ಮಳೆಗಾಲದಲ್ಲಿ ಶವ ಸಂಸ್ಕಾರ ನಡೆಸುವುದು ತೀರ ಕಷ್ಟದ ಕಾರ್ಯ. ಮೇಲ್ಛಾವಣಿಗೆ ಅಳವಡಿಸಿದ ಶೀಟು ಒಡೆದ ಪರಿಣಾಮ ಮಳೆಗಾಲದಲ್ಲಿ ಮಳೆ ನೀರು ದಹನ ಮಾಡುವ ಪ್ರದೇಶಕ್ಕೆ ಬೀಳುವಂತಿದೆ. ಕಟ್ಟಿಗೆ ದಾಸ್ತಾನಿಡಲು ಇಲ್ಲಿರುವ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿದೆ.

ಅಭಿವೃದ್ಧಿಯಾಗಲಿ
ಸುಮಾರು 20 ಸೆಂಟ್ಸ್‌ ಸರಕಾರಿ ಜಾಗದಲ್ಲಿರುವ ಈ ರುದ್ರಭೂಮಿಯ ಅಭಿವೃದ್ಧಿ ಕಾರ್ಯವಾಗಬೇಕೆಂಬ ಮಾತು ಕೇಳಿಬರುತ್ತಿದೆ. ರುದ್ರಭೂಮಿಯ ಪ್ರದೇಶವನ್ನು ಸಮತಟ್ಟುಗೊಳಿಸಿ, ಆವರಣ ರಚನೆಯಾಗಬೇಕು. ಶವಗಳ ದಹನಕ್ಕೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡುವುದು, ದಹನಕ್ಕೆ ಸೂಕ್ತವಾದ ಕಟ್ಟಿಗೆ ದಾಸ್ತಾನು ಮಾಡಲು ಶೆಡ್‌ ಹಾಗೂ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲು ಅಗತ್ಯ ಕಟ್ಟಡ ನಿರ್ಮಾಣ ಮಾಡುವಲ್ಲಿ ಪುರಸಭೆ ಮುತುವರ್ಜಿ ವಹಿಸಬೇಕಾಗಿದೆ.

3 ಲಕ್ಷ ಅನುದಾನ
ಇಲ್ಲಿನ ಶ್ಮಶಾನದ ಅಭಿವೃದ್ಧಿಗಾಗಿ ವರ್ಷದ ಹಿಂದೆ ಪುರಸಭೆ 3 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಅನುದಾನ ಮೀಸಲಿರಿಸಿ ವರ್ಷ ಒಂದು ಕಳೆದರೂ ಮುಕ್ತಿಧಾಮದ ಅಭಿವೃದ್ಧಿಯಾಗಿಲ್ಲ. ವಿದ್ಯುತ್‌ ಸಂಪರ್ಕವಿದ್ದರೂ ಲೈಟ್‌ ಉರಿಯುತ್ತಿಲ್ಲ.

Advertisement

ಸಮಿತಿ ರಚನೆಯಾಗಲಿ
ರುದ್ರಭೂಮಿ ಅಭಿವೃದ್ಧಿ ನಿಟ್ಟಿನಲ್ಲಿ, ಈ ಪರಿಸರವನ್ನು ಅತ್ಯಂತ ಸ್ವತ್ಛವಾಗಿಟ್ಟುಕೊಳ್ಳುವಲ್ಲಿ ಸಿಬಂದಿ ನೇಮಕವಾಗಬೇಕಿದೆ. ಪುರಸಭೆ ಮೇಲುಸ್ತುವಾರಿಯಲ್ಲೇ ಸ್ಥಳೀಯ ನಿವಾಸಿಗಳನ್ನು ಸೇರಿಸಿಕೊಂಡು ರುದ್ರಭೂಮಿ ಅಭಿವೃದ್ಧಿ ಸಮಿತಿ ರಚನೆ ಮಾಡಿದಲ್ಲಿ ರುದ್ರಭೂಮಿ ನಿರ್ವಹಣೆ ಜವಾಬ್ದಾರಿ ಆ ಸಮಿತಿಗೆ ನೀಡಬಹುದಾಗಿದೆ.

ಮೂಲಸೌಕರ್ಯವಿಲ್ಲದ ಕಾರಣ ಈ ರುದ್ರಭೂಮಿಯಲ್ಲಿ ಸವಸಂಸ್ಕಾರ ನಿಂತು ಹೋಗಿದೆ. ದೂರದ ರುದ್ರಭೂಮಿಯನ್ನು ಅವಲಂಬಿಸಬೇಕಾಗಿದೆ.

ಪಕ್ಕದಲ್ಲಿದೆ ರಾಮಸಮುದ್ರ
ರುದ್ರಭೂಮಿ ಪಕ್ಕದಲ್ಲೇ ರಾಮಸಮುದ್ರವಿದೆ. ದೇಹ ದಹನ ಮಾಡಿದ ಬೂದಿ ರಾಮಸಮುದ್ರ ಸೇರುತ್ತಿದೆ ಎಂಬ ಗಂಭೀರ ಆಪಾದನೆಯಿದೆ. ಹೀಗಾಗಿ ರಾಮಸಮುದ್ರದಿಂದ ದೂರದಲ್ಲಿ ರುದ್ರಭೂಮಿ ನಿರ್ಮಿಸಿ, ಸಮರ್ಪಕ ನಿರ್ವಹಣೆ ಮಾಡುವಲ್ಲಿ ಪುರಸಭೆ ಅಗತ್ಯ ಕ್ರಮಕೈಗೊಳ್ಳುವುದು ಅಗತ್ಯ. ಕಡು ಬೇಸಗೆ ಸಂದರ್ಭ ಮುಂಡ್ಲಿ ಜಲಾಶಯದ ನೀರು ಬತ್ತಿದಲ್ಲಿ ಪುರಸಭಾ ವ್ಯಾಪ್ತಿಗೆ ಇದೇ ರಾಮಸಮುದ್ರದ ನೀರು ಉಪಯೋಗಿಸಲಾಗುವುದರಿಂದ ರಾಮಸಮುದ್ರ ಮಲಿನವಾಗದಂತೆ ಎಚ್ಚರಿಕೆ ವಹಿಸಬೇಕಿದೆ.

ಮೂಲಸೌಕರ್ಯ ಕಲ್ಪಿಸಲಾಗುವುದು
ಕಳೆದ ಅಕ್ಟೋಬರ್‌ ವೇಳೆ ರುದ್ರಭೂಮಿ ದುರಸ್ತಿಗಾಗಿ ಹಣ ಮೀಸಲಾಗಿಟ್ಟರೂ ಕಾಮಗಾರಿ ನಡೆಯುವಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಈ ರುದ್ರಭೂಮಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಲಾಗುವುದು.
-ವಿನ್ನಿಬೋಲ್ಡ್‌ ಮೆಂಡೊನ್ಸಾ, ಪುರಸಭೆ ಸದಸ್ಯರು

ಅಗತ್ಯ ಕ್ರಮ ಕೈಗೊಳ್ಳಲಿ
ಕಾರ್ಕಳದಲ್ಲಿ ಪ್ರಥಮವಾಗಿ ನಿರ್ಮಾಣವಾಗಿರುವ ರುದ್ರಭೂಮಿಯಿದು. ರುದ್ರಭೂಮಿ ಅಭಿವೃದ್ಧಿ ನಿಟ್ಟಿನಲ್ಲಿ ಪುರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶವ ದಹನ ಮಾಡಲು ಆಗಮಿಸುವ ಕುಟುಂಬಸ್ಥರಿಂದ ಇಂತಿಷ್ಟು ಹಣ ಪಡೆದು ರುದ್ರಭೂಮಿ ನಿರ್ವಹಣೆ ಮಾಡಬಹುದಾಗಿದೆ.
-ರಾಘವ ದೇವಾಡಿಗ,
ಸಾಮಾಜಿಕ ಕಾರ್ಯಕರ್ತರು

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next