Advertisement

ಬಿಸಿಲಿಗೆ ಬಸವಳಿಯುತ್ತಿರುವ ಆರಕ್ಷಕರು!

04:32 AM Mar 16, 2019 | Team Udayavani |

ಕಲ್ಲುಗುಂಡಿ: ಸಿಮೆಂಟ್‌ ಶೀಟ್‌ನ ಕಟ್ಟಡ, ಇಕ್ಕಟ್ಟಾದ ಕೊಠಡಿ, ಅದರೊಳಗೆ ರಸ್ತೆಯ ಧೂಳು. ಇದು ಸುಳ್ಯ-ಮಡಿಕೇರಿ ಗಡಿಭಾಗದ ಕಲ್ಲುಗುಂಡಿಯಲ್ಲಿರುವ ಪೊಲೀಸ್‌ ಹೊರಠಾಣೆಯ ದಿನನಿತ್ಯದ ಸನ್ನಿವೇಶ.

Advertisement

ಪೊಲೀಸ್‌ ಸಿಬಂದಿ ಕೆಲಸ ಮುಗಿಸಿ ದಣಿವಾರಿಸಿಕೊಳ್ಳಲು ಈ ಹೊರಠಾಣೆಯಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ಸುಡುಬಿಸಿಲಿಗೆ ಕಟ್ಟಡಕ್ಕೆ ಅಳವಡಿಸಿರುವ ಸಿಮೆಂಟ್‌ ಶೀಟ್‌ ಬಿಸಿಯಾಗಿ ಸೆಕೆ ತಡೆಯಲಾಗದೆ ಸಿಬಂದಿಗೆ ಒಳಗೆ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಊರಿಗೆ ರಕ್ಷಣೆ ನೀಡುವ ಆರಕ್ಷಕರೇ ಇಲ್ಲಿ ಸೂಕ್ತ ರಕ್ಷಣೆಯಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ.

ಕಲ್ಲುಗುಂಡಿ ಹೊರಠಾಣೆ 2009ರಿಂದಲೇ ಕಾರ್ಯಾಚರಿಸುತ್ತಿದೆ. ಆರಂಭದಲ್ಲಿ ಶೀಟ್‌ನಿಂದ ನಿರ್ಮಿಸಲಾದ ಕೊಠಡಿಗೆ ಸಂಪಾಜೆ ಗ್ರಾ.ಪಂ. ವತಿಯಿಂದ ಕಟ್ಟಡವೊಂದನ್ನು ಕಟ್ಟಿ ಕೊಡಲಾಗಿದೆ. ಆದರೆ ಈ ಕಟ್ಟಡವು ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ದಾಖಲೆ ಸುರಕ್ಷತೆಗೆ, ಸಿಬಂದಿ ವಿಶ್ರಾಂತಿಗೆ, ಆಹಾರ ತಯಾರಿಕೆಗೆ ಸರಿಯಾದ ಸ್ಥಳಾವಕಾಶವಿಲ್ಲ. 

ಹೊಸ ಕಟ್ಟಡ ಮರೀಚಿಕೆ!
ಸುಳ್ಯ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಒಳಪಟ್ಟ ಕಲ್ಲುಗುಂಡಿ ಹೊರಠಾಣೆಗೆ ಹೊಸ ಕಟ್ಟಡಕ್ಕೆ ಬೇಡಿಕೆ ಇದ್ದರೂ, ಕನಸಾಗಿಯೇ ಉಳಿದಿದೆ. ಹೊರಠಾಣೆ ನಿರ್ಮಾಣಕ್ಕೆ ಸೂಕ್ತ ಜಾಗ ದೊರೆಯದಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಯಾಗಿಲ್ಲ. ಕಟ್ಟಡ ರಚನೆಗಾಗಿ ಚಟ್ಟೆಕಲ್‌ ರಸ್ತೆಯ ಬಿಎಸ್ಸೆನ್ನೆಲ್‌ ಟವರ್‌ ಬಳಿ ಸಂಪಾಜೆ ಗ್ರಾ.ಪಂ. 10 ಸೆಂಟ್ಸ್‌ ಜಾಗವನ್ನು ಕಾದಿರಿಸಿದ್ದು, ಇದು ಪೊಲೀಸ್‌ ಇಲಾಖೆಗೆ ಹಸ್ತಾಂತರವಾಗಿಲ್ಲ. ಹೊರಠಾಣೆಗೆ ಸೂಕ್ತ ಕಟ್ಟಡ ನಿರ್ಮಾಣಕ್ಕೆ ಮುಖ್ಯ ರಸ್ತೆಯ ಬದಿಯಲ್ಲಿ ನಿವೇಶನ ಮಂಜೂರು ಮಾಡಬೇಕೆನ್ನುವುದು ಇಲಾಖೆಯ ಆಗ್ರಹ.

ಕಾಯಕಲ್ಪ ಅಗತ್ಯ
ದೀರ್ಘ‌ ಸರಹದ್ದಿನ ಸುಳ್ಯ ಠಾಣಾ ವ್ಯಾಪ್ತಿಗೆ ಕಲ್ಲುಗುಂಡಿ ಹೊರಠಾಣೆ ಆವಶ್ಯಕ. ಸಂಪಾಜೆ, ಅರಂತೋಡು, ತೊಡಿಕಾನ ಗ್ರಾಮಗಳನ್ನು ಹೊಂದಿರುವ ಈ ಹೊರಠಾಣೆಯ ವ್ಯಾಪ್ತಿಯಲ್ಲಿ ಯಾವುದಾದರೂ ಘಟನೆ ಸಂಭವಿಸಿದರೆ ಸುಳ್ಯ ಠಾಣೆಯಿಂದ ಪೊಲೀಸರು ತೆರಳಲು ದೀರ್ಘ‌ ಸಮಯ ಬೇಕಾಗುತ್ತದೆ. ಸಮಾಜದ ಹಿತದೃಷ್ಟಿಯಿಂದ ಸ್ಥಾಪಿಸಲಾಗಿರುವ ಈ ಹೊರಠಾಣೆಗೆ ಸೂಕ್ತ ಕಾಯಕಲ್ಪ ಕಲ್ಪಿಸಬೇಕಾಗಿದೆ.

Advertisement

ಸುಳ್ಯ ಠಾಣೆ ಸಿಬಂದಿ
ಪೊಲೀಸ್‌ ಇಲಾಖೆಯಿಂದ ಅಗತ್ಯ ಸಿಬಂದಿ ನಿಯೋಜಿಸಲಾಗಿದ್ದರೂ ಅವರಿಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಈ ಹೊರಠಾಣೆಗೆ ಒಬ್ಬ ಎಎಸ್‌ಐ, ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌, 6 ಕಾನ್‌ಸ್ಟೆಬಲ್‌ ಹುದ್ದೆ ಮಂಜೂರಾಗಿದ್ದರೂ ಸದ್ಯ ಒಬ್ಬ ಹೆಡ್‌ಕಾನ್‌ಸ್ಟೆಬಲ್‌, ಇಬ್ಬರು ಕಾನ್‌ಸ್ಟೆಬಲ್‌, ಮೂವರು ಹೋಂಗಾರ್ಡ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಸುಳ್ಯ ಠಾಣೆಯಿಂದ ಸಿಬಂದಿ ನಿಯೋಜನೆ ಮಾಡಲಾಗುತ್ತಿದೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next