ಕುಷ್ಟಗಿ: ಪಟ್ಟಣದ 7ನೇ ವಾರ್ಡಿನಲ್ಲಿರುವ ರಾಯಬಾಗಿ ಲೇಔಟ್‌ನ ಉದ್ಯಾನವನದ ಮೂಲ ಸೌಕರ್ಯಗಳಿಗಾಗಿ ಅಂದಾಜು 20 ಲಕ್ಷ ರೂ. ಖರ್ಚಾದರೂ ಉದ್ಯಾನವನ ಹಸಿರಿಲ್ಲದೇ ಭಣಗುಡುತ್ತಿದೆ.
ಪಟ್ಟಣದ ಶಾಖಾಪೂರ ರಸ್ತೆಯಲ್ಲಿರುವ ರಾಯಬಾಗಿ ಲೇಔಟ್ ನಲ್ಲಿರುವ ಉದ್ಯಾನವನಕ್ಕೆ ಕಾಂಪೌಂಡ್ ಗೋಡೆ, ದ್ವಾರ ಬಾಗಿಲು, ವಾಕಿಂಗ್ ಪಾತ್ ಇತ್ಯಾದಿ ಗೆ ಎರಡು ಹಂತದಲ್ಲಿ ತಲಾ 6.25 ಲಕ್ಷ ರೂ. ದಂತೆ ಒಟ್ಟು 12.50 ಲಕ್ಷ ರೂ. ಖರ್ಚು ಮಾಡಲಾಗಿದೆ.
ಹಚ್ಚಿದ ಗಿಡಗಳ ಸಂರಕ್ಷಣೆಗಾಗಿ ಈ ಉದ್ಯಾನವನದಲ್ಲಿ 1.25 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಳವೆಬಾವಿ ಹಾಗೂ 1.50 ಲಕ್ಷ ರೂ. ವೆಚ್ಚದಲ್ಲಿ 1 ಕೊಳವೆಬಾವಿ ಹಾಗೂ ನೀರಿನ ತೊಟ್ಟಿಗೆ ಬಳಸಲಾಗಿದೆ. ಇತ್ತೀಚಿಗೆ 2018ರಲ್ಲಿ ಮತ್ತೂಂದು ಕೊಳವೆಬಾವಿ ಹಾಕಿಸಲಾಗಿದೆ. ಅಲ್ಲದೇ ಸಾರ್ವಜನಿಕ ನಳದ ಸಂಪರ್ಕ ಸಹ ಬಳಸಿಕೊಳ್ಳಲಾಗಿದೆ. ಇಷ್ಟಿದ್ದರೂ ಈಮ ಉದ್ಯಾನವನದಲ್ಲಿ ಹಸಿರೇ ಇಲ್ಲ. ನಾಟಿ ಮಾಡಿದ್ದ ಗಿಡಗಳ ಅವಶೇಷ ಇಲ್ಲದಂತಾಗಿದ್ದು, ಇಡೀ ಉದ್ಯಾನವನ ಹಸಿರಿಲ್ಲದೇ ಭಣಗುಡುತ್ತಿದೆ.
ಪುರಸಭೆ ಅನುದಾನದಲ್ಲಿ ಅಗತ್ಯ ಮೂಲ ಸೌಕರ್ಯಗಳಿಗೆ ಅನುದಾನ ಕೊರತೆ ಮಾಡದಿದ್ದರೂ ಅಧಿ ಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಸಾಕಷ್ಟಿದೆ. ಇದೀಗ ಹಸಿರು ಮಾಯವಾಗಿದ್ದು, ಪುನಃ ಗಿಡಗಳನ್ನು ನಾಟಿ ಮಾಡುವ ಗೋಜಿಗೆ ಹೋಗಿಲ್ಲ. ವಾಕಿಂಗ್ ಪಾತ್ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ. ಜ. 5ರಂದು ವಾರ್ಡ್ ಸದಸ್ಯೆ ಇಮಾಂಬಿ ಕಲಬುರಗಿ ಅವರು, ಪುರಸಭೆಗೆ ಮನವಿ ಸಲ್ಲಿಸಿದರೂ, ಯಾವೂದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಲಾಗಿದೆ.
ರಾಯಬಾಗಿ ಲೇಔಟ್‌ನಲ್ಲಿ ನಿವೇಶನ ವಿನ್ಯಾಸ ಸಂದರ್ಭದಲ್ಲಿ ಉದ್ಯಾನವನ ಜಾಗೆಯಲ್ಲಿ 16 ನಿವೇಶನಗಳು ರಚನೆಯಾಗಿದ್ದವು. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ರಚನೆಯಾದ ನಿವೇಶನಗಳನ್ನು ರದ್ದುಗೊಳಿಸಿದ್ದರು. ಈ ಉದ್ಯಾನವನದಲ್ಲಿ 4 ಕೊಳವೆಬಾವಿ ಕೊರೆಸಲಾಗಿದ್ದರೂ, ಉದ್ಯಾನವದ ಹಸಿರೀಕರಣಕ್ಕೆ ಬಳಕೆಯಾಗಿಲ್ಲ. ಈಗಲೂ ಉದ್ಯಾನವನ ಕುರಿತು ನಿರ್ಲಕ್ಷ್ಯ ಮುಂದುವರಿದಿದೆ.
– ಮಹ್ಮದ್ ಬುಡಾನ್, ಸ್ಥಳೀಯ ನಿವಾಸಿ